ರಾಷ್ಟ್ರೀಯ

ಪ್ರಧಾನಿ ಮೋದಿ ಸಂಪುಟದಲ್ಲಿ ಆರೆಸ್ಸೆಸ್‌ನ ದಟ್ಟ ಪ್ರಭಾವ

Pinterest LinkedIn Tumblr

modhi-cabinetಹೊಸದಿಲ್ಲಿ, ನ.9: ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ರವಿವಾರ ಸೇರ್ಪಡೆಯಾಗಿರುವ 21 ಸಚಿವರು ಬೇರೆಬೇರೆ ಹಿನ್ನೆಲೆಗಳಿಂದ ಬಂದಿದ್ದರೂ ಆರೆಸ್ಸೆಸ್‌ನ ದಟ್ಟ ಪ್ರಭಾವ ಎದ್ದು ಕಾಣುತ್ತಿದೆ.ಸಂಪುಟ ದರ್ಜೆ ಸಚಿವರಾಗಿರುವ ಮನೋಹರ್ ಪಾರಿಕ್ಕರ್ ಮತ್ತು ಜೆ.ಪಿ.ನಡ್ಡಾ ಅವರು ಆರೆಸ್ಸೆಸ್ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರು.ಹೊಸ ಸಚಿವರಲ್ಲಿ ಇಬ್ಬರು ಐಐಟಿ ಪದವೀಧರರು, ಒಬ್ಬರು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರು, ಬಾಲಿವುಡ್ ಗಾಯಕರೊಬ್ಬರಿದ್ದಾರೆ.
ಈಗ ಸಚಿವರಾಗಿರುವ ಪಂಜಾಬ್‌ನ ಬಿಜೆಪಿ ಸಂಸದ ವಿಜಯ್ ಸಂಪ್ಲಾ ಒಂದು ಕಾಲದಲ್ಲಿ ಪಂಬ್ಲರ್ ಆಗಿ ಕೆಲಸ ಮಾಡಿದವರು. ತೆಲುಗುದೇಶಂ ರಾಜ್ಯಸಭಾ ಸದಸ್ಯರಾಗಿದ್ದು, ಈಗ ಸಹಾಯಕ ಸಚಿವರಾಗಿರುವ ವೈ.ಎಸ್.ಚೌಧರಿ ಆಂಧ್ರ ಪ್ರದೇಶದಲ್ಲಿ ಖ್ಯಾತ ಉದ್ಯಮಿ. ಅವರ ಉದ್ಯಮ ಸಮೂಹದ ಆಸ್ತಿಪಾಸ್ತಿಗಳ ವೌಲ್ಯವೇ 190 ಕೋಟಿ ರೂಪಾಯಿ ಮೀರುತ್ತದೆ ಎನ್ನಲಾಗಿದೆ.
ಹರ್ಯಾಣದ ಪ್ರಭಾವಿ ಜಾಟ್ ನಾಯಕ ಬೀರೇಂದ್ರ ಸಿಂಗ್ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದವರು. ಹರ್ಯಾಣ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮನೋಹರ್ ಪಾರಿಕ್ಕರ್ ಅವರು ಐಐಟಿ ಮುಂಬೈನ ಪದವೀಧರರು. ದಕ್ಷ ಆಡಳಿತಗಾರ ಎಂಬ ಖ್ಯಾತಿ ಅವರದು. ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಪುತ್ರ ಜಯಂತ್ ಸಿನ್ಹಾ ಕೂಡ ಐಐಟಿ (ದಿಲ್ಲಿ) ಪದವೀಧರರು. ಅಲ್ಲದೆ ಅಮೆರಿಕಾದ ಹಾರ್ವರ್ಡ್ ವಿವಿಯಲ್ಲೂ ಅವರು ಶಿಕ್ಷಣ ಪಡೆದಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಕೇಂದ್ರದಲ್ಲಿ ಮೂವರು ಸಚಿವರು ಲಭಿಸಿದ್ದಾರೆ. ರಾಜೀವ್ ಪ್ರತಾಪ್ ರೂಡಿ ಜೊತೆಗೆ ಪ್ರಭಾವಿ ಭೂಮಿಹಾರ್ ಸಮುದಾಯದ ಗಿರಿರಾಜ್ ಸಿಂಗ್ ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿದ ರಾಂ ಕೃಪಾಲ್ ಯಾದವ್ ಸಂಪುಟದಲ್ಲಿದ್ದಾರೆ. ಇವರಲ್ಲಿ ಯಾದವ್ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿಯಿಂದ ಬಿಜೆಪಿಗೆ ವಲಸೆ ಬಂದವರಾಗಿದ್ದಾರೆ.
