ದುಬೈ: ಗುರುವಾರ ಸಂಜೆ ದುಬೈಯ ಅಲ್ ರಾಶಿದಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ 17 ಮಂದಿಯ ಪೈಕಿ 12 ಮಂದಿ ಭಾರತೀಯರಾಗಿದ್ದಾರೆ ಎಂದು ದುಬೈನಲ್ಲಿರುವ ಭಾರತದ ರಾಯಭಾರಿ ಕಚೇರಿ ಶುಕ್ರವಾರ ತಿಳಿಸಿದೆ.
ಒಮಾನ್ನಿಂದ ದುಬೈಗೆ ಬರುತ್ತಿದ್ದ ಪ್ರಯಾಣಿಕರಿದ್ದ ಬಸ್ ರಸ್ತೆ ಬದಿಯ ಫಲಕಕ್ಕೆ ಢಿಕ್ಕಿ ಹೊಡೆದ ಪರಿಣಾಮ 31 ಮಂದಿ ಇದ್ದ ಪ್ರಯಾಣಿಕರ ಪೈಕಿ 17 ಮಂದಿ ಸಾವನ್ನಪ್ಪಿದ್ದು, 5 ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಮೃತಪಟ್ಟವರ ಸಂಬಂಧಿಕರೊಂದಿಗೆ ರಾಯಭಾರಿ ಕಚೇರಿ ಸಂಪರ್ಕದಲ್ಲಿದೆ ಎಂದು ರಾಯಭಾರಿ ಕಚೇರಿ ಟ್ವಿಟರ್ನಲ್ಲಿ ತಿಳಿಸಿದೆ.
ಮೃತಪಟ್ಟವರನ್ನು ವಿಕ್ರಂ, ವಿಮಲ್ ಕುಮಾರ್, ಕಿರಣ್ ಜಾನಿ, ಫಿರೋಜ್ ಖಾನ್, ರೇಷ್ಮಾ ಫಿರೋಜ್ ಖಾನ್, ಉಮ್ಮರ್, ನಬೀಲ್ ಉಮ್ಮರ್, ವಾಸುದೇವ್, ರಾಜನ್, ಜಮಾಲುದ್ದೀನ್, ಪ್ರಬಲ ಮಹಾದೇವನ್, ರೋಶಿನಿ ಎಂದು ಗುರುತಿಸಲಾಗಿದೆ.
ನಾಲ್ವರು ಭಾರತೀಯರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ. ಮೂವರು ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರಿ ಕಚೇರಿ ಮೊದಲಿಗೆ ಟ್ವೀಟ್ ಮಾಡಿತ್ತು.