ಚೆನ್ನೈ: ನಿರ್ಮಾಣ ಕ್ಷೇತ್ರದ ಸಾಮಗ್ರಿಗಳನ್ನು ಸಬ್ಸಿಡಿ ದರದಲ್ಲಿ ಮಾರುವ ‘ಅಮ್ಮ ಸಿಮೆಂಟ್’ ಯೋಜನೆಗೆ ತಮಿಳುನಾಡು ಸರ್ಕಾರ ಸೋಮವಾರ ಚಾಲನೆ ನೀಡಿತು.
ಈ ಮೂಲಕ ಸರ್ಕಾರ ಮತ್ತೊಂದು ಜನಪ್ರಿಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಪ್ರಕಟಿಸಿದ್ದಂತೆ, ಖಾಸಗಿ ವಲಯದಿಂದ 2 ಲಕ್ಷ ಟನ್ ಸಿಮೆಂಟ್ ಪಡೆದು ಎಲ್ಲಾ ಕಾರ್ಪೊರೇಷನ್, ಮುನ್ಸಿಪಾಲಿಟಿ, ಇತರ ಸ್ಥಳೀಯಾಡಳಿತದ ವ್ಯಾಪ್ತಿಯಲ್ಲಿ ಪ್ರತಿ ಚೀಲಕ್ಕೆ ₨190ರಂತೆ ಮಾರಾಟ ಮಾಡಲಾಗುವುದು.
ಪ್ರತಿ ಚೀಲಕ್ಕೆ ₨360 ಮಾರುಕಟ್ಟೆ ದರವಿರುವ ಸಿಮೆಂಟ್ ಈ ಮೂಲಕ ಅರ್ಧ ದರಕ್ಕೆ ಗ್ರಾಹಕರಿಗೆ ಸಿಗಲಿದೆ.
ಈ ಹಿಂದೆ ‘ಅಮ್ಮ ಖನಿಜಯುಕ್ತ ನೀರು’, ‘ಅಮ್ಮ ಕ್ಯಾಂಟೀನ್’ ಮತ್ತು ‘ಅಮ್ಮ ಉಪ್ಪು’ ಯೋಜನೆಗಳನ್ನು ಜಾರಿಗೆ ತಂದಿದ್ದ ರಾಜ್ಯ ಸರ್ಕಾರ ತಿರುಚಿರಾಪಳ್ಳಿಯ 5 ದಾಸ್ತಾನು ಮಳಿಗೆಗಳಲ್ಲಿ ‘ಅಮ್ಮ ಸಿಮೆಂಟ್’ಗೆ ಚಾಲನೆ ನೀಡಿತು. ಇದೇ 10 ರೊಳಗೆ ರಾಜ್ಯದಾದ್ಯಂತ ಒಟ್ಟು 470 ದಾಸ್ತಾನು ಮಳಿಗೆಗಳಿಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಯೋಜನೆಯನ್ವಯ ಪ್ರತಿ 100 ಚದರ ಅಡಿಗಳಿಗೆ ಕನಿಷ್ಠ 50 ಚೀಲ ಹಾಗೂ 1500 ಚದರ ಅಡಿಗಳಿಗೆ ಗರಿಷ್ಠ 750 ಸಿಮೆಂಟ್ ಚೀಲ ಖರೀದಿಸಲು ಅವಕಾಶವಿದೆ. ಇದಕ್ಕಾಗಿ ಗ್ರಾಹಕರು ಸ್ಥಳೀಯ ಆಡಳಿತದಿಂದ ಅಂಗೀಕೃತಗೊಂಡ ಕಟ್ಟಡದ ಯೋಜನಾ ನಕ್ಷೆಯನ್ನು ಹಾಜರುಪಡಿಸಬೇಕು. ಇಂದಿರಾ ಆವಾಸ್ ಯೋಜನೆ ಅಲ್ಲದೆ ಸರ್ಕಾರದ ಸೌರಶಕ್ತಿ ಆಧಾರಿತ ಮನೆ ಕಟ್ಟಿಕೊಳ್ಳುವವರು ಮತ್ತು ಮನೆ ದುರಸ್ತಿ ಮಾಡಿಕೊಳ್ಳುವವರು 10ರಿಂದ 100 ಚೀಲ ಸಿಮೆಂಟ್ ಖರೀದಿಸಬಹುದು.