ಒಲಿಂಪಿಕ್ಸ್ ಶೂಟರ್ ರಾಜ್ಯವರ್ಧನ್ ಸಿಂಗ್, ಗಾಯಕ ಬಬುಲ್ ಸುಪ್ರೀಯೊ ಅವರು ಮೋದಿ ಸಂಪುಟದೊಳಗೆ ಬಂದಿದ್ದಾರೆ. ಪಶ್ಚಿಮ ಬಂಗಾಳದಿಂದ ಇದೇ ಮೊದಲ ಬಾರಿಗೆ ಇಬ್ಬರು ಬಿಜೆಪಿ ಸಂಸದರು ಗೆದ್ದಿದ್ದಾರೆ. ಪ್ರಥಮ ಬಾರಿಗೆ ಸಂಸತ್ತಿಗೆ ಪ್ರವೇಶಿಸಿರುವ ಸುಪ್ರೀಯೊ ಆ ಇಬ್ಬರು ಸಂಸದರಲ್ಲಿ ಒಬ್ಬರಾಗಿದ್ದಾರೆ.

ಮೋದಿ ಸಂಪುಟದಲ್ಲಿ ಒಲಿಂಪಿಯನ್, ಹಾರ್ವರ್ಡ್ ವಿದ್ಯಾರ್ಥಿ, ಪ್ಲಂಬರ್, ಗಾಯಕ
ಹೊಸದಿಲ್ಲಿ, ನ.9: ಮೇ ತಿಂಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ನಡೆಸಿ 21 ನೂತನ ಸಚಿವರನ್ನು ಸೇರಿಸಿಕೊಂಡಿದೆ.
ಇಂದಿನ ವಿಸ್ತರಣೆಯಲ್ಲಿ ಮಹತ್ವದ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಸರಕಾರಕ್ಕೆ ತರಲಾಗಿದೆ.

ನೂತನ ಸಂಪುಟದ 10 ಆಸಕ್ತಿದಾಯಕ ಅಂಶಗಳು ಇಲ್ಲಿವೆ:
1. ಇಬ್ಬರು ಸಚಿವರು ಐಐಟಿ ಪದವಿ ೀಧರರು. ಮನೋಹರ್ ಪಾರಿಕ್ಕರ್ ಐಐಟಿ-ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರೆ, ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಪುತ್ರ ಜಯಂತ್ ಸಿನ್ಹಾ ಐಐಟಿ-ದಿಲ್ಲಿಯ ಹಳೆ ವಿದ್ಯಾರ್ಥಿ.
2. ಹೂಡಿಕೆ ನಿಧಿ ನಿರ್ವಾಹಕ ಹಾಗೂ ಆಡಳಿತ ಸಲಹಾಕಾರ ಜಯಂತ್ ಸಿನ್ಹಾ ಹಾರ್ವರ್ಡ್ ಬಿಝ್ನೆಸ್ ಸ್ಕೂಲ್‌ಗೂ ಹೋಗಿದ್ದಾರೆ. ಈ ವರ್ಷ ಸಂಸದನಾಗಿ ಮೊದಲ ಬಾರಿಗೆ ಆಯ್ಕೆಗೊಳ್ಳುವ ಮೊದಲು ಅವರು 25 ವರ್ಷಗಳ ಕಾಲ ವಾಣಿಜ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
3. ನೂತನ ಸಚಿವರ ಪೈಕಿ ಇಬ್ಬರು ಈ ವರ್ಷ ಬಿಜೆಪಿಗೆ ಸೇರಿದವರಿದ್ದಾರೆ- ಬೀರೇಂದ್ರ ಸಿಂಗ್ ಮತ್ತು ರಾಮ್ ಕೃಪಾಲ್ ಯಾದವ್. ನಲ್ವತ್ತು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದ ಬೀರೇಂದ್ರ ಸಿಂಗ್ ಆಗಸ್ಟ್‌ನಲ್ಲಿ ಬಿಜೆಪಿ ಸೇರಿದ್ದರು.
