ದುಬೈ(ಯುಎಇ): ವಿಶ್ವದಲ್ಲಿಯೇ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಕನಸಿನ ನಗರಿ ದುಬೈ, ಮಾರಕ ಕೊರೋನಾ ವೈರಸ್ ಭೀತಿಯ ನಡುವೆಯೇ ಕಟ್ಟುನಿಟ್ಟಿನ ಸುರಕ್ಷತೆಯೊಂದಿಗೆ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದೆ. ಕೊರೋನಾ ರೋಗದ ಮಧ್ಯೆ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ.
ವಿಶ್ವದಲ್ಲಿನ ಪ್ರವಾಸಿಗರೇ ದುಬೈ ದೇಶದ ಆದಾಯದ ಜೀವಾಳ. ಆದ್ರೆ, ಕೊರೊನಾ ಸೋಂಕು ಆವರಿಸಿಕೊಂಡಾಗಿನಿಂದ ವಿದೇಶಿ ಪ್ರಯಾಣವೇ ಬಂದ್ ಆಗಿತ್ತು. ಹೀಗಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ದುಬೈನ ಹಲವು ಉದ್ಯಮಗಳು ಕಳೆದ ಕೆಲವು ತಿಂಗಳುಗಳಿಂದ ಮಕಾಡೆ ಮಲಗಿವೆ. ಹೀಗಾಗಿ ದುಬೈ ಮುಕ್ತ ಪ್ರವಾಸೋದ್ಯಮ ಮತ್ತೆ ತೆರೆದುಕೊಂಡಿರುವುದು ಉದ್ಯಮಿಗಳು, ಪ್ರವಾಸಿಗಳಿಗೆ ಸಂತಸ ತಂದಿದೆ.
ಪ್ರವಾಸಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿರುವ ದುಬೈ, ಯುಎಇಗೆ ಆಗಮಿಸಲಿರುವ ಪ್ರತಿಯೊಬ್ಬರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ದುಬೈಗೆ ಆಗಮಿಸಲಿರುವ ವಿಮಾನದಲ್ಲಿ ಪ್ರಯಾಣಿಕರ ಮಧ್ಯೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಶೇ.80 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದೆ. ಜೊತೆಗೆ ಪ್ರಯಾಣಿಕರಿಗೆ ಮಾಸ್ಕ್, ಕೈಗಳಿಗೆ ಗ್ಲವ್ಸ್ ನೀಡುತ್ತಿದೆ. ಜೊತೆಗೆ ವಿಮಾನ ನಿಲ್ದಾಣಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ ಕೂಡ ಮಾಡಲಾಗುತ್ತೆ. ಅಲ್ಲದೆ ಪ್ರವಾಸಿಗರು ಉಳಿದುಕೊಳ್ಳಲಿರುವ ಹೋಟೆಲ್ ರೂಮುಗಳು ಕೂಡ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಮಾಲ್ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಟೆಂಪರೇಚರ್ ತಪಾಸಣೆ ಮಾಡಲಾಗುತ್ತದೆ. ಜತೆಗೆ ಸಾಮಾಜಿಕ ಅಂತರ ಕೂಡ ಕಾಪಾಡಿಕೊಳ್ಳಲಾಗುತ್ತೆ.
ಉಳಿದಂತೆ ಪ್ರವಾಸಿಗರು ಹೊರಗೆ ಸುತ್ತಾಡುವಾಗ, ಅಂದರೆ ಡಸೆರ್ಟ್ ಸಫಾರಿಗೆ ಹೋಗುವಾಗ ನಿಮ್ಮೊಂದಿಗೆ ಇತರ ಪ್ರವಾಸಿಗಳಿರುವುದಿಲ್ಲ. ನಿಮಗಾಗಿಯೇ ಕಾರು ನೀಡಲಾಗುತ್ತೆ, ಅದಕ್ಕೆ ನೀವೇ ಚಾಲಕರಾಗಿರುತ್ತೀರಿ, ಸಖತ್ತಾಗಿ ಎಂಜಾಯ್ ಮಾಡಬಹುದು. ಇನ್ನು ಪ್ರಕೃತಿಯೊಂದಿಗೆ ನೀವು ಸುತ್ತಾಡುವಾಗ ಸುರಕ್ಷತೆಗೆ ಮಾಸ್ಕ್, ಗ್ಲವ್ಸ್ ಹಾಕಿಕೊಂಡು ಸ್ವಚ್ಛಂದವಾಗಿ ಹಕ್ಕಿಗಳಂತೆ ಹಾರಾಡಬಹುದು, ಕುಣಿದಾಡಬಹುದು. ಈ ಎಲ್ಲ ಸುರಕ್ಷತೆಯಿಂದಾಗಿ ಕೊರೋನ ನಿಮ್ಮಿಂದ ದೂರವಾಗಿ ಪ್ರವಾಸದ ನಿಜವಾದ ಮಜಾ ಪಡೆಯಬಹುದು. ಅದಕ್ಕೆ ಬೇಕಾದ ಎಲ್ಲ ರೀತಿಯ ಸುರಕ್ಷತೆಯನ್ನು ದುಬೈ ಪ್ರವಾಸೋದ್ಯಮ ಮಾಡಿದೆ. ಈ ಮೂಲಕ ಪ್ರವಾಸಿಗರನ್ನು ಮತ್ತೆ ದುಬೈ ಕೈಬೀಸಿ ಕರೆಯುತ್ತಿದೆ.
Comments are closed.