ಅಂತರಾಷ್ಟ್ರೀಯ

ಭಾರತದಿಂದ ಕಾಶ್ಮೀರವನ್ನು ಸಂಪೂರ್ಣವಾಗಿ ಹಿಂಪಡೆಯುವೆ: ಬಿಲಾವಲ್

Pinterest LinkedIn Tumblr

bilawal_bhutoo_zardari

ಇಸ್ಲಾಮಾಬಾದ್, ಸೆ.20: ಭಾರತದ ವಶದಲ್ಲಿರುವ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದುದಾಗಿದೆ ಮತ್ತು ಅದನ್ನು ತನ್ನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ)ಯು ಪೂರ್ತಿಯಾಗಿ ಹಿಂಪಡೆಯಲಿದೆ ಎಂದು ಪಾಕಿಸ್ತಾನದ ‘ಮುಂದಿನ ತಲೆಮಾರಿನ’ ನಾಯಕನೆನಿಸಿಕೊಂಡಿರುವ ಬಿಲಾವಲ್ ಭುಟ್ಟೊ ಝರ್ದಾರಿ ಹೇಳಿದ್ದಾರೆ.

ಪಂಜಾಬ್ ಪ್ರಾಂತದ ಮುಲ್ತಾನ್‌ನಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಬಿಲಾವಲ್(20) ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.

‘‘ಕಾಶ್ಮೀರವನ್ನು ನಾನು ಹಿಂದಕ್ಕೆ ಪಡೆಯುವೆ. ಅದರ ಒಂದಿಂಚು ಸ್ಥಳವನ್ನೂ ಬಿಡದೆ ವಾಪಸ್ ಪಡೆಯುತ್ತೇನೆ. ಏಕೆಂದರೆ ಪಾಕ್‌ನ ಇತರ ಪ್ರಾಂತಗಳಂತೆ ಕಾಶ್ಮೀರ ಕೂಡಾ ಪಾಕಿಸ್ತಾನಕ್ಕೆ ಸೇರಿದ್ದಾಗಿದೆ’’ ಎಂದವರು ಹೇಳಿದ್ದಾರೆ.

ಬಿಲಾವಲ್ ಈ ಹೇಳಿಕೆ ನೀಡಿದ ವೇಳೆ ಪಾಕ್‌ನ ಮಾಜಿ ಪ್ರಧಾನಿ ಯೂಸುಫ್ ರಝಾ ಗೀಲಾನಿ ಹಾಗೂ ರಾಜಾ ಪರ್ವೇಝ್ ಅಶ್ರಫ್ ಕೂಡಾ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ಘೋಷಿಸಿರುವ ಬಿಲಾವಲ್, ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಅಧಿಕೃತವಾಗಿ ಬಯಸಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ ನೇತೃತ್ವ ವಹಿಸಿದ್ದಾರೆ.

ಬಿಲಾವಲ್‌ರ ತಾಯಿ ಹತ್ಯೆಗೀಡಾಗಿರುವ ಬೇನಝೀರ್ ಭುಟ್ಟೊ ಎರಡು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ್ದರು. ಬಿಲಾವಲ್‌ರ ತಾಯಿಯ ತಂದೆ ಝುಲ್ಫಿಕರ್ ಅಲಿ ಭುಟ್ಟೊ 1967ರಲ್ಲಿ ಪಿಪಿಪಿ ಪಕ್ಷವನ್ನು ಸ್ಥಾಪಿಸಿದ್ದರಲ್ಲದೆ, 1970ರಲ್ಲಿ ಪಾಕ್‌ನ ಪ್ರಧಾನಿಯಾಗಿಯೂ ಆಯ್ಕೆಯಾಗಿದ್ದರು.

ಬಿಲಾವಲ್‌ರ ತಂದೆ ಆಸಿಫ್ ಅಲಿ ಝರ್ದಾರಿ 2008ರಿಂದ 2013ರವರೆಗೆ ಪಾಕ್‌ನ ಅಧ್ಯಕ್ಷರಾಗಿದ್ದರು.

ತಳ್ಳಿಹಾಕಿದ ಭಾರತ

ಕಾಶ್ಮೀರವನ್ನು ಪೂರ್ತಿಯಾಗಿ ವಶಕ್ಕೆ ತೆಗೆದುಕೊಳ್ಳುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಮುಖಂಡ ಬಿಲಾವಲ್ ಭುಟ್ಟೊ ಝರ್ದಾರಿಯ ಹೇಳಿಕೆಯನ್ನು ಭಾರತ ತಳ್ಳಿ ಹಾಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತವು, ‘‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೊ ಝರ್ದಾರಿಯವರ ಹೇಳಿಕೆಯು ‘ವಾಸ್ತವಕ್ಕೆ ದೂರವಾದುದಾಗಿದೆ’ ಮತ್ತು ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯ ವಿಚಾರದಲ್ಲಿ ಯಾವುದೇ ಸಂಧಾನವಿಲ್ಲ’’ ಎಂದು ಹೇಳಿದೆ.

‘‘ನಾವು ಪರಿಶೀಲನೆಯ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಅಂದ ಮಾತ್ರಕ್ಕೆ ನಮ್ಮ ಗಡಿಭಾಗಗಳು ಬದಲಾಗಲಿವೆ ಎಂಬುದು ಇದರರ್ಥವಲ್ಲ. ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುದನ್ನು ನಾವು ಈಗಾಗಲೇ ತುಂಬಾ ಸ್ಪಷ್ಟವಾಗಿ ತಿಳಿಸಿದ್ದೇವೆ’’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

Write A Comment