4. ಲಾಲು ಪ್ರಸಾದ್ ಯಾದವ್‌ರ ಆರ್‌ಜೆಡಿಯ ಮಾಜಿ ನಾಯಕ ರಾಮ್ ಕೃಪಾಲ್ ಯಾದವ್ ಲಾಲು ಪ್ರಸಾದ್ ಪುತ್ರಿ ಮಿಸಾ ಭಾರತಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದರು. ಅದಕ್ಕೆ ಇಂದು ಅವರಿಗೆ ಪ್ರತಿಫಲ ನೀಡಲಾಗಿದೆ. ಲಾಲು ಪ್ರಸಾದ್‌ರ ಅತ್ಯಂತ ನಂಬಿಕಸ್ತ ಬಂಟರ ಪೈಕಿ ರಾಮ್ ಕೃಪಾಲ್ ಒಬ್ಬರಾಗಿದ್ದರು. ಚುನಾವಣೆಯಲ್ಲಿ ತನಗೆ ಬೇಕಾದ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾಮ್ ಕೃಪಾಲ್ ಮುನಿಸಿಕೊಂಡು ಪಕ್ಷ ತೊರೆದಿದ್ದರು.
5. ರಾಜೀವ್ ಪ್ರತಾಪ್ ರೂಢಿ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಸಹಾಯಕ ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಹತ್ತು ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲೂ ಅವರು ಇದೇ ದರ್ಜೆಯ ಸ್ಥಾನ ಹೊಂದಿದ್ದರು.
6. ಒಲಿಂಪಿಯನ್ ಶೂಟರ್ ಹಾಗೂ ಮಾಜಿ ಸೇನಾಧಿಕಾರಿ ರಾಜ್ಯವರ್ಧನ ಸಿಂಗ್ ರಾಥೋಡ್‌ರನ್ನೂ ಸಹಾಯಕ ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. 44 ವರ್ಷದ ರಾಥೋಡ್ 2004ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅದು 100 ವರ್ಷಗಳಲ್ಲಿ ಭಾರತದ ಮೊದಲ ವೈಯಕ್ತಿಕ ಪದಕವಾಗಿತ್ತು.
7. ಗಮನ ಸೆಳೆದಿರುವ ಇನ್ನೋರ್ವ ನೂತನ ಸಚಿವ ವಿಜಯ್ ಸಂಪ್ಲ. ಅವರು ಸೌದಿ ಅರೇಬಿಯದಲ್ಲಿ ಪ್ಲಂಬರ್ ಆಗಿ ಕೆಲಸ ಮಾಡಿದ್ದವರು. ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡಿರುವುದಕ್ಕೆ ಸಂಬಂಧಿಸಿ ತನಗೆ ಕರೆ ಬಂದಾಗ ಕರೆ ಮಾಡಿದ ವ್ಯಕ್ತಿಯ ಬಗ್ಗೆ ತನಗೆ ಸಂದೇಹ ಉಂಟಾಗಿತ್ತು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಚಹಾ ಮಾರುವವನ ಮಗ ಪ್ರಧಾನಿಯಾಗಬಹುದಾದರೆ ಓರ್ವ ಪ್ಲಂಬರ್ ಯಾಕೆ ಮಂತ್ರಿಯಾಗಬಾರದು’’ ಎಂದು ಅವರು ಹೇಳಿದರು.
8. ಇಂದು ಸಂಪುಟಕ್ಕೆ ಸೇರ್ಪಡೆಗೊಂಡ ಏಕೈಕ ಮಹಿಳೆ ಸಾಧ್ವಿ ನಿರಂಜನ್ ಜ್ಯೋತಿ. ಖಾವಿ ಬಟ್ಟೆ ಧರಿಸಿದ್ದ 47 ವರ್ಷದ ಸಾಧ್ವಿ ಸಹಾಯಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
9. ಹಿನ್ನೆಲೆ ಗಾಯಕ ಬಬುಲ್ ಸುಪ್ರಿಯೊ ಸಂಪುಟಕ್ಕೆ ಸೇರ್ಪಡೆಗೊಂಡ ಇನ್ನೊಬ್ಬರು.
