ರಾಷ್ಟ್ರೀಯ

‘ಏಷ್ಯಾದ ವರ್ಷದ ವ್ಯಕ್ತಿ’: ಪ್ರಧಾನಿ ಮೋದಿ ಆಯ್ಕೆ: ಅಭಿವೃದ್ಧಿ ಕೇಂದ್ರಿತ ನಾಯಕ

Pinterest LinkedIn Tumblr

modi

ಸಿಂಗಾಪುರ್: ಪ್ರಧಾನಿ ನರೇಂದ್ರ ಮೋದಿ ‘ಏಷ್ಯಾದ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿಂಗಾಪುರ್ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಮೋದಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎಂಬ ಹೆಸರು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ರಾರಾಜಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ದೇಶದ ಮಾದರಿ ಮುಖ್ಯಮಂತ್ರಿಯಾಗಿ ಹಲವು ಜನಪರ ಕಾರ್ಯಗಳನ್ನು ನಿರ್ವಹಿಸಿ ಗುಜರಾತ್ ರಾಜ್ಯಾದ್ಯಂತ ಜನ ಮನ್ನಣೆ ಗಳಿಸಿದ್ದರು. ಮೂರು ಬಾರಿ ಗುಜರಾತಿನ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಸಿಎಂ ಎಂಬ ಹೆಸರನ್ನು ಗಳಿಸುವಲ್ಲಿ ಮೋದಿ ಯಶಸ್ವಿಯಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಅವರ ಹೆಸರು ದೇಶದ ಉದ್ದಗಲಕ್ಕೂ ವ್ಯಾಪಿಸಿತು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಪಕ್ಷವನ್ನು ಉತ್ತುಂಗಕ್ಕೆ ಏರಿಸುವಲ್ಲಿ ಅವರ ಶ್ರಮ ಅಪಾರ. ಆದ್ದರಿಂದಲೇ ಮೋದಿ ಅವರ ಹೆಸರು ದೇಶಾದ್ಯಂತ ಸದ್ದು ಮಾಡಿದ್ದಲ್ಲದೇ ವಿದೇಶಗಳಲ್ಲೂ ರಾರಾಜಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಸಿಂಗಾಪುರ್ ದಿನ ಪತ್ರಿಕೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು  ‘ಏಷ್ಯಾದ ವರ್ಷದ ವ್ಯಕ್ತಿ’ಯಾಗಿ ಆಯ್ಕೆ ಮಾಡಿದೆ. ಅಭಿವೃದ್ಧಿ ಕೇಂದ್ರಿತ ನಾಯಕ ಎಂಬ ಹೆಸರಿನಡಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮೊದಲ ಸ್ಥಾನ ಪಡೆದುಕೊಂಡಿದ್ದು, ಅವರನ್ನು ಏಷಿಯಾದ ವರ್ಷದ ವ್ಯಕ್ತಿಯಾಗಿ ಪತ್ರಿಕೆ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾಗತೀಕ ಮಟ್ಟದಲ್ಲಿ ಭಾರತವನ್ನು ಉನ್ನತ ಮಟ್ಟಕ್ಕೆ ತಲುಪಿಸಿದ್ದಾರೆ. ಉಜ್ವಲ ಭಾರತಕ್ಕಾಗಿ ಬಲವಾದ ಜನಾದೇಶದ ಮೂಲಕ ರಾಷ್ಟ್ರ ನಿರ್ಮಿಸುವಲ್ಲಿ ಮೋದಿ ಅವರು ಯಶಸ್ವಿಯಾಗಿದ್ದಾರೆ ಎಂದು ಪತ್ರಿಕೆಯ ಸಂಪಾದಕ ವಾರೆನ್ ಫೆರ್ನಾಂಡೀಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ದೇಶ ಅಭಿವೃದ್ದಿಯಲ್ಲಿ ಮೋದಿ ಅವರ ದೂರದೃಷ್ಟಿ ಆರ್ಥಿಕ ಯೋಜನೆಗಳು ಸಹಾ ಇತರರಿಗೆ ಮಾದರಿಯಾಗುವಂತೆ ಮಾಡಿದೆ.

ಹೀಗೆ ಹತ್ತು ಹಲವು ಅಂಶಗಳ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಏಷ್ಯಾದ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಸಿಂಗಾಪುರ್ ಪತ್ರಿಕೆ ಆಯ್ಕೆ ಮಾಡಿದೆ. ಪ್ರತಿ ವರ್ಷ ನೀಡುವ ಈ ಪ್ರಶಸ್ತಿಯನ್ನು ಕಳೆದ ವರ್ಷ ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಹಾಗೂ ಜಪಾನಿನ ಪ್ರಧಾನಿ ಶಿನ್ಜೋ ಅಬೆ ಇಬ್ಬರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

Write A Comment