ನವದೆಹಲಿ: ಇತ್ತೀಚೆಗೆ ಅರಬ್ಬಿ ಸಮುದ್ರದಲ್ಲಿ ಕರಾವಳಿ ಕಾವಲು ಪಡೆ ಕಣ್ಣಿಗೆ ಬಿದ್ದು ನಂತರದಲ್ಲಿ ಸ್ಫೋಟಿಸಿಕೊಂಡ ಪಾಕಿಸ್ತಾನದ ದೋಣಿಯಲ್ಲಿ ಇದ್ದವರು ಶಂಕಿತ ಉಗ್ರರು ಎನ್ನುವುದನ್ನು ‘ಸಾಂದರ್ಭಿಕ ಸಾಕ್ಷ್ಯಗಳು’ ದೃಢಪಡಿಸುತ್ತವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದರು.
ದೋಣಿಯಲ್ಲಿದ್ದ ನಾಲ್ವರು ಪಾಕಿಸ್ತಾನದ ಕರಾವಳಿ ಕಾವಲು ಪಡೆ ಹಾಗೂ ಸೇನಾ ಅಧಿಕಾರಿಗಳ ಸಂಪರ್ಕದಲ್ಲಿದ್ದರು ಎಂದೂ ಅವರು ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ದೋಣಿಯಲ್ಲಿದ್ದವರು ಕಳ್ಳಸಾಗಣೆಗಾರರು ಎನ್ನುವ ವರದಿಗಳನ್ನು ಅವರು ಅಲ್ಲಗಳೆದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸದ್ಯದಲ್ಲಿಯೇ ಬಹಿರಂಗಪಡಿಸಲಾಗುತ್ತದೆ ಎಂದೂ ಪರಿಕ್ಕರ್ ಹೇಳಿದರು.
ಈ ನಾಲ್ವರು ದೋಣಿಗೆ ಬೆಂಕಿ ಹಚ್ಚಿ ಸಜೀವ ದಹನಗೊಂಡಿದ್ದನ್ನು ನೋಡಿದರೆ ಇವರು ಉಗ್ರರು ಎನ್ನುವ ಅನುಮಾನ ಹೆಚ್ಚುತ್ತದೆ ಎಂದರು. ಯಾವ ಆಧಾರದಲ್ಲಿ ಈ ಊಹೆಗೆ ಬಂದಿರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಸಾಂದರ್ಭಿಕ ಸಾಕ್ಷ್ಯವನ್ನು ನೋಡಿದರೆ ಈ ಅನುಮಾನ ಬರುತ್ತದೆ’ ಎಂದರು.
ಪರಿಕ್ಕರ್ ಹೇಳಿದ್ದು
1)ದೋಣಿಯು ಮೀನುಗಾರಿಕೆ ಪ್ರದೇಶದಲ್ಲಿ ಅಥವಾ ಕಳ್ಳಸಾಗಣೆಗಾರರು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವ ದಟ್ಟಣೆಯ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. ಯಾವ ಉದ್ದೇಶದಿಂದ ಅದು ಇಲ್ಲಿಗೆ ಬಂದಿತ್ತು ಎನ್ನುವುದು ಸ್ಪಷ್ಟವಾಗಿಲ್ಲ.
2)ದೋಣಿಯಲ್ಲಿದ್ದವರು ಅದರಲ್ಲಿದ್ದ ಸರಕನ್ನು ಸಾಗಿಸುವ ಬಗ್ಗೆ ಚರ್ಚಿಸುತ್ತಿದ್ದರು. ಅಲ್ಲದೇ ತಮ್ಮಲ್ಲಿ ಕೆಲವರ ಕುಟುಂಬದ ಬಗ್ಗೆಯೂ ಮಾತನಾಡಿಕೊಳ್ಳುತ್ತಿದ್ದರು ಎನ್ನುವುದು ಉಪಗ್ರಹ ಸಂವಹನವನ್ನು ಭೇದಿಸಿದಾಗ ತಿಳಿದುಬಂದಿದೆ.