10. ಪ್ರಮಾಣವಚನ ಸ್ವೀಕರಿಸಿದ ಇನ್ನೊಬ್ಬರು ಯಲಮಂಚಿಲಿ ಸತ್ಯನಾರಾಯಣ ಚೌದರಿ. ಉದ್ಯಮಿಯಾಗಿರುವ ಅವರು ಅತ್ಯಂತ ಶ್ರೀಮಂತ ಸಂಸದರ ಪೈಕಿ ಒಬ್ಬರು. ಅವರ ಘೋಷಿತ ಸಂಪತ್ತು ಸುಮಾರು 190 ಕೋಟಿ ರೂ.

ಸೌದಿಯಲ್ಲಿ ಪ್ಲಂಬರ್ ಆಗಿದ್ದ ವಿಜಯ ಸಂಪ್ಲ
ಒಂದು ಕಾಲದಲ್ಲಿ ಸೌದಿ ಅರೇಬಿಯದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವಿಜಯ ಸಂಪ್ಲ ಇಂದು ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವನ್ನು ಸೇರುವ ಮೂಲಕ ಹೊಸ ಎತ್ತರವನ್ನು ತಲುಪಿದರು. 2017ರಲ್ಲಿ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನೇಮಕವನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ರಾಜ್ಯದ ದಲಿತ ಸಮುದಾಯವನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಈ ಹೆಜ್ಜೆಯನ್ನು ನಿಟ್ಟಿದೆ.

ಎಸ್‌ಎಡಿ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ಬಳಿಕ, 53 ವರ್ಷದ ಪ್ರಮುಖ ದಲಿತ ನಾಯಕ ಹಾಗೂ ಮೊದಲ ಬಾರಿಯ ಸಂಸದ ಸಂಪ್ಲ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುತ್ತಿರುವ ಪಂಜಾಬ್‌ನ ಎರಡನೆ ಸಂಸದನಾಗಿದ್ದಾರೆ. ಸಂಪ್ಲ ಲೋಕಸಭಾ ಚುನಾವಣೆಯಲ್ಲಿ ಹೋಶಿಯಾರ್‌ಪುರ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಪಂಜಾಬ್‌ನಲ್ಲಿ 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಿತ್ತು. ನೆರೆಯ ಹರ್ಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಯಶಸ್ಸಿನಿಂದ ಪ್ರಭಾವಿತಗೊಂಡು ಮುಂದಿನ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಡಬಹುದಾಗಿದೆ ಅಥವಾ ಏಕಾಂಗಿಯೂ ಸ್ಪರ್ಧಿಸಬಹುದಾಗಿದೆ.
10ನೆ ತರಗತಿವರೆಗೆ ಓದಿರುವ ಸಂಪ್ಲ ಆರಂಭದಲ್ಲಿ ಸೌದಿ ಅರೇಬಿಯದಲ್ಲಿ ಪ್ಲಂಬರ್ ಆಗಿ ಕೆಲಸ ಮಾಡಿದ್ದರು. ಬಳಿಕ ಪಂಜಾಬ್‌ನಲ್ಲಿ ಸ್ವಂತ ಉದ್ಯಮ ಆರಂಭಿಸಿದರು.
ಗ್ರಾಮ ಸರಪಂಚನಾಗಿ ಆಯ್ಕೆಯಾದ ಸಂಪ್ಲ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿದ್ದರು.

190 ಕೋಟಿ ರೂ. ಒಡೆಯ ಚೌಧರಿ
ತೆಲುಗು ದೇಶಂ ಪಕ್ಷದ ವೈ.ಎಸ್. ಚೌಧರಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಸುಜನಾ ಚೌದರಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಅವರು ಕೈಗಾರಿಕೋದ್ಯಮಿ ಹಾಗೂ ಅತ್ಯಂತ ಶ್ರೀಮಂತ ಸಂಸದರ ಪೈಕಿ ಒಬ್ಬರು. ಅವರ ಘೋಷಿತ ಸಂಪತ್ತು ವೌಲ್ಯ ಸುಮಾರು 190 ಕೋಟಿ ರೂ.
