
ಸನಾ (ಯೆಮನ್): ಸೌದಿ ಅರೇಬಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾ ಘಟಕ ಅರಾಮ್ಕೋ ಮೇಲೆ ಶನಿವಾರ ಹೌತಿ ಬಂಡುಕೋರರು ಡ್ರೋನ್ ಮೂಲಕ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಸೌದಿ ಅರೇಬಿಯಾ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಬಂಡುಕೋರರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಹೌತಿ ಮಿಲಿಟರಿಯ ವಕ್ತಾರ ಬ್ರಿಗೇಡಿಯರ್ ಯಹ್ಯ ಸರಿ ಹೇಳಿಕೆ ನೀಡಿದ್ದು, ಸೌದಿ ಅರೇಬಿಯಾದಲ್ಲಿ ಯಾವುದೇ ಸಮಯದಲ್ಲಿ ಯಾವುದೇ ಸ್ಥಳದ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಹೌತಿ ಬಂಡುಕೋರರು ತೈಲ ಸಂಸ್ಕರಣಾ ಘಟಕ ಮತ್ತು ತೈಲ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದರು. ದಾಳಿಯಿಂದಾಗಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ದಾಳಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ತೈಲ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗುವ ಲಕ್ಷಣಗಳು ಕಂಡು ಬಂದಿವೆ.
ಈಗ ಮತ್ತೆ ಹೌತಿ ಬಂಡುಕೋರರು ಸೌದಿ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಸೌದಿಯ ತೈಲ ಘಟಕಗಳ ಮೇಲೆ ಮತ್ತಷ್ಟು ದಾಳಿ ನಡೆದರೆ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ಸೌದಿ ಅರೇಬಿಯಾ ಮೇಲೆ ನಡೆದ ದಾಳಿಗೆ ಇರಾನ್ ಕಾರಣ ಎಂದು ಅಮೆರಿಕದ ಆರೋಪಿಸಿತ್ತು. ಅಮೆರಿಕದ ಆರೋಪವನ್ನು ಇರಾನ್ ನಿರಾಕರಿಸಿತ್ತು. ಇದರ ನಡುವೆಯೇ ದಾಳಿಯಲ್ಲಿ ಬಳಕೆಯಾಗಿರುವ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್ ಅನ್ನು ಇರಾನ್ ಒದಗಿಸಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
Comments are closed.