ರಾಷ್ಟ್ರೀಯ

ಕಪ್ಪು ಹಣದ ಬಗ್ಗೆ ಭಾರತಕ್ಕೆ ಶೇ.1ರಷ್ಟೂ ಮಾಹಿತಿ ಇಲ್ಲ: ಸ್ವಿಸ್ ಖಾತೆದಾರರ ಪಟ್ಟಿ ಬಿಡುಗಡೆ ಮಾಡಿದ ಖ್ಯಾತಿಯ ಹರ್ವ್ ಫಾಲ್ಸಿಯಾನಿ ಹೇಳಿಕೆ

Pinterest LinkedIn Tumblr

Herve-Falciani

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಕುರಿತು ಭಾರತಕ್ಕೆ ಶೇ.1ರಷ್ಟೂ ಮಾಹಿತಿ ಇಲ್ಲ ಎಂದು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿ ಬಿಡುಗಡೆ ಮಾಡಿದ ಖ್ಯಾತಿಯ ಹರ್ವ್ ಫಾಲ್ಸಿಯಾನಿ ಹೇಳಿದ್ದಾರೆ.

ಫ್ರಾನ್ಸ್‌ನ ತಮ್ಮ ನಿವಾಸದಿಂದಲೇ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿರುವ ಹರ್ವ್ ಫಾಲ್ಸಿಯಾನಿ, ‘ಕಪ್ಪು ಹಣದ ಬಗ್ಗೆ ಭಾರತಕ್ಕೆ ಹೆಚ್ಚು ಮಾಹಿತಿ ಇಲ್ಲ. ತಮಗೆ ತಿಳಿದಿರುವಂತೆ ಮತ್ತು ಮೂಲ ದಾಖಲೆಗಳ ಅನ್ವಯ ಭಾರತ ಶೇ.1ಕ್ಕಿಂತಲೂ ಕಡಿಮೆ ಮಾಹಿತಿಯನ್ನು ಹೊಂದಿದೆ ಎಂದು ಫಾಲ್ಸಿಯಾನಿ ಹೇಳಿದ್ದಾರೆ. ಅಲ್ಲದೆ ಭಾರತ ಬಯಸಿದರೆ ತಾವು ನೆರವು ನೀಡಲು ಸಿದ್ಧ’ ಅವರು ತಿಳಿಸಿದ್ದಾರೆ.

‘ತಮಗೆ ತಿಳಿದಂತೆ ಕಪ್ಪು ಹಣ ಪ್ರಕರಣದಲ್ಲಿ ಭಾರತ ಹೊಂದಿರುವ ಮಾಹಿತಿ ಅತ್ಯಂತ ಕಡಿಮೆ ಪ್ರಮಾಣದ್ದಾಗಿದ್ದು, 2011ರಲ್ಲಿ ಬಯಲಾಗಿದ್ದ ಮತ್ತು ಫ್ರಾನ್ಸ್ ಸರ್ಕಾರ ಹಂಚಿಕೊಂಡಿದ್ದ ಮಾಹಿತಿಯು ‘ಒಂದು ಗುಡ್ಡದ ತುದಿಯಲ್ಲಿನ ಸಣ್ಣ ಭಾಗವಷ್ಟೇ’. ಅದಕ್ಕಿಂತಲೂ ಸಾವಿರ ಪಟ್ಟು ಹೆಚ್ಚು ಮಾಹಿತಿ ಮತ್ತು ದಾಖಲೆಗಳು ಹಾಗೆಯೇ ಉಳಿದುಕೊಂಡಿವೆ. ಭಾರತ ಸರ್ಕಾರ ಮನವಿ ಮಾಡಿದರೆ ನಾವು ನೆರವು ನೀಡಲು ಸಿದ್ಧರಿದ್ದೇವೆ. ಪ್ರಸ್ತುತ ಈ ಬಗ್ಗೆ ನಾವು ಈಗಾಗಲೇ ಹಲವು ದೇಶಗಳಿಗೆ ನೆರವು ನೀಡುತ್ತಿದ್ದೇವೆ. ಭಾರತ ಬಯಸಿದರೆ ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.