ಸುಜನಾ ಕಂಪೆನಿಗಳ ಸಮೂಹದ ಸ್ಥಾಪಕ ಹಾಗೂ ಅಧ್ಯಕ್ಷರಾಗಿರುವ ಚೌಧರಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯವರು ಹಾಗೂ ಪ್ರಬಲ ಕಮ್ಮ ಸಮುದಾಯಕ್ಕೆ ಸೇರಿದವರು. ಅವರ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಇದೇ ಸಮುದಾಯಕ್ಕೆ ಸೇರಿದವರು.
ಸಚಿವ ಸಂಪುಟದಲ್ಲಿ ಸೇರ್ಪಡೆಗಾಗಿ ಓರ್ವ ಸಂಸದನನ್ನು ಹೆಸರಿಸುವಂತೆ ಪ್ರಧಾನಿ ಮೋದಿ ಟಿಡಿಪಿ ಮುಖ್ಯಸ್ಥರನ್ನು ಕೇಳಿದಾಗ, ಅವರು ಶಿಫಾರಸು ಮಾಡಿದ ಹೆಸರೇ ಚೌಧರಿ.
ಅವರು ಉನ್ನತ ಶಿಕ್ಷಣ ಪಡೆದ ಸರಕಾರಿ ಅಧಿಕಾರಿಗಳ ಕುಟುಂಬದಲ್ಲಿ 1961ರಲ್ಲಿ ಜನಿಸಿದರು. ಅವರು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1986ರಲ್ಲಿ ಅವರು ಸುಜನಾ ಕಂಪೆನಿಗಳ ಸಮೂಹವನ್ನು ಸ್ಥಾಪಿಸಿದರು. ಕಂಪೆನಿಯಲ್ಲಿ ಈಗ 6,000ಕ್ಕೂ ಅಧಿಕ ಕೆಲಸಗಾರರು ಹಾಗೂ 300 ಕೋಟಿ ಡಾಲರ್ (ಸುಮಾರು 18,450 ಕೋಟಿ ರೂ.) ವಾರ್ಷಿಕ ವ್ಯವಹಾರವನ್ನು ಕಂಪೆನಿ ಹೊಂದಿದೆ.
ಆಂಧ್ರಪ್ರದೇಶ ವಿಭಜನೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದವರ ಪೈಕಿ ಅವರೂ ಒಬ್ಬರು.

ಸೇನೆ, ಶೂಟಿಂಗ್ ರೇಂಜ್‌ನಿಂದ ಸರಕಾರಕ್ಕೆ
ಶೂಟಿಂಗ್ ರೇಂಜ್‌ನಲ್ಲಿ ತನ್ನ ನಿಖರ ಗುರಿಯಿಂದ ಗಮನ ಸೆಳೆದು ಒಲಿಂಪಿಕ್ಸ್‌ನಲ್ಲಿ ಪದಕವನ್ನೂ ಗೆದ್ದಿರುವ ರಾಜ್ಯವರ್ಧನ ಸಿಂಗ್ ರಾಥೋಡ್ ಈಗ ಕೇಂದ್ರ ಸಚಿವ ಸಂಪುಟದ ಗುರಿಯನ್ನೇ ಭೇದಿಸಿದ್ದಾರೆ. ಸಂಸದನಾಗಿ ತನ್ನ ಚೊಚ್ಚಲ ಅವಧಿಯಲ್ಲೇ ಅವರು ಮೋದಿ ಸರಕಾರದಲ್ಲಿ ಸಹಾಯಕ ಸಚಿವನಾಗಿ ಸೇರ್ಪಡೆಗೊಂಡಿದ್ದಾರೆ.
ಅಥೆನ್ಸ್‌ನಲ್ಲಿ ನಡೆದ 2004ರ ಒಲಿಂಪಿಕ್ಸ್‌ನಲ್ಲಿ ಡಬಲ್ ಟ್ರಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಪ್ರಸಿದ್ಧಿಗೆ ಬಂದ ರಾಥೋಡ್ ಬಳಿಕ ರಾಜಕೀಯಕ್ಕೆ ಕಾಲಿಟ್ಟರು. ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಜೈಪುರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾದರು.
