ಗಲ್ಫ್

ಭಾರತಕ್ಕೆ ಮರಳಲಿರುವ ಅನಿವಾಸಿ ಕನ್ನಡಿಗರ ಕುರಿತು ಡಿಸಿಂ ಅಶ್ವಥನಾರಾಯಣ್ ಜೊತೆ ಚರ್ಚಿಸಿದ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಯುಎಈ

Pinterest LinkedIn Tumblr

ದುಬೈ: ಕೊರೋನ ಆರ್ಭಟದಿಂದ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಭಾರತಕ್ಕೆ ವಾಪಾಸು ಕರೆತರುವ ಕುರಿತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಡಾ। ಸಿ.ಎನ್ ಅಶ್ವಥನಾರಾಯಣ್ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘವಾದ ಚರ್ಚೆ ನಡೆಸಿತು.

20 ಜನ ಸಮಾನಮನಸ್ಕರೊಂದಿಗೆ ಆರಂಭವಾದ ಈ ಅಭಿಯಾನ ಕರೋನ ಎಫೆಕ್ಟ್ ನಿಂದ ಲಾಕ್ ಡೌನ್ ಆಗಿ ಸಮಸ್ಯೆಗೆ ಸಿಲುಕಿ ಹೆಲ್ಪ್ ಲೈನ್ ವೆಬ್ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸುವ 7 ಎಮಿರೇಟ್ಸ್ ಗಳ ಕನ್ನಡಿಗರಿಗೂ ಆಹಾರದ ಕಿಟ್ ವಿತರಣೆ, ವಿವಿಧ ರೀತಿಯ ವೈದ್ಯಕೀಯ ಸೌಲಭ್ಯ, ಕ್ವಾರಂಟೈನ್ ವ್ಯವಸ್ಥೆ, ಕಾನೂನಾತ್ಮಕ ಸಮಸ್ಯೆಗಳಿಗೆ ಉಚಿತವಾಗಿ ಸಲಹೆ ಹಾಗೂ ಪರಿಹಾರ ಸೂಚಿಸುವ ಕೆಲಸವನ್ನು ಮಾಡುತ್ತಿದ್ದೇವೆ, ಎಲ್ಲದಕ್ಕೂ ಹೆಚ್ಚು ಖಿನ್ನತೆ ಮತ್ತು ಚಿಂತೆಯಲ್ಲಿರುವ ನಮ್ಮ ಕನ್ನಡಿಗರೊಂದಿಗೆ ಆತ್ಮೀಯವಾಗಿ ಮಾತನಾಡಿ ಅವರಿಗೆ ಧೈರ್ಯ ತುಂಬಿ, ಆತ್ಮಸ್ತೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ದುಬೈ ಅನಿವಾಸಿ ಕನ್ನಡಿಗರು ಅಧ್ಯಕ್ಷ ನವೀದ್ ಮಾಗುಂಡಿ ಡಿಸಿಂ ಅಶ್ವಥನಾರಾಯಣ್ ರವರಿಗೆ ವಿವರಿಸಿದರು.

ಯುಎಈ ಸರಕಾರ ನಮಗೆ ಉತ್ತಮವಾಗಿ ಸ್ಪಂದಿಸುತ್ತಿದೆ, ಆದರೆ ಈ ಕೊರೋನ ಸಂಕಷ್ಟದಿಂದ ಸುಮಾರು 20,000 ಕನ್ನಡಿಗರಿಗೆ ತೊಂದರೆಯಾಗಿದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ, ನೂರಾರು ಜನ ವಿಸಿಟ್ ವಿಸಾದಲ್ಲಿದ್ದಾರೆ, ಗರ್ಭಿಣಿಯವರಿದ್ದಾರೆ, ಲಾಕ್ ಡೌನ್ ನಿಂದ ಸಂಬಳವಿಲ್ಲದೆ ಜೀವಿಸತ್ತಿದ್ದಾರೆ, ಆ ಕಾರಣಕ್ಕೆ ನಾವು ಕನ್ನಡಿಗಾಸ್ ಹೆಲ್ಪ್ ಲೈನ್ ಪ್ರಾರಂಭಿಸಿ ಅತ್ಯುತ್ತಮ ರೀತಿಯಲ್ಲಿ ಕನ್ನಡಿಗರ ಸೇವೆಯಲ್ಲಿ ತೊಡಗಿಸಿಕೊಂಡು ಯಾವುದೇ ಫೋಟೋ, ಪ್ರಚಾರವಿಲ್ಲದೇ ಮುಂದುವರೆಯುತ್ತಿದ್ದೇವೆ. ಆದರೆ ಈಗ ತಾಯ್ನಾಡಿಗೆ ವಾಪಾಸಾಗುವ ಕನ್ನಡಿಗರ ಬಗ್ಗೆ ಸರ್ಕಾರದ ಸಹಕಾರ ಬೇಕು, ಸರ್ಕಾರದಲ್ಲಿ ನಮ್ಮ ಬಗ್ಗೆ ಧ್ವನಿ ಎತ್ತಬೇಕು, ವಿಮಾನ ಪ್ರಯಾಣ ಪ್ರಾರಂಭವಾದಾಗ ಇಲ್ಲಿರುವ ಕಾರ್ಮಿಕವರ್ಗದ ಬಗ್ಗೆ ಗಮನಹರಿಸಬೇಕು ಎಂದು ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯಿಸಿದರು.