ಜಿನಿವಾ ಮೂಲದ ಹೆಚ್‌ಬಿಸಿ ಬ್ಯಾಂಕಿನಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಫಾಲ್ಸಿಯಾನಿ ಅವರು 2011ರಲ್ಲಿ ತಮ್ಮ ನೌಕರಿಯನ್ನು ಬಿಟ್ಟು ಹೊರನಡೆದಿದ್ದರು. ಕೇವಲ ಹೊರಬಂದಿದಷ್ಟೇ ಅಲ್ಲದೆ ತಮ್ಮೊಂದಿಗೆ ಕಪ್ಪುಹಣ ಸಂಬಂಧ ಖಾತೆದಾರರ ವಿವರಗಳ ದಾಖಲೆಗಳನ್ನು ಕೂಡ ಹೊತ್ತುತಂದಿದ್ದರು. ಒಂದು ಮೂಲದ ಪ್ರಕಾರ ಸ್ವಿಸ್ ಬ್ಯಾಂಕಿನ ಇತಿಹಾಸದಲ್ಲಿಯೇ ಫಾಲ್ಸಿಯಾನಿ ಅವರು ಭಾರಿ ಪ್ರಮಾಣದಲ್ಲಿ ಖಾತೆದಾರರ ಮಾಹಿತಿಯನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿತ್ತು.

ಫಾಲ್ಸಿಯಾನಿ ಮತ್ತು ತಂಡ ಸುಮಾರು 1 ಲಕ್ಷದ 27 ಸಾವಿರ ಬ್ಯಾಂಕ್ ಖಾತೆದಾರರ ಮಾಹಿತಿಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗುತ್ತಿದ್ದು, ಈ ಪೈಕಿ 600 ಭಾರತೀಯರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಫಾಲ್ಸಿಯಾನಿ ಈ ಹಿಂದೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿದ್ದರು. ಪ್ರಸ್ತುತ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಹಲವು ದೇಶಗಳು ಇವರ ನೆರವು ಪಡೆಯುತ್ತಿವೆ. 2008ರಲ್ಲಿ ಫ್ರಾನ್ಸ್ ಸರ್ಕಾರ ಹಂಚಿಕೆ ಮಾಡಿಕೊಂಡಿದ್ದ ಖಾತೆದಾರರ ಮಾಹಿತಿಯನ್ನು ಕೂಡ ಫಾಲ್ಸಿಯಾನಿ ಅವರು ಬಹಿರಂಗಗೊಳಿಸಿದ್ದರು.

‘ಭಾರತದ ಬಳಿ ಇರುವ ಮಾಹಿತಿಯ ಸಾವಿರ ಪಟ್ಟಿಗೂ ಅಧಿಕ ಪ್ರಮಾಣದ ಮಾಹಿತಿ ಮತ್ತು ದಾಖಲೆಗಳು ತಮ್ಮ ಬಳಿ ಇದ್ದು, ಸಾವಿರಾರು ತೆರಿಗೆ ವಂಚಕ ಖಾತೆದಾರರ ಮಾಹಿತಿ ತಮ್ಮ ಬಳಿ ಇದೆ. ಹೀಗಾಗಿಯೇ ಕಪ್ಪುಹಣದ ಕುರಿತು ತನಿಖೆ ನಡೆಸುತ್ತಿರುವ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ. ಖಾಸಗಿ ಬ್ಯಾಂಕಿಂಗ್‌ನ ಹಿಂದೆಯೇ ಅದರ ಕರಾಳ ಛಾಯೆ ಇದ್ದು, ಇದರ ಪರಿಚಯ ತಮಗಿದೆ. ಹೀಗಾಗಿ ಪ್ರಸ್ತುತ ಕಪ್ಪುಹಣದ ಖಾತೆದಾರರ ಕುರಿತು ತನಿಖೆ ನಡೆಸುತ್ತಿರುವ ಭಾರತ ಸರ್ಕಾರ ತಮ್ಮನ್ನು ಸಂಪರ್ಕಿಸಿದರೆ ತಾವು ಖಂಡಿತವಾಗಿಯೂ ನೆರವು ನೀಡಲು ಸಿದ್ಧರಿದ್ದೇವೆ’ ಎಂದು ಫಾಲ್ಸಿಯಾನಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಪಕ್ಷ ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನು ವಾಪಸ್ ತರುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಕಪ್ಪು ಹಣ ಹೊಂದಿರುವ ಖಾತೆದಾರರ ಪಟ್ಟಿಯನ್ನು ಕೂಡ ಸಲ್ಲಿಕೆ ಮಾಡಿತ್ತು. ಸುಪ್ರೀಂಕೋರ್ಟ್ ಕೂಡ ಕಪ್ಪುಹಣದ ಸಂಬಂಧ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಇವಿಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಬ್ರಿಸ್‌ಬೇನ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಜಿ-20 ಶೃಂಗಸಭೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣದ ಕುರಿತಾಗಿ ವಿಶ್ವದ ವಿವಿಧ ಗಣ್ಯರ ಗಮನ ಸೆಳೆದಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.

Write A Comment