ಸೇನೆಯಲ್ಲಿ ಕರ್ನಲ್ ಆಗಿದ್ದ ಅವರು ಸ್ವಯಂ ನಿವೃತ್ತಿ ಪಡೆದುಕೊಂಡು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬಿಜೆಪಿ ಸೇರಿದ್ದರು.
ರಾಷ್ಟ್ರೀಯ ರಕ್ಷಣಾ ಅಕಾಡಮಿಯಲ್ಲಿ ತೇರ್ಗಡೆ ಹೊಂದಿದ ಬಳಿಕ ರಾಥೋಡ್ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೊದಲು 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 200ರಲ್ಲಿ 192 ಗುರಿಗಳನ್ನು ಭೇದಿಸಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ದಾಖಲೆ ಇಂದಿಗೂ ಅಭೇದ್ಯವಾಗಿದೆ.
2006ರಲ್ಲಿ ನಡೆದ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ತನ್ನ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಪಟ್ಟವನ್ನು ಉಳಿಸಿಕೊಂಡರು. 2004ರಲ್ಲಿ ಸಿಡ್ನಿಯಲ್ಲಿ ಮತ್ತು 2006ರಲ್ಲಿ ಕೈರೋದಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಅವರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಮಹಿಳಾ ಪ್ರಾತಿನಿಧ್ಯ 8ಕ್ಕೆ
ಉತ್ತರಪ್ರದೇಶದಿಂದ ಆಯ್ಕೆಯಾಗಿರುವ ಮೊದಲ ಬಾರಿಯ ಸಂಸದೆ ಸಾಧ್ವಿ ನಿರಂಜನ್ ಜ್ಯೋತಿಯನ್ನು ಇಂದು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇದರೊಂದಿಗೆ ನರೇಂದ್ರ ಮೋದಿ ಸಂಪುಟದಲ್ಲಿನ ಒಟ್ಟು ಮಹಿಳಾ ಸದಸ್ಯರ ಸಂಖ್ಯೆ 8ಕ್ಕೇರಿದೆ.
47 ವರ್ಷದ ಜ್ಯೋತಿ ಧಾರ್ಮಿಕ ಉಪನ್ಯಾಸಕಿ. ಅವರು ಫತೇಪುರ್ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರನ್ನು ಸಹಾಯಕ ಸಚಿವೆಯನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಈಗಾಗಲೇ ಮೋದಿ ಸಂಪುಟದಲ್ಲಿ ಆರು ಸಂಪುಟ ದರ್ಜೆಯ ಹಾಗೂ ಒಂದು ಸಹಾಯಕ ದರ್ಜೆಯ ಮಹಿಳಾ ಸಚಿವರಿದ್ದಾರೆ.
ಮಹಿಳಾ ಸಂಪುಟ ಸಚಿವರೆಂದರೆ ಸುಶ್ಮಾ ಸ್ವರಾಜ್, ಉಮಾ ಭಾರತಿ, ನಜ್ಮಾ ಹೆಪ್ತುಲ್ಲಾ, ಮನೇಕಾ ಗಾಂಧಿ, ಹರ್‌ಸಿಮ್ರತ್ ಕೌರ್ ಬಾದಲ್ ಮತ್ತು ಸ್ಮತಿ ಇರಾನಿ.
ನಿರ್ಮಲಾ ಸೀತಾರಾಮನ್ ಸ್ವತಂತ್ರ ನಿರ್ವಹಣೆಯ ಸಹಾಯಕ ಸಚಿವೆಯಾಗಿದ್ದಾರೆ.

ಆರೆಸ್ಸೆಸ್ ಪ್ರಚಾರಕ್ ಬಂಡಾರು ದತ್ತಾತ್ರೇಯ
ಅವಿಭಜಿತ ಆಂಧ್ರಪ್ರದೇಶದ ಬಿಜೆಪಿಯ ಪ್ರಮುಖ ನಾಯಕ ಬಂಡಾರು ದತ್ತಾತ್ರೇಯ ಕೇಂದ್ರ ಸಚಿವ ಸಂಪುಟದಲ್ಲಿ ನೂತನ ತೆಲಂಗಾಣ ರಾಜ್ಯದ ಏಕೈಕ ಪ್ರತಿನಿಧಿ. ಪೂರ್ಣ ಪ್ರಮಾಣದ ಆರೆಸ್ಸೆಸ್ ಪ್ರಚಾರಕ್‌ನಿಂದ ಸರಕಾರದ ಹುದ್ದೆಗೆ ಜಿಗಿದ ಅದೃಷ್ಟವಂತ.
