ಅಂತರಾಷ್ಟ್ರೀಯ

ರಕ್ಷಣೆ ಸಹಿತ ವಿವಿಧ ದ್ವಿಪಕ್ಷೀಯ ಒಪ್ಪಂದಗಳಿಗೆ ಮೋದಿ-ಅಬೋಟ್ ಸಹಿ

Pinterest LinkedIn Tumblr

modi

ಕ್ಯಾನ್‍ಬೆರಾ, ನ.18: ಆಸ್ಟ್ರೇಲಿಯಾ ಪ್ರವಾಸದ ಮುಕ್ತಾಯ ಹಂತದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯ ಪ್ರಧಾನಿ ಟೋನಿ ಅಬೋಟ್ ಇಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ ರಕ್ಷಣೆಯೂ ಸೇರಿದಂತೆ ಪ್ರಮುಖವಾದ ಐದು ಒಪ್ಪಂದಗಳಿಗೆ ಸಹಿ ಹಾಕಿದರು.

ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಪಟ್ಟ ಖೈದಿಗಳ ಪರಸ್ಪರ ವರ್ಗಾವಣೆ, ಎರಡು ದೇಶಗಳ ನಡುವೆ ಮಾದಕ ದ್ರವ್ಯಗಳ ವ್ಯಾಪಾರಕ್ಕೆ ತಡೆ, ಸಾಮಾಜಿಕ ಭದ್ರತೆ ಹಾಗೂ ರಕ್ಷಣಾ ವಿಭಾಗಗಗಳಲ್ಲಿ ಎರಡೂ ದೇಶಗಳ ನಾಯಕರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಇದೇ ವೇಳೆ ಉಭಯದೇಶಗಳ ಮಧ್ಯೆ ಪ್ರವಾಸೋದ್ಯಮ, ಕಲೆ ಮತ್ತು ಸಾಂಸ್ಕøತಿಕ ವಿನಿಮಯಕ್ಕೂ ಇಬ್ಬರು ನಾಯಕರು ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಖಾತೆ ಮೂಲಗಳು ತಿಳಿಸಿವೆ.

878

868

565

55

44

ಮುಖ್ಯವಾಗಿ ಆಸ್ಟ್ರೇಲಿಯಾ ಹಾಗೂ ಭಾರತಗಳ ನಡುವೆ, ವಿಶ್ವದಲ್ಲೇ ಆಸ್ಟ್ರೇಲಿಯಾಕ್ಕೆ ಸುರಕ್ಷಿತ ಪರಮಾಣು ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿಕೊಡುವ ನಾಗರಿಕ ಪರಮಾಣು ಬಳಕೆ ಬಗ್ಗೆಯೂ ವಿಸ್ತೃತ ಮಾತುಕತೆ ನಡೆಯಿತು. ಕಳೆದ ತಿಂಗಳ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಅಣು ಒಪ್ಪಂದಕ್ಕೆ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತಾಗಿ ಸಹಿ ಹಾಕಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಹಾಗೂ ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಮಾತನಾಡಿದ ಟೋನಿ ಅಬೋಟ್, ಎಲ್ಲವೂ ನಾವಂದುಕೊಂಡಂತೆಯೇ ನಡೆದರೆ, ಆಸ್ಟ್ರೇಲಿಯ ಸರ್ಕಾರ ಸೂಕ್ತ ಸುರಕ್ಷಾತ್ಮಕ ವ್ಯವಸ್ಥೆಯಡಿ ಭಾರತಕ್ಕೆ ಯುರೇನಿಯಂ ರಫ್ತು ಮಾಡಲಿದೆ ಎಂದು ಹೇಳಿದರು.

