ಗಲ್ಫ್

ದುಬೈನಿಂದ ಕರ್ನಾಟಕಕ್ಕೂ ಹಾರಲಿದೆ ವಿಮಾನ; ಸದಾನಂದ ಗೌಡ- ಕನ್ನಡಿಗಾಸ್ ಹೆಲ್ಪ್ ಲೈನ್ ಮಾತುಕತೆ ಸಫಲ

Pinterest LinkedIn Tumblr

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡದ ನಡುವೆ ನಡೆದ ಸತತ ಮಾತುಕತೆ ಫಲಶ್ರುತಿ ಯುಎಈಯಿಂದ ಹೊರಡಲಿರುವ ವಿಮಾನದ ಪಟ್ಟಿಯಲ್ಲಿ ಕರ್ನಾಟಕಕ್ಕೂ ಒಂದು ವಿಮಾನ ಸೇರ್ಪಡೆಯಾಗಿದ್ದು, ದುಬೈನಿಂದ ಮಂಗಳೂರಿಗೆ ಅಥವಾ ಬೆಂಗಳೂರಿಗೆ ಅನಿವಾಸಿ ಕನ್ನಡಿಗರೊಂದಿಗೆ ಏರ್ ಇಂಡಿಯಾ ಹಾರಲಿದೆ ಎಂದು ಅಧಿಕೃತ ಮಾಹಿತಿ ಹೊರಬಂದಿದೆ.

ಕೇಂದ್ರ ಸರ್ಕಾರದಿಂದ ಕೊರೋನ ಸಂಕಷ್ಟದಿಂದ ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ವಾಪಾಸು ಕರೆತರುವ ವಿಮಾನ ಪ್ರಯಾಣದ ವೇಳಾಪಟ್ಟಿ, ಪ್ರಯಾಣಿಸಲಿರುವ ಸ್ಥಳಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ನಿನ್ನೆಯವರೆಗೂ ಯುಎಈಯಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಪ್ರಯಾಣ ನಿಗದಿಯಾಗಿರಲಿಲ್ಲ, ಇದರಿಂದ ಅಸಮಾಧಾನಗೊಂಡಿದ್ದ ದುಬೈ ಅನಿವಾಸಿ ಕನ್ನಡಿಗರ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ನೇತೃತ್ವದಲ್ಲಿ ಸತತವಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ದುಬೈ ಕಾನ್ಸುಲೇಟ್ ಜನರಲ್ ರನ್ನು ಸಂಪರ್ಕಿಸಿ ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಸಿತು.

ಉಪಮುಖ್ಯಮಂತ್ರಿ ಡಾ| ಅಶ್ವಥನಾರಾಯಣ, ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರೊಂದಿಗೂ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ ಕೇಂದ್ರ ವಿದೇಶಾಂಗ ಇಲಾಖೆಗೆ ಒತ್ತಡ ಹೇರಲು ಬೇಡಿಕೆ ಇಡಲಾಯಿತು. ಆದರೆ ಇದೇ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ಸಹಾಯಕ್ಕೆ ಬಂದಂತಹ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ತಕ್ಷಣವೇ ಸ್ಪಂದಿಸಿ ಮೊದಲ ಪಟ್ಟಿಯಲ್ಲಿ ಯುಎಈಯಿಂದ ಒಂದು ವಿಮಾನ ನಮ್ಮ ರಾಜ್ಯಕ್ಕೆ ಬರಲೇ ಬೇಕು, ನಾನು ಶತಾಯ ಗತಾಯ ಪ್ರಯತ್ನ ಮಾಡಿ ಖಂಡಿತಾ ನಿಮ್ಮ ಬೇಡಿಕೆ ಈಡೇರಿಸುವೆ ಎಂದು ಭರವಸೆ ನೀಡಿ ವಿದೇಶಾಂಗ ಇಲಾಖೆಯ ಸೆಕ್ರೆಟರಿ ಜೊತೆ ಮಾತನಾಡಿ ಕೊಟ್ಟ ಮಾತಿನಂತೆ ಯುಎಈಯಿಂದ ಹಾರಲಿರುವ ವಿಮಾನಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕವನ್ನು ಸೇರಿಸುವಲ್ಲಿ ಯಶಸ್ವಿಯಾದರು.

ತದನಂತರ ದುಬೈ ಅನಿವಾಸಿ ಕನ್ನಡಿಗರ ಕನ್ನಡಿಗಾಸ್ ಹೆಲ್ಪ್ ಲೈನ್ ಸ್ವಯಂಸೇವಕ ತಂಡದವರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಡಿ.ವಿ ಸದಾನಂದ ಗೌಡರು, ನನಗೆ ವಿಷಯ ತಿಳಿದಾಗ ಸ್ವಲ್ಪ ತಡವಾಯಿತು, ಆದರೆ ನಿಮ್ಮ ಕೋರಿಕೆ ಈಡೇರಿದೆ, ಜನರ ಸೇವೆ ಮಾಡಲು ಯಾವತ್ತೂ ನಾವು ಸಿದ್ಧ, ಇದು ನಮ್ಮ ಕರ್ತವ್ಯ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಕಾರ್ಯವನ್ನೂ ಶ್ಲಾಘಿಸಿ ಶುಭ ಹಾರೈಸಿದರು. ಅಲ್ಲದೇ ಕರ್ನಾಟಕಕ್ಕೆ ವಿಮಾನ 9ನೇ ತಾರೀಕಿನಂದು ತೆರಳಲಿದೆ ಎಂದು ದುಬೈ ಕಾನ್ಸುಲೇಟ್ ಜನರಲ್ ವಿಪುಲ್ ಷಾ ಅವರೂ ಖಚಿತ ಪಡಿಸಿದರು.

ವೀಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ದುಬೈ ಅನಿವಾಸಿ ಕನ್ನಡಿಗರ ಅಧ್ಯಕ್ಷ ನವೀದ್ ಮಾಗುಂಡಿ, ಬಿಸಿಸಿಐ ಯುಎಈ ಘಟಕದ ಉಪಾಧ್ಯಕ್ಷ ಹಿದಾಯತ್ ಅಡ್ಡೂರು, ಉದ್ಯಮಿ ಹರೀಶ್ ಶೇರಿಗಾರ್, ಕರ್ನಾಟಕ ಮೀಡಿಯಾ ಫೋರಂ ಅಧ್ಯಕ್ಷ ಇಮ್ರಾನ್ ಖಾನ್, ಕರ್ನಾಟಕ ಸಂಘ ದುಬೈ ಕಾರ್ಯದರ್ಶಿ ದಯಾ ಕಿರೋಡಿಯನ್, ಬಸವ ಸಮಿತಿ ದುಬೈ ಮಾಜಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ, ಕನ್ನಡ ಪಾಠಶಾಲೆ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಂಘ ಶಾರ್ಜಾದ ಪ್ರಧಾನ ಕಾರ್ಯದರ್ಶಿ ನೋಯೆಲ್ ಅಲ್ಮೇಡಾ, ಭಟ್ಕಳ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಬರ್ಮಾವರ್, ಸಯ್ಯದ್ ಅಫ್ಜಲ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಿರಾಜ್ ಪರ್ಲಡ್ಕ, ಉದ್ಯಮಿ ರೊನಾಲ್ಡ್ ಮಾರ್ಟಿಸ್, ಅಶ್ರಫ್ ಕೆ.ಎಂ, ತುಳು ಒಕ್ಕೂಟದ ಯಶವಂತ್ ಕರ್ಕೇರ ಉಪಸ್ಥಿತರಿದ್ಧರು.

Comments are closed.