ರಾಷ್ಟ್ರೀಯ

ನಕಲಿ ಅಂಕಪಟ್ಟಿ ಸೃಷ್ಟಿ: ಶಿಕ್ಷಣ ಖಾತೆಯ ಕಿರಿಯ ಸಚಿವರ ವಿರುದ್ಧ ಆರೋಪ

Pinterest LinkedIn Tumblr

Ram_Shankar_Katheria

ನವದೆಹಲಿ: ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟಕ್ಕೆ ಶಿಕ್ಷಣ ಖಾತೆಯ ಕಿರಿಯ ಸಚಿವರಾಗಿ ಸೇರ್ಪಡೆಯಾದ ಪ್ರೊ. ಆರ್. ಎಸ್ ಖತೇರಿಯಾ ವಿರುದ್ದ ನಕಲಿ ಅಂಕಪಟ್ಟಿ ಸೃಷ್ಟಿಸಿದ ಆರೋಪ ಕೇಳಿ ಬಂದಿದೆ.

ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರ ಕೆಲಸ ಪಡೆಯಲು ಖಟೇರಿಯಾ ತಮ್ಮ ಎರಡು ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಿದ್ದರು. ದ್ವಿತೀಯ ವರ್ಷ ಪದವಿ ಓದುತ್ತಿದ್ದಾಗ ಹಿಂದಿ ಮತ್ತು ಇಂಗ್ಲಿಷ್ ವಿಷಯದಲ್ಲಿ ಕ್ರಮವಾಗಿ 43 ಮತ್ತು 42 ಅಂಕಗಳನ್ನು ಗಳಿಸಿದ್ದರು. ಆದರೆ ಅದನ್ನು ಖತೇರಿಯಾ ಅವರು ಹಿಂದಿಯಲ್ಲಿ 53 ಮತ್ತು ಇಂಗ್ಲಿಷ್‌ನಲ್ಲಿ 52 ಅಂಕ ಎಂದು ತಿದ್ದಿದ್ದರು.

ಇದು ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ಪರೀಕ್ಷೆಯಲ್ಲಿ ಪ್ರಿನ್ಸಿಪಲ್ಸ್ ಆಫ್ ಲಿಟರರೀ ರೈಟಿಂಗ್ ನಲ್ಲಿ 38 ಅಂಕಗಳನ್ನು ಗಳಿಸಿಕೊಂಡಿದ್ದರು. ನಂತರ ಅದನ್ನು ತಿದ್ದಿ 72 ಅಂಕ ಎಂದು ತಿದ್ದುಪಡಿ ಮಾಡಿದ್ದರು ಎನ್ನಲಾಗುತ್ತದೆ.

ಈ ಕಿತಾಪತಿ ಬಗ್ಗೆ 2009ರ ಚುನಾವಣೆಯಲ್ಲಿ ಖತೇರಿಯಾ ಅವರಿಂದ ಸೋಲನುಭವಿಸಿದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೇಸು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖತೇರಿಯಾ ಅವರು, ಇದು ರಾಜಕೀಯ ವೈಷಮ್ಯ. ಈ ಬಗ್ಗೆ ಉತ್ತರ ಪ್ರದೇಶದ ಸರ್ಕಾರ ತನಿಖೆ ನಡೆಸಿ ನನಗೆ ಕ್ಲೀನ್‌ಚಿಟ್ ನೀಡಿದೆ ಎಂದಿದ್ದಾರೆ.

ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಮೋಸ ಮಾಡಿದ್ದಾಕ್ಕಾಗಿ ಖತೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ  ಸೆಕ್ಷನ್ 420ರಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಖತೇರಿಯಾ ಏಳು ವರ್ಷಗಳ ಜೈಲು ವಾಸ, ಪದತ್ಯಾಗ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧವನ್ನು ಅನುಭವಿಸಬೇಕಾಗುತ್ತದೆ.

ಪದತ್ಯಾಗ ಮಾಡುವೆ: ತನ್ನ ವಿರುದ್ಧವಿರುವ ಆರೋಪ ಸಾಬೀತಾದರೆ ನಾನು ನನ್ನ ಹುದ್ದೆ ತ್ಯಜಿಸುವುದಾಗಿ ಸಚಿವ ಖತೇರಿಯಾ ಹೇಳಿಕೆ ನೀಡಿದ್ದಾರೆ.

Write A Comment