ರಾಷ್ಟ್ರೀಯ

ಉಪಚುನಾವಣೆ: ಬಿಜೆಪಿಗೆ ಮುಖಭಂಗ; ಮಂಕಾದ ಮೋದಿ ಅಲೆ

Pinterest LinkedIn Tumblr

congi

ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ ಖಾತೆ ತೆರೆದ ಬಿಜೆಪಿ ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶಗಳಲ್ಲಿ ಬಿಜೆಪಿಗೆ ಹಿನ್ನಡೆ

ಹೊಸದಿಲ್ಲಿ, ಸೆ.16: ಕೇವಲ ನಾಲ್ಕು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಬಿಜೆಪಿಯು ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆದ ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ತನ್ನದೇ ಹಿಡಿತದಲ್ಲಿದ್ದ 24 ಸ್ಥಾನಗಳ ಪೈಕಿ 13 ಸ್ಥಾನಗಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ.

ಕಳೆದ ತಿಂಗಳು ಬಿಹಾರ, ಉತ್ತರಾಖಂಡ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ನಡೆದಿದ್ದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲೂ ಹಿನ್ನಡೆ ಅನುಭವಿಸಿದ್ದ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಪರೀಕ್ಷೆ ಎಂದೇ ಭಾವಿಸಲಾಗಿರುವ ಉಪಚುನಾವಣೆಯಲ್ಲಿನ ಸೋಲು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

9 ರಾಜ್ಯಗಳ 32 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಿತು. ಇದರಲ್ಲಿ ಬಿಜೆಪಿಗೆ 12, ಕಾಂಗ್ರೆಸ್‌ಗೆ 7, ಸಮಾಜವಾದಿ ಪಕ್ಷಕ್ಕೆ 8 ಸ್ಥಾನಗಳು ಲಭಿಸಿವೆ. ತೆಲುಗುದೇಶಂ ಪಕ್ಷ, ತೃಣಮೂಲ ಕಾಂಗ್ರೆಸ್, ಎಐಯುಡಿಎಫ್ ಮತ್ತು ಸಿಪಿಎಂಗಳು ತಲಾ ಒಂದು ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಸಿಕ್ಕಿಂನಲ್ಲಿ ಒಂದು ಸ್ಥಾನ ಪಕ್ಷೇತರನ ಪಾಲಾಗಿದೆ. ಉಪಚುನಾವಣೆ ನಡೆದ ವಡೋದರ, ಮೈನ್‌ಪುರಿ, ಮೇಡಕ್ ಲೋಕಸಭಾ ಕ್ಷೇತ್ರಗಳನ್ನು ಕ್ರಮವಾಗಿ ಬಿಜೆಪಿ, ಎಸ್‌ಪಿ, ಟಿಆರ್‌ಎಸ್ ಪಕ್ಷಗಳು ಉಳಿಸಿಕೊಂಡಿವೆ.

ಬಿಜೆಪಿಗೆ ಮುಖಭಂಗ: ಉತ್ತರಪ್ರದೇಶದಲ್ಲಿ ಬಿಜೆಪಿಯ ಹಿಡಿತದಲ್ಲಿದ್ದ 11 ಸ್ಥಾನಗಳ ಪೈಕಿ ಎಂಟನ್ನು ಪಕ್ಷ ಕಳೆದುಕೊಂಡಿದೆ. ಇದರಲ್ಲಿ ಒಂದು ಸ್ಥಾನ ಬಿಜೆಪಿಯ ಮೈತ್ರಿಕೂಟ ಪಕ್ಷ ಅಪ್ನಾ ದಳದ ಹಿಡಿತದಲ್ಲಿತ್ತು. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಎಸ್‌ಪಿ ಸ್ಪರ್ಧಿಸಲಿರಲಿಲ್ಲ. ಹೀಗಾಗಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ಉತ್ತರಪ್ರದೇಶದಲ್ಲಿ ಉಪಚುನಾವಣೆ ನಡೆದ 11 ಸ್ಥಾನಗಳ ಪೈಕಿ ಎಂಟರಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ. ಬಿಜೆಪಿ ಮೂರರಲ್ಲಿ ಜಯ ಗಳಿಸಿದೆ. ರಾಜಸ್ಥಾನ, ಗುಜರಾತ್‌ನಲ್ಲೂ ಹಿನ್ನಡೆ: ರಾಜಸ್ಥಾನದಲ್ಲಿ ಬಿಜೆಪಿಯು ತನ್ನ ಹಿಡಿತದಲ್ಲಿದ್ದ ನಾಲ್ಕು ಸ್ಥಾನಗಳ ಪೈಕಿ ಮೂರನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಿದೆ. ಗುಜರಾತ್‌ನಲ್ಲಿ ಬಿಜೆಪಿ ಹಿಡಿತದಲ್ಲಿದ್ದ 9 ಸ್ಥಾನಗಳ ಪೈಕಿ ಮೂರನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ.

ಗುಜರಾತ್‌ನಲ್ಲಿ ಉಪಚುನಾವಣೆ ನಡೆದ 9 ಸ್ಥಾನಗಳ ಪೈಕಿ ಬಿಜೆಪಿ ಆರು ಸ್ಥಾನಗಳು, ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಜಯ ಗಳಿಸಿವೆ. ರಾಜಸ್ಥಾನದಲ್ಲಿ ಉಪ ಚುನಾವಣೆ ನಡೆದ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದರೆ, ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಆಂಧ್ರಪ್ರದೇಶದಲ್ಲಿ ಆಳುವ ತೆಲುಗುದೇಶಂ ಪಕ್ಷ ನಂದಿಗಾಮ ಅಸೆಂಬ್ಲಿ ಸ್ಥಾನವನ್ನು ಉಳಿಸಿಕೊಂಡಿದೆ.

ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಗಳು ತಲಾ ಒಂದೊಂದು ಸ್ಥಾನಗಳಲ್ಲಿ ಜಯ ಸಾಧಿಸಿವೆ.
ಅಸ್ಸಾಂನ ಸಿಲ್ಚಾರ್ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ರಾಜ್ಯದ ಉಳಿದೆರಡು ಸ್ಥಾನಗಳನ್ನು ಕಾಂಗ್ರೆಸ್ (ಲಖೀಪುರ್) ಮತ್ತು ಎಐಯುಡಿಎಫ್ (ಜಮುನಾಮುಖಿ) ಉಳಿಸಿಕೊಂಡಿವೆ.

ತ್ರಿಪುರಾದಲ್ಲಿ ಮನು(ಎಸ್‌ಟಿ) ವಿಧಾನಸಭಾ ಕ್ಷೇತ್ರವನ್ನು ಸಿಪಿಎಂ ಉಳಿಸಿಕೊಂಡಿದೆ. ಸಿಕ್ಕಿಂನ ರಂಗಂಗ್-ಯಂಗಂಗ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಎನ್.ಚಾಮ್ಲಿಂಗ್ ಗೆದ್ದಿದ್ದಾರೆ.

ಉಪಚುನಾವಣೆ ನಡೆದ ಉತ್ತರಪ್ರದೇಶದ 11, ಗುಜರಾತ್‌ನ 9, ರಾಜಸ್ಥಾನದ 4 ಸ್ಥಾನಗಳು ಬಿಜೆಪಿ ಶಾಸಕರ ಹಿಡಿತದಲ್ಲಿದ್ದವು. ಈ ಶಾಸಕರು ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗಿತ್ತು.

ಉಪಚುನಾವಣೆಯ ಫಲಿತಾಂಶವನ್ನು ಕೋಮುವಾದಿ ಶಕ್ತಿಗಳ ಸೋಲು ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಣ್ಣಿಸಿವೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಮತ್ತು ಬಿಜೆಪಿಯ ‘ಧ್ರುವೀಕರಣದ ರಾಜಕೀಯ’ವನ್ನು ದೇಶದ ಜನತೆ ತಿರಸ್ಕರಿಸಿದ್ದಾರೆ ಎಂದು ಈ ಪಕ್ಷಗಳ ಧುರೀಣರು ಬಣ್ಣಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರದ ಫಲಿತಾಂಶ ವನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಜನರು ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಮತ ಹಾಕಿದ್ದಾರೆ ಎಂದು ಪಕ್ಷದ ಧುರೀಣರು ಹೇಳಿಕೊಂಡಿದ್ದಾರೆ.

ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಖಾತೆ ತೆರೆದಿದ್ದು ಬಿಜೆಪಿಯ ಏಕೈಕ ಸಾಧನೆಯಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಬಸೀರ್‌ಹಾತ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶಮಿಕ್ ಭಟ್ಟಾಚಾರ್ಯ ಅವರು ತೃಣಮೂಲ ಕಾಂಗ್ರೆಸ್‌ನ ದಿಪೇಂದು ಬಿಶ್ವಾಸ್ ಅವರನ್ನು ಸೋಲಿಸಿದ್ದಾರೆ.

ವಡೋದರ ಉಳಿಸಿಕೊಂಡ ಬಿಜೆಪಿ: ಗುಜರಾತ್‌ನ ವಡೋದರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿಜೆಪಿಯ ರಂಜನ್‌ಬೆನ್ ಭಟ್ ಅವರು ಕಾಂಗ್ರೆಸ್‌ನ ನರೇಂದ್ರ ರಾವತ್ ಅವರನ್ನು 3.29 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5.7 ಲಕ್ಷ ಮತಗಳ ಅಂತರದಿಂದ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಎಂಬುದು ಗಮನಾರ್ಹ.

ಉತ್ತರಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಮೊಮ್ಮಗ ತೇಜ್ ಪ್ರತಾಪ್ ಸಿಂಗ್ ಅವರು ಬಿಜೆಪಿಯ ಪ್ರೇಮ್ ಸಿಂಗ್ ಅವರನ್ನು 3.21 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದು, ಅಜಂಗಡ ಕ್ಷೇತ್ರ ಉಳಿಸಿಕೊಂಡು ಮೈನ್‌ಪುರಿಯನ್ನು ತೆರವುಗೊಳಿಸಿದ್ದರು.

ತೆಲಂಗಾಣದ ಮೇಡಕ್ ಲೋಕಸಭಾ ಕ್ಷೇತ್ರವನ್ನು ಆಳುವ ಟಿಆರ್‌ಎಸ್ ಉಳಿಸಿಕೊಂಡಿದ್ದು, ಪಕ್ಷದ ಅಭ್ಯರ್ಥಿ ಕೆ.ಪ್ರಭಾಕರ ರೆಡ್ಡಿ ಅವರು 3.61 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಹೊಸ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಕ್ಷೇತ್ರ ತೆರವುಗೊಳಿಸಿದ್ದರು.
ಛತ್ತೀಸಗಡದ ಅಂತಗಡ ವಿಧಾನಸಭಾ ಕ್ಷೇತ್ರದ ಮತ ಏಣಿಕೆ ಕಾರ್ಯ ಇದೇ 20ರಂದು ನಡೆಯಲಿದೆ.

Write A Comment