
ಅಹಮದಾಬಾದ್: ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಗುಜರಾತ್ ರಾಜ್ಯದಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿದೆ.
‘ಮತದಾನ ಮಾಡಿ ಇಲ್ಲದಿದ್ದರೆ ದಂಡ ಕಟ್ಟಿ’ ಎಂದು ಗುಜರಾತ್ ಸರ್ಕಾರ ತನ್ನ ಪ್ರಜೆಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದೆ. ಇದೇನೂ ಗುಜರಾತ್ ಸರ್ಕಾರದ ಗೂಂಡಾಗಿರಿಯಲ್ಲ. ಬದಲಿಗೆ ರಾಜ್ಯದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್‌ನಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿದ್ದು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದವರಿಗೆ ದಂಡ ಹಾಕಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. 2009ರ ಕಾನೂನು ಕಾಯ್ದೆಗೆ ಗುಜರಾತ್ ಸರ್ಕಾರ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಮತದಾವನ್ನು ಕಡ್ಡಾಯ ಮಾಡಿದೆ. ಈ ತಿದ್ದುಪಡಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಗುಜರಾತ್‌ನಲ್ಲಿ ಮತದಾನ ಆಯ್ಕೆ ಪ್ರಕ್ರಿಯೆಯಾಗಿರುವುದಿಲ್ಲ. ಬದಲಿಗೆ ಕಡ್ಡಾಯ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ಇದೇ ಮಸೂದೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಕೂಡ ನೀಡಲಾಗಿದೆ.
ಈ ನೂತನ ಕಾಯ್ದೆಯ ಅನ್ವಯ ಇನ್ನು ಮುಂದೆ ಗುಜರಾತಿನಲ್ಲಿ ಮತದಾನ ಮಾಡದ ವ್ಯಕ್ತಿಯನ್ನು ಕರ್ತವ್ಯ ಲೋಪ ಅಥವಾ ಕರ್ತವ್ಯ ಭ್ರಷ್ಟನೆಂದು ಮುದ್ರೆ ಒತ್ತಿ ಆತನಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತದೆಯಂತೆ. ಒಂದು ವೇಳೆ ವ್ಯಕ್ತಿಯು ತಾನು ಮತದಾನ ಮಾಡದಿರಲು ಕಾರಣವಾದ ಪರಿಸ್ಥಿತಿ ಅಥವಾ ಸಂದರ್ಭವನ್ನು ನೀಡದ ಹೊರತು ಆತನಿಗೆ ದಂಡ ಹಾಕಲಾಗುತ್ತದೆಯಂತೆ. ಇವಿಷ್ಟೇ ಅಲ್ಲದೆ ಬೇಕೆಂದೇ ಮತದಾನ ಪ್ರಕ್ರಿಯೆಯಲ್ಲಿ ವ್ಯಕ್ತಿ ಪಾಲ್ಗೊಂಡಿಲ್ಲ ಎಂದು ಸಾಬೀತಾದರೆ ಸರ್ಕಾರದ ವತಿಯಿಂದ ಆತನ ಮನೆಗೆ ನೀಡಲಾಗುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಕಟ್ ಮಾಡಲು ಕೂಡ ಗುಜರಾತ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ. ಪ್ರಸ್ತುತ ಈ ವಿಚಾರವಾಗಿ ಗುಜರಾತ್ ಅಧಿಕಾರಿಗಳು ಕಾನೂನು ತಜ್ಞರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದು, ಶೀಘದಲ್ಲಿಯೇ ಈ ನಿರ್ಭಂಧವನ್ನು ಕೂಡ ಕಾಯ್ದೆಯಲ್ಲಿ ಸೇರಿಸುವ ಸಾಧ್ಯತೆ ಇದೆ.
2009ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಈ ಕಾಯ್ದೆಯನ್ನು ಅನುಮೋದನೆಗಾಗಿ ಆಗಿನ ಗವರ್ನರ್ ಕಮ್ಲಾ ಬೇನಿವಾಲ್ ಅವರಿಗೆ ರವಾನಿಸಿದ್ದರು. ಆದರೆ ಈ ಕಾಯ್ದೆ ಸಂವಿಧಾನಕ್ಕೆ ವಿರೋಧವಾಗಿದ್ದು, ಇದಕ್ಕೆ ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಕಾಯ್ದೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. 2011ರಲ್ಲಿ ಮತ್ತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿ, ಮತ್ತೆ ಇದೇ ಕಾಯ್ದೆಯನ್ನು ಯಾವುದೇ ತಿದ್ದುಪಡಿ ಇಲ್ಲದೆ ರಾಜ್ಯಪಾಲರಿಗೆ ರವಾನಿಸಿದ್ದರು. ಆಗಲೂ ಕೂಡ ರಾಜ್ಯಪಾಲರು ಈ ಹಿಂದಿನಂತೆಯೇ ಮಸೂದೆಯನ್ನು ವಾಪಸ್ ಕಳುಹಿಸಿದ್ದರು.
ಇದೀಗ ಗುಜರಾತ್ ಸರ್ಕಾರ ಕೆಲ ತಿದ್ದುಪಡಿಗಳೊಂದಿಗೆ ಇದೇ ಮಸೂದೆಯನ್ನು ನೂತನ ರಾಜ್ಯಪಾಲರಾದ ಒಪಿ ಕೊಹ್ಲಿ ಅವರ ಬಳಿ ರವಾನಿಸಿದ್ದು, ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಹೀಗಾಗಿ ಈ ನೂತನ ಕಾಯ್ದೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಾರಿಗೆ ಬರಲಿದೆ. 2015ರ ಅಕ್ಟೋಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಇದ್ದು, ಈ ಚುನಾವಣೆಯಲ್ಲಿ ಪರೀಕ್ಷಾರ್ಥವಾಗಿ ಈ ಕಾಯ್ದೆಯನ್ನು ಹೇರಲಾಗುತ್ತಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಮುಂಬರುವ ಎಲ್ಲ ರೀತಿಯ ಚುನಾವಣೆಗಳಲ್ಲೂ ಇದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
ಒಟ್ಟಾರೆ ದೇಶದ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಗುಜರಾತ್ ರಾಜ್ಯದಲ್ಲಿ ಮತದಾನವನ್ನು ಕಡ್ಡಾಯ ಮಾಡಲಾಗುತ್ತಿದೆ. ಮತದಾನವನ್ನು ಪ್ರೋತ್ಸಾಹಿಸುವ ಮತ್ತು ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರದ ಈ ದಿಟ್ಟ ನಡೆ ನಿಜಕ್ಕೂ ಶ್ಲಾಘನೀಯ. ಭವಿಷ್ಯದಲ್ಲಿ ಈ ಕಾನೂನನ್ನು ಎಲ್ಲ ರಾಜ್ಯಗಳಲ್ಲಿಯೂ ಅಳವಡಿಸಿದರೆ ಉತ್ತಮವೇನೋ…