ಈವರೆಗೆ 2000 ಕನ್ನಡಿಗರು ವಾಪಾಸು ಹೋಗಬೇಕೆಂದು ರಿಜಿಸ್ಟ್ರಾರ್ ಮಾಡಿದ್ದಾರೆ, 58 ಗರ್ಭಿಣಿಯರು ಹೋಗಲು ಕಾತುರದಿಂದ ಕಾಯುತ್ತಿದ್ದಾರೆ, 270 ಕನ್ನಡಿಗರು ವಿಸಿಟ್ ವಿಸಾ ಅವಧಿ ಮುಗಿದು ತಾಯ್ನಾಡಿಗೆ ಮರಳಲು ವಿಮಾನ ಪ್ರಯಾಣ ಆರಂಭವಾಗುದನ್ನೇ ಎದುರುನೋಡುತ್ತಿದ್ದಾರೆ, ಹಾಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಕಾರ್ಮಿಕ ವರ್ಗದವರನ್ನು ಕೂಡಲೇ ಏರ್ ಲಿಫ್ಟ್ ಮೂಲಕ ಕರೆದೊಯ್ಯಬೇಕು ಹಾಗೂ ಅವರಿಗೆ ಕ್ವಾರಂಟೈನ್ ವ್ಯವಸ್ಥೆಯೂ ಮಾಡಬೇಕು, ಕೆಲಸ ಕಳೆದುಕೊಂಡ ಅನಿವಾಸಿಗಳ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ದೊರಕುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸಮಸ್ತ ಅನಿವಾಸಿ ಕನ್ನಡಿಗರ ಪರವಾಗಿ ಪ್ರವೀಣ್ ಶೆಟ್ಟಿ ಬೇಡಿಕೆಯಿಟ್ಟರು. ಅದಕ್ಕೆ ಸ್ಪಂದಿಸಿದ ಡಿಸಿಂ, 10 ರಿಂದ 12 ಸಾವಿರ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ, ಕೇಂದ್ರ ಸರ್ಕಾರದ ಮೂಲಕ ಆದಷ್ಟು ಬೇಗ ಕನ್ನಡಿಗರನ್ನು ಏರ್ ಲಿಫ್ಟ್ ಮಾಡಲು ಖಂಡಿತವಾಗಿಯೂ ಒತ್ತಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೆಲಸ ಕಳೆದುಕೊಂಡು ವಾಪಾಸಾಗುವ ಅನಿವಾಸಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಅಥವಾ ವ್ಯವಹಾರಕ್ಕೆ ಹಣಕಾಸಿನ ಸಹಾಯ ಮಾಡಬೇಕು, ವಾಪಾಸಾಗುವ ಮಕ್ಕಳಿಗೆ ಸಿಬಿಎಸ್ಸಿ ಶಾಲೆಗಳಲ್ಲಿ ಶಿಕ್ಷಣ ಕೊಡಬೇಕು, ಎಂದು ಬಿಸಿಸಿಐ ಯುಎಈ ಘಟಕದ ಉಪಾಧ್ಯಕ್ಷ ಹಿದಾಯತ್ ಅಡ್ಡೂರು ಅನಿವಾಸಿಗಳ ಪರ ಬೇಡಿಕೆ ಇಟ್ಟಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಸಿಂರವರು, ಮಕ್ಕಳಿಗೆ ಎಲ್ಲೆಲ್ಲಿ ಶಾಲೆಗೆ ದಾಖಲಾತಿ ಬೇಕೋ ಅಲ್ಲಲ್ಲಿ ವ್ಯವಸ್ಥೆ ಮಾಡುವ, ಮುದ್ರಾ ಯೋಜನೆಗಳ ಮೂಲಕ ಹಣಕಾಸಿನ ಬೆಂಬಲ ನೀಡಲೂ ಪ್ರಯತ್ನಿಸುತ್ತೇನೆ, ನಮ್ಮ ಒಬ್ಬ ಅಧಿಕಾರಿಯನ್ನು ಅನಿವಾಸಿಗಳಿಗೆ ಸಹಾಯ ಕೊಡಿಸಲು ಮೇಲ್ವಿಚಾರಕರಾಗಿ ಇಟ್ಟು ಮುತುವರ್ಜಿವಹಿಸುತ್ತೇನೆ ಎಂದು ಭರವಸೆ ನೀಡಿದರು.

