ದುಬೈ: ಕನ್ನಡ ಚಿತ್ರರಂಗದ ಬಾದ್‌ಶಾ ನಟ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕನಸಿನ ನಗರಿ ದುಬೈಯಲ್ಲಿ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಜೊತೆಗೆ 2000 ಅಡಿಗೂ ಎತ್ತರದ ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದ ಮೇಲೆ ಅವರ ಮುಂದಿನ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಅಲ್ಲದೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಗಿದೆ.
ಚಿತ್ರದ ಪೋಸ್ಟರ್ ಲಾಂಚ್ನ ಯೂಟ್ಯೂಬ್ ಮೂಲಕ ಲೈವ್ ಆಗಿ ಪ್ರಸಾರ ಮಾಡಲಾಯಿತು. ಹೀಗಾಗಿ, ವಿಶ್ವದಾದ್ಯಂತ ಇರುವ ಕಿಚ್ಚನ ಫ್ಯಾನ್ಸ್ಗೆ ತಮ್ಮ ನೆಚ್ಚಿನ ನಟನ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ನೋಡುವ ಅವಕಾಶ ಸಿಕ್ಕಿತು.
ಬುರ್ಜ್ ಖಲೀಫಾ ಮೇಲೆ ಕಿಚ್ಚನ 25 ವರ್ಷಗಳ ಚಿತ್ರರಂಗದ ಜರ್ನಿ ಕುರಿತ 3 ನಿಮಿಷದ ವೀಡಿಯೋ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಅವರ ಪತ್ನಿ ಪ್ರಿಯಾ, ಅವರ ಮಗಳು ಸಾನ್ವಿ, ನಿರ್ದೇಶಕ ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು ಕುಟುಂಬಸ್ಥರು, ದುಬೈಯ ಖ್ಯಾತ ಉದ್ಯಮಿ, ಕನ್ನಡ-ತುಳು ಸಿನೆಮಾ ನಿರ್ಮಾಪಕರು, ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್, ಫಾರ್ಚುನ್ ಪ್ಲಾಝ ಹೋಟೆಲಿನ ಪ್ರವೀಣ್ ಶೆಟ್ಟಿ, ರೀಜನ್ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್’ನ ರಾಜ್ ಶೆಟ್ಟಿ, ನೀತಾ ಅಶೋಕ್, ಪ್ರದೀಪ್, ರಾಮ್, ಜೊತೆಗೆ ಚಿತ್ರ ತಂಡದ ಎಲ್ಲರೂ ಉಪಸ್ಥಿತರಿದ್ದರು.
ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ, ಇಲ್ಲಿಯವರೆಗೆ ಮಾಡಿದ ಎಲ್ಲ ಪಾತ್ರಗಳ ತುಣುಕುಗಳು ಸೇರಿದಂತೆ ಕಿಚ್ಚ ನಡೆದು ಬಂದ ಹಾದಿಯನ್ನು ಟೀಸರ್ ಮೂಲಕ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಬಿತ್ತರಿಸಲಾಯಿತು. ಇದೇ ವೇಳೆ ವಿಕ್ರಾಂತ್ ರೋಣ ಟೀಸರ್ ಸಹ ಬಿಡುಗಡೆಯಾಗಿದ್ದು, ಭಾರತದ ಹಲವು ಭಾಷೆಗಳಲ್ಲಿ ಹಾಗೂ ಜಗತ್ತಿನ ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದವರೆಲ್ಲ ಕಿಚ್ಚ..ಕಿಚ್ಚಾ ಎಂದು ಕೂಗಿ ಜೈಕಾರ ಹಾಕಿದರು.
ಬುರ್ಜ್ ಖಲೀಫಾ ಕಟ್ಟಡದಲ್ಲಿ 3 ನಿಮಿಷಗಳ ಕಾಲ ಇದ್ದ ಕಟೌಟ್ ನೋಡಿ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸುಂದರ ಸಂಭ್ರಮವನ್ನು 6 ಕ್ಯಾಮೆರಾದಲ್ಲಿ ಕಿಚ್ಚನ ತಂಡ ಸೆರೆ ಹಿಡಿದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಕರ್ನಾಟಕದ ಬಾವುಟ ಹಾರಾಡಿದ್ದು ತುಂಬ ತುಂಬ ಖುಷಿಯಾಯಿತು. ವಿಕ್ರಾಂತ್ ರೋಣ ಸಿನಿಮಾದ ಕೆಲಸ ಮುಗಿದ ಮೇಲೆ ರಿಲೀಸ್ ಬಗ್ಗೆ ಯೋಚನೆ ಮಾಡಲಿದ್ದೇವೆ. ಅಭಿಮಾನಿಗಳ ಖುಷಿ ಕಂಡು ತುಂಬ ಖುಷಿಯಾಗುತ್ತಿದೆ. ನಿಜಕ್ಕೂ ನಾನು ಪುಣ್ಯ ಮಾಡಿದ್ದೇನೆ. ಎಲ್ಲರೂ ಸಾಕಷ್ಟು ಪ್ರೀತಿ-ವಿಶ್ವಾಸ ನೀಡಿದ್ದಾರೆ. ಚಿತ್ರರಂಗದಲ್ಲಿದ್ದು ನಾನು ಪೂರ್ಣಗೊಂಡಿರುವೆ ಅಂತ ಅನಿಸುತ್ತಿದೆ. ಇಲ್ಲಿ ಜ್ಯೂನಿಯರ್, ಸೀನಿಯರ್ ಎಂದು ಬರುವುದಿಲ್ಲ. ಎಲ್ಲರೂ ಒಂದೇ. ಜನರು ನಮ್ಮನ್ನು ಇಷ್ಟಪಡಬೇಕು. ಹೊಸಬರು ಕೂಡ ತುಂಬ ಪ್ರತಿಭಾವಂತರಿದ್ದಾರೆ. ಮೊದಲ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಹೆಸರು ಮಾಡಿದ್ದಾರೆ. ಅವರನ್ನೆಲ್ಲ ಕಂಡರೆ ತುಂಬ ಖುಷಿಯಾಗತ್ತೆ. ನನ್ನ ಚಿತ್ರರಂಗದ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಟೈಟಲ್ ಲೋಗೋ ಬಿಡುಗಡೆಗೂ ಮುಂಚೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ರಿಯಲ್ ಸ್ಟಾರ್ ಉಪೇಂದ್ರ, ಬಹುಭಾಷೆ ನಟಿ ರಮ್ಯಾಕೃಷ್ಣ, ಪ್ರಿಯಾಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.