ರಾಷ್ಟ್ರೀಯ

ಪ್ರಾಣ ತೆಗೆದ ಫೇಸ್‌ಬುಕ್ ಫೋಟೊ ಹುಚ್ಚು

Pinterest LinkedIn Tumblr

facebook33

ಬಿಲಾಸ್‌ಪುರ(ಛತ್ತೀಸ್‌ಗಢ): ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಸಲುವಾಗಿ ನಿಂತಿದ್ದ ರೈಲಿನ ಮೇಲೆ ಹತ್ತಿ ಫೋಟೊ ತೆಗೆಸಿಕೊಳ್ಳುವ ವೇಳೆ ವಿದ್ಯುತ್ ಸ್ಪರ್ಶವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.

ವೈಶಾಲಿನಗರದ ನಿವಾಸಿ ಕೇತನ್ ಪೊದ್ದರ್ ಮೃತಪಟ್ಟ ಬಾಲಕ. ರೈಲ್ವೆ ಉದ್ಯೋಗಿಯೊಬ್ಬರ ಪುತ್ರನಾದ 9ನೇ ತರಗತಿಯ ಈತ, ಪ್ರೊಜೆಕ್ಟ್ ವರ್ಕ್ ಇದೆ ಎಂದು ಮನೆಯಲ್ಲಿ ನೆಪ ಹೇಳಿ ಸ್ನೇಹಿತರೊಂದಿಗೆ ರೈಲ್ವೆಸ್ಟೇಷನ್‌ಗೆ ಭಾನುವಾರ ಸಂಜೆ ತೆರಳಿದ್ದ.

ಸ್ನೇಹಿತರು ಮೊಬೈಲ್‌ನಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರೆ, ಈತ ಫೋಟೊ ಸಲುವಾಗಿ ಗೂಡ್ಸ್ ರೈಲಿನ ಗಾರ್ಡ್‌ರೂಂ ಮೇಲೇರಿದ್ದ. ಅಲ್ಲಿನ ವಿದ್ಯುತ್ ತಂತಿ ತಾಗಿ ಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಎಸ್ ಎಲ್ ನವರತ್ನ ತಿಳಿಸಿದ್ದಾರೆ.

ಘಟನೆಯಿಂದ ಭಯಭೀತರಾದ ಆತನ ಸ್ನೇಹಿತರು ಯಾರಿಗೂ ವಿಷಯ ತಿಳಿಸದೆ ಸ್ಥಳದಿಂದ ಓಡಿ ಹೋಗಿದ್ದರು. ರಾತ್ರಿ ಬಹುಹೊತ್ತಿನವರೆಗೆ ಕೇತನ್ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಲು ಶುರು ಮಾಡಿದರು. ಪೊಲೀಸರಿಗೂ ದೂರು ನೀಡಿದರು. ಆಗ ಕೇತನ್‌ನ ಸ್ನೇಹಿತರು ಬಾಯ್ಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್ ಈ ಹಿಂದೆ ರೈಲಿನ ಮೇಲೆ ನಿಂತು ತೆಗೆಸಿಕೊಂಡಿದ್ದ ಫೋಟೊಗೆ ಆತನ ಸ್ನೇಹಿತರು ಫೇಸ್‌ಬುಕ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಹಿಗ್ಗಿದ ಆತ ಮತ್ತೊಮ್ಮೆ ಅದೇ ರೀತಿ ಫೋಟೊ ತೆಗೆಸಿಕೊಳ್ಳಲು ತೆರಳಿದ್ದ ಎನ್ನಲಾಗಿದೆ.

Write A Comment