ಯುಎಈಯಿಂದ ಭಾರತಕ್ಕೆ ಮರಳಿ ಬರುವ ಜನರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಯಾವ ರೀತಿ ತಯಾರಿ ನಡೆಸಿದೆ ಎಂದು ಬಸವ ಸಮಿತಿ ಯುಎಈ ಮಾಜಿ ಅಧ್ಯಕ್ಷ, ಸ್ಥಾಪಕ ಸದಸ್ಯ ಚಂದ್ರಶೇಖರ್ ಲಿಂಗದಹಳ್ಳಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಯವರು, ಈ ಹಿಂದೆ ಕ್ವಾರಂಟೈನ್ ಗೆ ಅವರವರ ಮನೆಗೆ ಕಳುಹಿಸುತ್ತಿದ್ದೆವು, ಆದರೆ ಈಗ ಹೋಟೆಲ್ ಗಳಲ್ಲಿ ಅವರಿಗೆ ರೂಮ್ ಕೊಟ್ಟು, ಊಟ ಉಪಾಚಾರ ಕೊಟ್ಟು ಕ್ವಾರಂಟೈನ್ ಮಾಡುವ ಕೆಲಸ ನಡೆಯುತ್ತೆ ಎಂದರು.

ಇಲ್ಲಿ ಕೆಳ ಮತ್ತು ಮಧ್ಯಮ ವರ್ಗದ ಕನ್ನಡಿಗರಿಗೆ ಚೆಕ್ ಬೌನ್ಸ್, ಕ್ರೆಡಿಟ್ ಕಾರ್ಡ್ ನಿಂದ ಸಣ್ಣ ದಂಡ ಕಟ್ಟಬೇಕಾಗಿರುತ್ತದೆ, ಅದನ್ನು ಕಟ್ಟದೇ ದೇಶ ಬಿಡುವ ಹಾಗಿಲ್ಲ, ಈ ಸಂದರ್ಭದಲ್ಲಿ ಅವರಿಗೆ ದಂಡ ಕಟ್ಟಲು ಹಣವಿರಲ್ಲ ಹಾಗಾಗಿ ಅಂತಹ ಸಣ್ಣ ಪುಟ್ಟ ದಂಡವನ್ನು ಮನ್ನಿಸಲು ಏನಾದರೂ ವ್ಯವಸ್ಥೆ ಮಾಡಬಹುದೇ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಕಾನೂನು ಸಲಹೆಗಾರರಾದ ಅಡ್ವಕೇಟ್ ಸುನೀಲ್ ಅಂಬಳವೆಳಿಲ್ ಕೋರಿಕೊಂಡಾಗ, ಖಂಡಿತವಾಗಿಯೂ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಯುಎಈ ರಾಯಭಾರಿ ಕಚೇರಿಯ ಮೂಲಕ ದಂಡವನ್ನು ಮನ್ನಾ ಮಾಡಿಸಲು ಪ್ರಯತ್ನಿಸುವೆ ಎಂದು ಡಿಸಿಂ ಭರವಸೆ ನೀಡಿದರು.