ಸಿಕಂದರಾಬಾದ್‌ನ್ನು ಲೋಕಸಭೆಯಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿರುವ ದತ್ತಾತ್ರೇಯ 1998-99 ಮತ್ತು 2000-2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ನಗರಾಭಿವೃದ್ಧಿ, ಬಡತನ ನಿರ್ಮೂಲನೆ ಮತ್ತು ರೈಲ್ವೆ ಖಾತೆಗಳ ಸಹಾಯಕ ಸಚಿವರಾಗಿದ್ದರು.
ದತ್ತ್ತಾತ್ತೇಯ 2003ರಿಂದ 2004ರವರೆಗೆ ನಗರಾಭಿವೃದ್ಧಿ ಸಚಿವಾಲಯವನ್ನು ಸ್ವತಂತ್ರವಾಗಿ ನಿರ್ವಹಿಸಿದ್ದರು. ಅವರು 1991-96, 1998-99 ಮತ್ತು 1999-2004ರ ಅವಧಿಯಲ್ಲಿ ಲೋಕಸಭಾ ಸದಸ್ಯನಾಗಿದ್ದರು.
1947 ಜೂನ್ 12ರಂದು ಜನಿಸಿದ ದತ್ತಾತ್ರೇಯ 1965ರಲ್ಲಿ ಆರ್‌ಎಸ್‌ಎಸ್ ಸೇರಿದರು ಹಾಗೂ 1968ರಿಂದ 1989ರವರೆಗೆ ಸಂಘದ ಪ್ರಧಾನ ಕಚೇರಿಯಲ್ಲಿ ಪ್ರಚಾರಕನಾಗಿ ಕಾರ್ಯನಿರ್ವಹಿಸಿದರು.

ಬಿಜೆಪಿಯ ಮುಸ್ಲಿಂ ಮುಖ ನಖ್ವಿ
ಬಿಜೆಪಿಯ ಪ್ರಮುಖ ಮುಸ್ಲಿಂ ಮುಖ ಮುಖ್ತಾರ್ ಅಬ್ಬಾಸ್ ನಖ್ವಿ 15 ವರ್ಷಗಳ ಬಳಿಕ ಕೇಂದ್ರ ಸಚಿವ ಸಂಪುಟಕ್ಕೆ ಮರಳಿದ್ದಾರೆ. ಅವರು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವರಾಗಿದ್ದರು.
ಎರಡು ಬಾರಿಯ ರಾಜ್ಯಸಭಾ ಸದಸ್ಯ, 57 ವರ್ಷದ ನಖ್ವಿ ಬಿಜೆಪಿಯ ಉಪಾಧ್ಯಕ್ಷರುಗಳ ಪೈಕೆ ಒಬ್ಬರು ಹಾಗೂ ಸುದೀರ್ಘ ಅವಧಿಗೆ ಪಕ್ಷದ ವಕ್ತಾರರಾಗಿದ್ದಾರೆ.
ಅಲ್ಪಸಂಖ್ಯಾತರ, ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಕುರಿತ ಪಕ್ಷದ ನಿಲುವನ್ನು ವಿವರಿಸುವುದಕ್ಕಾಗಿ ಬಿಜೆಪಿ ಹಲವು ಸಂದರ್ಭಗಳಲ್ಲಿ ನಖ್ವಿಯ ಸೇವೆಯನ್ನು ಬಳಸಿಕೊಂಡಿತ್ತು.
ಹಲವಾರು ಸಂಸದೀಯ ಸಮಿತಿಗಳ ಸದಸ್ಯನಾಗಿರುವ ನಖ್ವಿ ಮೇಲ್ಮನೆಯಲ್ಲಿ ಪಕ್ಷದ ಪ್ರಧಾನ ಮಾತುಗಾರರಾಗಿದ್ದಾರೆ.
