ರಾಷ್ಟ್ರೀಯ

ಪನೀರಸೆಲ್ವಂ ಜಯಲಲಿತಾ ಉತ್ತರಾಧಿಕಾರಿ

Pinterest LinkedIn Tumblr

Panneerselvam

ಚೆನ್ನೈ (ಪಿಟಿಐ): ನಿರೀಕ್ಷೆಯಂತೆ ತಮಿಳುನಾಡು ಹಣಕಾಸು ಸಚಿವರೂ ಆಗಿರುವ ಜಯಲಲಿತಾ ಅವರ ಆಪ್ತ ಒ.ಪನೀರಸೆಲ್ವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಭಾನುವಾರ ನೇಮಕಗೊಂಡಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ ಒಂದು ದಿನ ಬಳಿಕ ಪನೀರಸೆಲ್ವಂ ಅವರು ಜಯಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇಲ್ಲಿ ನಡೆದ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪನೀರಸೆಲ್ವಂ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು.  63 ವರ್ಷ ಪನೀರಸೆಲ್ವಂ ಅವರು 2001ರಲ್ಲಿ ಉಂಟಾಗಿದ್ದ ಇಂಥದ್ದೇ ಪರಿಸ್ಥಿತಿಯಲ್ಲಿ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದರು. ‘ನಂಬಿಕಸ್ಥ’ ಎಂದೇ ಕರೆಯಲಾಗುವ ಪನೀರಸೆಲ್ವಂ ಅವರು ಪ್ರಬಲವಾದ ಥೇವರ್ ಸಮುದಾಯಕ್ಕೆ ಸೇರಿದವರು. ದಶಕಗಳಿಂದಲೂ ಜಯಲಲಿತಾ ಅವರ ಆಪ್ತ.

ಈ ನಿರ್ಧಾರವನ್ನು ಆಡಳಿತಾರೂಢ ಪಕ್ಷದ ಶಾಸಕರು ರಾಜ್ಯಪಾಲರಾದ ಕೆ.ರೋಸಯ್ಯ ಅವರಿಗೆ ತಿಳಿಸಿಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. 66.65 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಶಿಕ್ಷೆಯ ತೀರ್ಪು ಶನಿವಾರ ಪ್ರಕಟಗೊಂಡ ಬೆನ್ನಲ್ಲೇ ಪನೀರಸೆಲ್ವಂ ಅವರೇ ಉತ್ತರಾಧಿಕಾರಿ ಎಂಬುದು ಬಹುತೇಕ ಖಚಿತವಾಗಿತ್ತು. ನಿನ್ನೆಯಿಂದಲೂ (ಶನಿವಾರ) ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದ ಪನೀರಸೆಲ್ವಂ ಅವರು ಜಯಲಲಿತಾ ಅವರ ಸೂಚನೆಯಂತೆ ನೂತನ ಜವಾಬ್ದಾರಿ ವಹಿಸಿಕೊಳ್ಳಲು ಭಾನುವಾರ ತಮಿಳುನಾಡಿಗೆ ಹಿಂದಿರುಗಿದ್ದರು.

Write A Comment