ರಾಷ್ಟ್ರೀಯ

ಸಂತಾನ ಹರಣ ಶಸ್ತ್ರಕ್ರಿಯೆ ದುರಂತ: ಔಷಧದಲ್ಲಿ ಇಲಿ ಪಾಷಾಣದ ಅಂಶ ಪತ್ತೆ: ಬಿಲಾಸ್‌ಪುರ ಜಿಲ್ಲಾಧಿಕಾರಿ ಸಿದ್ಧಾರ್ಥ ಪ್ರದೇಶಿ ಅವರಿಂದ ಮಾಹಿತಿ

Pinterest LinkedIn Tumblr

sterlisition

ಬಿಲಾಸ್‌ಪುರ: ಛತ್ತೀಸ್‌ಗಡದಲ್ಲಿ ನಡೆದಿದ್ದ ಸಂತಾನ ಹರಣ ಶಸ್ತ್ರಕ್ರಿಯೆ ಸಾವು ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು, ಮಹಿಳೆಯರಿಗೆ ನೀಡಲಾಗಿದ್ದ ಔಷಧಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸಲಾಗುವ ಜಿಂಕ್ ಪಾಸ್ಫೇಟ್ ಎಂಬ ವಿಷಕಾರಿ ರಾಸಾಯನಿಕವು ಮಹಿಳೆಯರಿಗೆ ನೀಡಲಾಗಿದ್ದ ಔಷಧಿಗಳಲ್ಲಿ ಪತ್ತೆಯಾಗಿದ್ದು, ಇದೇ ಮಹಿಳೆಯರ ಸಾವಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದು, ಘಟನೆ ಕುರಿತಂತೆ ಮತ್ತಷ್ಟು ಮಾಹಿತಿಗಳ ಹೊರ ಬರಬೇಕಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಲಾಸ್‌ಪುರ ಜಿಲ್ಲಾಧಿಕಾರಿ ಸಿದ್ಧಾರ್ಥ ಪ್ರದೇಶಿ ಅವರು, ಔಷಧಿಗಳಲ್ಲಿ ಇಲಿ ಪಾಷಾಣದತಂಹ ರಾಸಾಯನಿಕ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಇದರಿಂದಾಗಿಯೇ ಮಹಿಳೆಯರ ಸಾವು ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಮಹಿಳೆಯರಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿರುವ ಎಲ್ಲ ರೀತಿಯ ಔಷಧಿಗಳ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದಾಗಿನಿಂದಲೂ ಈ ಹಿಂದೆ ಸಂತಾನಹರಣ ಶಸ್ತ್ರಕ್ರಿಯೆ ಮಾಡಿಸಿಕೊಂಡಿದ್ದ ನೂರಾರು ಮಹಿಳೆಯರು ಆಸ್ಪತ್ರೆಯತ್ತ ಧಾವಿಸುತ್ತಿದ್ದು, ಪರೀಕ್ಷೆಗೆ ಒಳಪಡುತ್ತಿದ್ದಾರೆ. ಆದರೆ ಈ ಪೈಕಿ ಕೆಲ ಮಹಿಳೆಯರು ಇತ್ತೀಚೆಗೆ ನಡೆದ ಶಸ್ತ್ರಕ್ರಿಯಾ ಶಿಬಿರದಲ್ಲಿ ಭಾಗಿಯಾಗಿದ್ದವರಾಗಿದ್ದು, ಇವರ ದೇಹದಲ್ಲಿಯೂ ಕೂಡ ಇಲಿ ಪಾಷಾಣದ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದು ಮೂಲದ ಪ್ರಕಾರ ಇಡೀ ಶಿಬಿರಕ್ಕೆ ಔಷಧಿಗಳನ್ನು ರವಾನಿಸುತ್ತಿದ್ದ ಮಹಾವರ್ ಫಾರ್ಮಾಸ್ಯುಟಿಕಲ್ ಕಾರ್ಖಾನೆಯ ಪಕ್ಕದಲ್ಲಿಯೇ ಈ ಇಲಿ ಪಾಷಾಣದ ರಾಸಾಯನಿಕ ಮಿಶ್ರಣ ಜಿಂಕ್ ಪಾಸ್ಫೇಟ್ ಹೆಚ್ಚಾಗಿ ಪತ್ತೆಯಾಗಿದ್ದು, ಇದರಿಂದೇನಾದರೂ ಔಷಧಿಗಳು ವಿಷಯುಕ್ತವಾಗಿರಬಹುದೇ ಎಂದು ಶಂಕಿಸಲಾಗಿದೆ.

ಪ್ರಸ್ತುತ ಮಹಾವರ್ ಔಷಧ ಕಾರ್ಖಾನೆಯಿಂದ ಸಿಪ್ರೋಸಿನ್ 500 ಎಂಬ 2 ಲಕ್ಷ ಮಾತ್ರೆಗಳನ್ನು ಮತ್ತು 4 ಮಿಲಿಯನ್ ಬೇರೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಪ್ರದೇಶಿ ಅವರು ಪ್ರಕರಣದ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆಯುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲ ಮಹಿಳೆಯರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವಂತೆ ವೈದ್ಯರಿಗೆ ಆದೇಶಿಸಿದ್ದಾರೆ.

ಕಳೆದ ವಾರ ಛತ್ತೀಸ್‌ಗಡ ಸರ್ಕಾರ ಆಯೋಜನೆ ಮಾಡಿದ್ದ ಸಂತಾನ ಹರಣ ಶಸ್ತ್ರಕ್ತಿಯಾ ಶಿಬಿರದಲ್ಲಿ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಮಹಿಳೆಯರ ಪೈಕಿ 12 ಮಂದಿ ಮಹಿಳೆಯರು ಸಾವಿಗೀಡಾಗಿದ್ದರು.

Write A Comment