ಕಾನೂನು ವಿದ್ಯಾರ್ಥಿಯಾದ ಅವರು 1980ರಲ್ಲಿ ಮೊದಲ ಬಾರಿಗೆ ಉತ್ತರಪ್ರದೇಶ ವಿಧಾನಸಭೆಗೆ ಜನತಾ ಪಾರ್ಟಿ ಸೆಕ್ಯುಲರ್ (ರಾಜ್ ನಾರಾಯಣ್)ನಿಂದ ಪಶ್ಚಿಮ ಅಲಹಾಬಾದ್‌ನಿಂದ ಸ್ಪರ್ಧಿಸಿದ್ದರು. ಬಳಿಕ 1989ರಲ್ಲಿ ಅಯೋಧ್ಯೆಯಿಂದ ಪಕ್ಷೇತರನಾಗಿ ಸ್ಪರ್ಧಿಸಿದ್ದರು.
1998ರಲ್ಲಿ ಅವರು ಉತ್ತರಪ್ರದೇಶದ ರಾಮ್‌ಪುರದಿಂದ ಲೋಕಸಭೆಗೆ ಆಯ್ಕೆಯಾದರು ಹಾಗೂ ವಾಜಪೇಯಿ ಸರಕಾರದಲ್ಲಿ ಸಚಿವನಾದರು.
ಹಿಂದೂ ಧರ್ಮದ ಸೀಮಾರನ್ನು ಅವರು ಮದುವೆಯಾಗಿದ್ದಾರೆ.

ಮೋದಿ ಟೀಕಾಕಾರರನ್ನು ಪಾಕ್‌ಗೆ ಕಳುಹಿಸುವಾತ’ ಸಚಿವ
ಇಂದು ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಬಿಜೆಪಿಯ 63 ವರ್ಷದ ನಾಯಕ ಗಿರಿರಾಜ್ ಸಿಂಗ್ ದ್ವೇಷ ಭಾಷಣ ಮಾಡಿರುವುದಕ್ಕಾಗಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಅವರು ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ. ಬಿಹಾರದ ನವದದಿಂದ ಆಯ್ಕೆಯಾಗಿರುವ ಅವರು ಮೊದಲ ಬಾರಿಯ ಸಂಸದ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಹಾರದಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರ ಟೀಕಾಕಾರರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗುವುದು ಎಂದಿದ್ದರು.
ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೋದಿ, ‘‘ಬಿಜೆಪಿಯ ಹಿತೈಷಿಗಳೆಂದು ಹೇಳಿಕೊಳ್ಳುವವರು ನೀಡುವ ಇಂಥ ಹೇಳಿಕೆಗಳು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ವಿಷಯದಲ್ಲಿ ನಡೆಸಲಾಗುತ್ತಿರುವ ಪ್ರಚಾರವನ್ನು ವಿಮುಖಗೊಳಿಸುತ್ತವೆ’’ ಎಂದಿದ್ದರು.
ಇಂಥ ಬೇಜವಾಬ್ದಾರಿಯುತ ಹೇಳಿಕೆಯನ್ನು ತಾನು ಅನುಮೋದಿಸುವುದಿಲ್ಲ ಎಂದು ಹೇಳಿದ್ದರು. ಈ ವರ್ಷದ ಜುಲೈಯಲ್ಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ನಗದನ್ನು ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿದ್ದರು. ಬಳಿಕ ಆ ಹಣ ಕಳ್ಳರು ಸಿಂಗ್‌ರ ಪಾಟ್ನಾ ನಿವಾಸದಿಂದ ಕಳ್ಳತನ ಮಾಡಿದ್ದು ಎಂಬುದು ಬಹಿರಂಗವಾಗಿತ್ತು. ಬಳಿಕ, ಆ ಹಣ ತನಗೆ ಸೇರಿದ್ದು, ಗಿರಿರಾಜ್ ಸಿಂಗ್‌ಗೆ ಸೇರಿದ್ದಲ್ಲ ಎಂಬುದಾಗಿ ಅವರ ಸಂಬಂಧಿಯೊಬ್ಬರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈಗ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಸಂಸದನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

-http://vbnewsonline.com

Write A Comment