ರಾಷ್ಟ್ರೀಯ

ಮೋದಿ ‘ಕಿಂದರ ಜೋಗಿ’ ಎಂದ ಕಾಂಗ್ರೆಸ್

Pinterest LinkedIn Tumblr

Digvijay_Singh_PTI

ನವದೆಹಲಿ: ಹೊಸದಾಗಿ ಸಂಪುಟ ಸೇರ್ಪಡೆಯಾಗಿರುವ ಮಾನವ ಸಂಪನ್ಮೂಲ ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ತಮ್ಮ ಪದವಿ ಪೂರ್ವ ಅಂಕಪಟ್ಟಿಯನ್ನು ತಿದ್ದಿರುವ ವಿವಾದದ ಬಗ್ಗೆ ಕಾಂಗ್ರೆಸ್ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದೆ.

ಮೋದಿಯವರನ್ನು “ತಾವು ಮಾಡದ ಕೆಲಸಗಳಿಗೂ ಕೀರ್ತಿ ತೆಗೆದುಕೊಳ್ಳುವ ಭಾರತೀಯ ಕಿಂದರಜೋಗಿ” ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕುಹಕವಾಡಿದ್ದಾರೆ.

“ಮೊದಲಿಗೆ ಮಾನವ ಸಮನ್ಮೂಲ ಸಚಿವೆ ಮತ್ತು ಈಗ ಮಾನವ ಸಂಪನ್ಮೂಲ ರಾಜ್ಯ ಸಚಿವ ನಕಲಿ ಅಂಕಪಟ್ಟಿ ನೀಡಿದ್ದಾರೆ. ಅದರ ಮೇಲೆ ಆರ್ ಎಸ್ ಎಸ್ ಭಾರತದ ಇತಿಹಾಸದ ಪಠ್ಯಪುಸ್ತಕಗಳನ್ನು ಬದಲಾಯಿಸಬೇಕು ಎನ್ನುತ್ತದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

“ದೇಶಕ್ಕೆ ಬಿಜೆಪಿ ಕೊಡುಗೆ: ಮೊದಲು ಶಿಕ್ಷಣ ಸಚಿವರು ತಪ್ಪು ಪ್ರಮಾಣಪತ್ರ ಸಲ್ಲಿಸಿದ್ದಾರೆ: ರಾಜ್ಯ ಸಚಿವರು ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ! #ಸ್ವಚ್ಛ ರಾಜಕೀಯ” ಎಂದು ಎ ಐ ಸಿ ಸಿ ಸಂವಹನ ವಿಭಾಗದ ಅಧ್ಯಕ್ಷ ಅಜಯ್ ಮಾಕೆನ್ ಟ್ವೀಟ್ ಮಾಡಿದ್ದಾರೆ.

ಕಥೇರಿಯ ಅವರ ಅಂಕಪಟ್ಟಿ ತಿದ್ದಿದ ಪ್ರಕರಣ ಮತ್ತು ಮಾನ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಮ್ಮ ಪದವಿಗೆ ಸಂಬಂಧಿಸದಂತೆ ಸೃಷ್ಟಿಯಾಗಿದ್ದ ವಿವಾದದ ಮೇಲೆ ಮೇಲಿನ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಇರಾನಿ ಅವರು ಚುನಾವಣಾ ಆಯೋಗಕ್ಕೆ ತಮ್ಮ ಶಿಕ್ಷಣ ಪದವಿಯ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದರು ಎಂದು ಆಪಾದಿಸಲಾಗಿದೆ.

ಭಾನುವಾರವಷ್ಟೇ ಕೇಂದ್ರ ಸಂಪುಟ ರಾಜ್ಯ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕಥೇರಿಯಾ ಅವರು ತಮ್ಮ ಪದವಿಯ ಅಂಕಪಟ್ಟಿ ತಿದ್ದಿದ್ದಾರೆ ಎಂಬ ದಟ್ಟ ವಿವಾದದಲ್ಲಿ ಸಿಲುಕಿದ್ದಾರೆ. ಇದು ರಾಜಕೀಯ ಪಿತೂರಿ ಎಂದು ಸಚಿವರು ಅಲ್ಲಗೆಳೆದಿದ್ದಾರೆ.

ಎಂಐಎಂ ಬೆಂಬಲ ತೆಗೆದುಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ಕ್ರಮವನ್ನು ಟೀಕಿಸಿರುವ ದಿಗ್ವಿಜಯ್ ಸಿಂಗ್ ಎಂಐಎಂ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಲಾಭ ಪಡೆದುಕೊಳ್ಳುತ್ತದೆ ಎಂದಿದ್ದಾರೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಿನ ತೀವ್ರಗಾಮಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದಿದ್ದಾರೆ.

ಮಾಜ್ಲಿಸ್ ಈ ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ನ ಇಬ್ಬರು ಶಾಸಕರು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ವೇಳೆ ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ಮತ ಹಾಕುವುದರಿಂದ ದೂರವುಳಿದಿದ್ದರು.

ತಾನು ಮಾಡದ ಕೆಲಸಗಳಿಗೂ ಕೀರ್ತಿ ತೆಗೆದುಕೊಳ್ಳುತ್ತಿದ್ದಾರೆ ಪ್ರಧಾನಿ ಮೋದಿ ಎಂದ ಅವರು “ಮೋದಿ ಒಳ್ಳೆಯ ಮಾತುಗಾರ ಮತ್ತು ಅವರಲ್ಲಿ ಒಳ್ಳೆಯ ಮಾರಾಟಗಾರನ ಗುಣಗಳಿವೆ ಆದರೆ ಅವರು ಎರಡು ನಾಲಿಗೆಯ ಮನುಷ್ಯ. ಭಾರತೀಯ ಕಿಂದರಜೋಗಿ?” ಎಂದು ಟ್ವೀಟ್ ಮಾಡಿದ್ದಾರೆ.

Write A Comment