ಬಹಳಷ್ಟು ಕನ್ನಡಿಗರು ಕೆಲಸ ಕಳೆದುಕೊಂಡಿದ್ದಾರೆ, 3-4 ತಿಂಗಳಿಂದ ಸಂಬಳವಿಲ್ಲದವರಿದ್ದು ಅವರಿಗೆ ಊರಿಗೆ ವಾಪಸಾಗಲು ಟಿಕೆಟಿಗೆ ಹಣವಿಲ್ಲ, ಅವರಿಗೆಲ್ಲಾ ಮಾನವೀಯ ನೆಲೆಯಲ್ಲಿ ಉಚಿತವಾಗಿ ವಿಮಾನ ಪ್ರಯಾಣದ ವ್ಯವಸ್ಥೆ ಕರ್ನಾಟಕ ಸರಕಾರದಿಂದ ಮಾಡಿದರೆ ಅದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ ಎಂದು ದುಬೈಯ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಒತ್ತಾಯಿಸಿದರು, ಅಂಥವರನ್ನ ಗುರುತಿಸಿ ಸರ್ಕಾರದ ಗಮನಕ್ಕೆ ತಂದರೆ ಖಂಡಿತ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಅಶ್ವಥನಾರಾಯಣ್ ಭರವಸೆ ನೀಡಿದರು.

ಕೇರಳ ರಾಜ್ಯ ಸರ್ಕಾರ ತುಂಬಾ ಕ್ರಿಯಾಶೀಲವಾಗಿ ಅನಿವಾಸಿ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ನಾವಿಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ, ಕನ್ನಡಿಗರನ್ನು ನಮ್ಮ ಸರ್ಕಾರ ನಿರ್ಲಕ್ಷಿಸಿತ್ತು, ಇಂದು ನಿಮ್ಮೊಂದಿಗೆ ನಡೆದ ಈ ಚರ್ಚೆ ಕೇವಲ ಚರ್ಚೆ ಭರವಸೆ ಮಾತಾಗಿ ಉಳಿಯದೇ ಕಾರ್ಯರೂಪಕ್ಕೆ ತರಲು ನೀವು ಪ್ರಯತ್ನಿಸಬೇಕು ಎಂದು ಕರ್ನಾಟಕ ಮೀಡಿಯಾ ಫೋರಂ ಅಧ್ಯಕ್ಷ ಇಮ್ರಾನ್ ಖಾನ್ ಎರ್ಮಾಳ್ ಒತ್ತಾಯಿಸಿದರು, ನೀವು ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ನಮ್ಮ ಸರ್ಕಾರದ ಜೊತೆ ಮಾತನಾಡಿ ಬಗೆಹರಿಸಲು ಶಕ್ತಿ ಮೀರಿ ಸಹಕಾರ ಕೊಡಲು ಸಿದ್ದವಾಗಿದ್ದೇವೆ ಎಂದು ಭರವಸೆ ನೀಡಿ ಕಾನ್ಫರೆನ್ಸ್ ಕೊನೆಗೊಳಿಸಿದರು.

ವೀಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕ ಸಂಘ ದುಬೈ ಕಾರ್ಯದರ್ಶಿ ದಯಾ ಕಿರೋಡಿಯನ್, ಕನ್ನಡ ಪಾಠಶಾಲೆ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಂಘ ಶಾರ್ಜಾದ ಪ್ರಧಾನ ಕಾರ್ಯದರ್ಶಿ ನೋಯೆಲ್ ಅಲ್ಮೇಡಾ, ಭಟ್ಕಳ್ ಕಮಿಟಿಯ ಅಧ್ಯಕ್ಷ ಅಶ್ಫಾಕ್ ಸಾದ, ಕಾರ್ಯದರ್ಶಿ ಯೂಸುಫ್ ಬರ್ಮಾವರ್, ಸಯ್ಯದ್ ಅಫ್ಜಲ್, ಉದ್ಯಮಿ ರೊನಾಲ್ಡ್ ಮಾರ್ಟಿಸ್, ತುಳು ಒಕ್ಕೂಟದ ಯಶವಂತ್ ಕರ್ಕೇರ ಉಪಸ್ಥಿತರಿದ್ಧರು.

Comments are closed.