ಏಕೆಂದರೆ, ಪರಿಶುದ್ಧ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ಇಡೀ ವಿಶ್ವ ಸಮುದಾಯಕ್ಕೆ ನೀಡುವ ಮಹತ್ತರ ಕೊಡುಗೆ ಇದಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ನಂತರ ಈ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ದ್ವಿಪಕ್ಷೀಯ ಒಪ್ಪಂದವು ಉಭಯರಾಷ್ಟ್ರಗಳ ನಡುವಣ ಸ್ವಾಭಾವಿಕವಾದ ಒಪ್ಪಂದಗಳು ಎಂದು ಹೇಳಿದರು. ಇಷ್ಟೇ ಅಲ್ಲದೆ ಕೃಷಿ, ತೋಟಗಾರಿಕೆ, ಕೃಷಿ ಉತ್ಪನ್ನಗಳ ಸಂಸ್ಕರಣ, ಸಂಪನ್ಮೂಲಗಳು, ಇಂಧನ, ಹಣಕಾಸು, ಮೂಲಸೌಕರ್ಯ, ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಎರಡು ದೇಶಗಳ ಸಹಭಾಗಿತ್ವದ ಕಾರ್ಯತಂತ್ರಕ್ಕೆ ವಿಪುಲವಾದ ಅವಕಾಶಗಳಿವೆ ಎಂದು ನಂತರ ನಡೆದ ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಕಾರ್ಯತಂತ್ರ ಅಗತ್ಯ: ಮೋದಿ

ಕ್ಯಾನ್‍ಬೆರಾ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರನ್ನು ಮಟ್ಟ ಹಾಕುವ ಮೂಲಕ ಪ್ರಗತಿಗೆ ಮಾರಕವಾಗಿರುವ ಭಯೋತ್ಪಾದನೆಯ ಮೂಲೋತ್ಪಾಟನೆಗೆ ಜಾಗತಿಕವಾಗಿ ಸಮಗ್ರ ಕಾರ್ಯತಂತ್ರವೊಂದನ್ನು ರೂಪಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ಎದುರಿಸುತ್ತಿರುವ ಭಯೋತ್ಪಾದನೆಯ ಭೀಕರತೆಯನ್ನು ತೆರೆದಿಟ್ಟರು. ನಮ್ಮೆಲ್ಲರಿಗೂ ಇಂದು ಭಯೋತ್ಪಾದಕತೆ ಪ್ರಮುಖವಾದ ಗಂಡಾಂತರವಾಗಿದೆ. ಭಾರತದಲ್ಲಿ ಕಳೆದ 30 ವರ್ಷಗಳಿಂದಲೂ ಆ ಭಯೋತ್ಪಾದಕತೆಯ ನಗ್ನ ತಾಂಡವವನ್ನು ಕಣ್ಣಾರೆ ಕಾಣುತ್ತಲೇ ಇದ್ದೇವೆ. ಅದು ಯಾವ ರೂಪದಲ್ಲಿ ನಡೆಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಕಂಡಿದ್ದೇವೆ ಎಂದು ಭಯೋತ್ಪಾದನೆಯ ಕರಾಳತೆಯ ಅನಾವರಣ ಮಾಡಿದರು ಮೋದಿ.