3)ಕಳ್ಳಸಾಗಣೆಗಾರರು ಪಾಕ್ ಕರಾವಳಿ ಕಾವಲು ಪಡೆ, ಅಲ್ಲಿನ ಸರ್ಕಾರ ಅಥವಾ ಅಂತರರಾಷ್ಟ್ರೀಯ ಮಟ್ಟದ ಸಂಪರ್ಕ ಇಟ್ಟುಕೊಳ್ಳುವುದಿಲ್ಲ. ದೋಣಿಯು ಕಳ್ಳಸಾಗಣೆ ಮಾಡುತ್ತಿದ್ದುದೇ ಆಗಿದ್ದಲ್ಲಿ ಅದರಲ್ಲಿದ್ದವರು ಸರಕನ್ನು ನೀರಿಗೆ ಎಸೆದು ಶರಣಾಗುತ್ತಿದ್ದರು.
ರಾಹುಲ್ ಪ್ರತಿಕ್ರಿಯೆಗೆ ಬಿಜೆಪಿ ಆಗ್ರಹ: ಪಾಕ್ ದೋಣಿ ವಿಷಯದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ವಿಷಯದಲ್ಲಿ ತಮ್ಮ ಪಕ್ಷದ ಮುಖಂಡರನ್ನು ಬೆಂಬಲಿಸುವರೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಅದು ಆಗ್ರಹಿಸಿದೆ.
‘ಕಾಂಗ್ರೆಸ್ ಮುಖಂಡರು ಪಾಕಿಸ್ತಾನದವರಂತೆ ಮಾತನಾಡುತ್ತಿದ್ದಾರೆ. ಪಾಕ್ ದೋಣಿಯನ್ನು ತಡೆದು ಸಂಭಾವ್ಯ ದಾಳಿ ತಪ್ಪಿಸಿದ್ದಕ್ಕೆ ಇಡೀ ದೇಶ ಭದ್ರತಾ ಪಡೆಯನ್ನು ಶ್ಲಾಘಿಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಈ ಬಗ್ಗೆ ಅನುಮಾನ ಹೊಂದಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶರ್ಮ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾಕ್ ಸ್ಪಷ್ಟನೆ ಕೊಳಕು ರಾಜಕೀಯ
ದೋಣಿ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಭಾರತದ ಆರೋಪ ‘ಅತ್ಯಂತ ಕ್ಷುಲ್ಲಕ’ ಎಂದು ಪಾಕಿಸ್ತಾನ ತಿರುಗೇಟು ನೀಡಿದೆ. ನಮ್ಮ ಯಾವ ದೋಣಿಯೂ ಭಾರತದತ್ತ ತೆರಳಿಲ್ಲ. ಈ ಬಗ್ಗೆ ನಾವು ಸಮಗ್ರವಾಗಿ ಪರಿಶೀಲಿಸಿದ್ದೇವೆ ಎಂದು ಅದು ಸ್ಪಷ್ಟಪಡಿಸಿದೆ.
……………………..
‘ದೋಣಿ ಬೆಂಕಿ ಹೊತ್ತಿ ಉರಿದಿದೆಯೇ ಹೊರತು ಸ್ಫೋಟಿಸಿಲ್ಲ. ಈ ಬಗ್ಗೆ ವ್ಯತಿರಿಕ್ತ ಹೇಳಿಕೆಗಳಿವೆ’ ಎಂದು ಪಾಕ್ ಹೇಳಿದೆ. ಉಗ್ರರ ವಿಷಯದಲ್ಲಿ ಕೊಳಕು ರಾಜಕೀಯ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿರುವ ಅದು ಉಗ್ರ ಹಫೀಜ್ ಸಯೀದ್ ಮುಂದಾಳತ್ವದಲ್ಲಿ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲಲು ತಯಾರಿ ನಡೆಸುತ್ತಿದೆಯೇ?
–ಶ್ರೀಕಾಂತ್ ಶರ್ಮ
ಬಿಜೆಪಿ ಪ್ರಧಾನ ಕಾರ್ಯದರ್ಶಿ