ಆಸ್ಟ್ರೇಲಿಯಾ ಪ್ರವಾಸದ ಕಡೆಯ ಹಾಗೂ ಐದನೆ ದಿನವಾದ ಇಂದು ದೇಶದ ಸಂಸತ್‍ನಲ್ಲಿ ಮಹತ್ವದ ಭಾಷಣ ಮಾಡಿದ ಮೋದಿ, ಆಸ್ಟ್ರೇಲಿಯಾದ ಸಂಸತ್‍ನಲ್ಲಿ ಭಾಷಣ ಮಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ಸಮುದಾಯ ಎದುರಿಸುತ್ತಿರುವ ಈ ಉಗ್ರವಾದದ ಭಯಾನಕತೆಯನ್ನು ತೊಡೆದುಹಾಕಲು ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ದ್ವಿಪಕ್ಷೀಯ ಭದ್ರತಾ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಭಯೋತ್ಪಾದನೆ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನು ವಿಶ್ವದಾದ್ಯಂತ ಚಾಚುತ್ತಿದ್ದು, ದೇಶಗಳ ಆರ್ಥಿಕ ಅಭಿವೃದ್ಧಿ, ಪ್ರಗತಿಗಳ ದಿಕ್ಕನ್ನೇ ಬದಲಿಸುತ್ತಿದೆ ಎಂದು ವಿಷಾದಿಸಿದರು. ಈ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ-ಆಸ್ಟ್ರೇಲಿಯಾ ಪರಸ್ಪರ ಸಹಕಾರದಿಂದ ಮುಂದುವರೆಯಲು ದ್ವಿಪಕ್ಷೀಯ ಸಹಕಾರ ಸ್ಥಾಪಿಸಿರುವುದು, ಆತಂಕವಾದದ ಜೊತೆ ಇತರ ಸವಾಲುಗಳನ್ನು ಎದುರಿಸುವುದರಲ್ಲೂ ನಮ್ಮ ಬಲ ಸಾವಿರ ಪಟ್ಟು ಹೆಚ್ಚಿದೆ ಎಂದು ಮೋದಿ ಬಣ್ಣಿಸಿದರು.

ಉಭಯರಾಷ್ಟ್ರಗಳೂ ಮಾಡಿಕೊಂಡಿರುವ ಈ ರಕ್ಷಣಾ ವಿಭಾಗದ ಒಪ್ಪಂದವನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದರು. ಈ ರಕ್ಷಣಾ ಸಹಕಾರವು ಸೂಕ್ತ ಕಾರ್ಯಯೋಜನೆಯ ಮೂಲಕ ಅನುಷ್ಠಾನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಉಭಯ ರಾಷ್ಟ್ರಗಳ ಪ್ರಧಾನಿಗಳು ಭೇಟಿ ಮಾಡಿ ಚರ್ಚಿಸಬೇಕು ಎಂಬ ಅಂಶವನ್ನೂ ಈ ಒಪ್ಪಂದ ಒಳಗೊಂಡಿದೆ.

ಎರಡೂ ದೃಷ್ಟಿಕೋನ ಒಂದೇ:

ಆಸ್ಟ್ರೇಲಿಯಾ ಕೂಡ ಭಾರತದ ದೃಷ್ಟಿಕೋನದ ಪರಿಧಿಯಲ್ಲೇ ಇದ್ದು, ಜಾಗತಿಕ ಭಯೋತ್ಪಾದನೆ ಹಾಗೂ ಆರ್ಥಿಕ ಪ್ರಗತಿ ಕುರಿತ ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ ಎಂದು ಮೋದಿ ಹೇಳಿದರು. ಎರಡೂ ದೇಶಗಳ ಆಲೋಚನಾ ಲಹರಿ ಮತ್ತು ಆಲೋಚನೆಗಳ ಕೇಂದ್ರ ಬಿಂದು ಒಂದೇ ರೀತಿ ಇವೆ. ಭಾರತದ 4.5 ಲಕ್ಷ ಪ್ರಜೆಗಳು ಇಂದು ಇಲ್ಲಿನ ನಿವಾಸಿಗಳಾಗಿದ್ದಾರೆ ಎಂದರು. ಕ್ರಿಕೆಟ್ ಕ್ಷೇತ್ರದಲ್ಲಿ ನಾವು ಬ್ರೆಟ್‍ಲೀ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರನ್ನೂ ಒಟ್ಟೊಟ್ಟಿಗೇ ನೆನಪಿಸಿಕೊಳ್ಳೂತ್ತೇವೆ ಎಂದು ಅವರು ನುಡಿದರು. ಕಳೆದ 28 ವರ್ಷಗಳ ಅವಧಿಯಲ್ಲಿ ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದ್ದು 1986ರಲ್ಲಿ ಅಂದಿನ ಪ್ರಧಾನಿ ರಾಜೀವ್‍ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

Write A Comment