ಅಂತರಾಷ್ಟ್ರೀಯ

30 ವರ್ಷ ನಕಲಿ ಸೌದಿ ರಾಜಕುಮಾರನಾಗಿ ಮೆರೆದವನಿ​ಗೆ 18 ವರ್ಷ ಜೈಲು ಶಿಕ್ಷೆ

Pinterest LinkedIn Tumblr


ಆತ ಸೌದಿ ಅರೇಬಿಯಾದ ರಾಜಕುಮಾರ ಎಂದೇ ಹೇಳಿಕೊಂಡಿದ್ದ. ಅವರಂತೇ ಐಷರಾಮಿ ಬದುಕು ಕೂಡ ಸಾಗಿಸುತ್ತಿದ್ದ. ಎಲ್ಲಿಗೆ ಹೋದರೂ ಸುತ್ತ-ಮುತ್ತ ಅಂಗರಕ್ಷಕರು. ಖಾಸಗಿ ಜೆಟ್, ವ್ಯಯಿಸಲು ಬೇಕಾದಷ್ಟು ಹಣ. ಹೀಗೆ ಯಾವುದಕ್ಕೂ ಕಮ್ಮಿ ಇಲ್ಲವೆಂಬಂತೆ ರಾಜಕುಮಾರನಾಗಿ ಮೆರೆದಿದ್ದ. ಆದರೆ ಈತನ ಬಂಡವಾಳ ಬೆಳಕಿಗೆ ಬಂದಾಗಲೇ ಗೊತ್ತಾಗಿದ್ದು ಈತ ನಕಲಿ ರಾಜಕುಮಾರ ಎಂದು.

ಹೌದು, ಸ್ವಲ್ಪ ವಿಚಿತ್ರ ಎನಿಸಿದರೂ ಇಂತಹದೊಂದು ಘಟನೆ ಮಿಯಾಮಿಯಲ್ಲಿ ನಡೆದಿದೆ. ತಾನು ಸೌದಿ ಅರೇಬಿಯಾದ ರಾಜ ವಂಶಸ್ಥ. ನನ್ನ ಹೆಸರು ಖಾಲಿದ್ ಬಿನ್ ಅಲ್​ ಸೌದ್ ಎಂದು ಹೇಳಿಕೊಂಡು 8 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹಣವನ್ನು ವಂಚಿಸಿದ್ದ ಜಗತ್​ ಕಿಲಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಅಸಲಿ ನಾಮ ಆಂಥೋನಿ ಗಿಗ್ನ್ಯಾಕ್.

ಗಿಗ್ನ್ಯಾಕ್ ಸೌದಿ ರಾಜಮನೆತನದವರು ಧರಿಸುವ ಬಟ್ಟೆಗಳನ್ನು ತೊಟ್ಟು ಥೇಟು ಸೌದಿ ರಾಜಕುಮಾರರಂತೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದನು. ಇದಕ್ಕಾಗಿ ರಾಜ ಕುಟುಂಬಕ್ಕೆ ಸಂಬಂಧಪಟ್ಟ ಗುರುತುಪತ್ರ ಎಲ್ಲವನ್ನೂ ತೋರಿಸುತ್ತಿದ್ದನು. ಪ್ರತಿಯೊಂದು ನಕಲಿ ಗುರುತು ಪತ್ರಗಳನ್ನು ಸೃಷ್ಟಿಸಿಕೊಂಡಿದ್ದ ಈ ವಂಚಕನ ಮಾತಿಗೆ ದೊಡ್ಡ ದೊಡ್ಡ ಉದ್ಯಮಿಗಳೇ ಮರುಳಾಗುತ್ತಿದ್ದರು.

ಈತನ ಮಾತನ್ನು ನಂಬಿದ್ದ ಅಮೆರಿಕ, ಕೆನಡಾ, ಇಂಗ್ಲೆಂಡ್, ಹಾಂಕಾಂಗ್​ನ ಉದ್ಯಮಿಗಳು ಆತನ ಖಾತೆಗೆ ಹಣವನ್ನು ಡೆಪಾಸಿಟ್ ಮಾಡುತ್ತಿದ್ದರು. ಸೌದಿಯೊಂದಿಗೆ ವ್ಯವಹಾರ ಕುದುರಬಹುದು ಎಂಬ ನಿರೀಕ್ಷೆಯಲ್ಲಿ ದೊಡ್ಡ ದೊಡ್ಡ ಕುಳಗಳು ಹಣ ನೀಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಇದೇ ಹಣದಿಂದ ಈತ ಸೌದಿ ರಾಜಕುಮಾರಂತೆ ಖಾಸಗಿ ಜೆಟ್​, ಐಷರಾಮಿ ಕಾರುಗಳಲ್ಲಿ ಸಂಚರಿಸುತ್ತಿದ್ದನು. ಮಿಯಾಮಿಯ ಫಿಶರ್ ಐಲ್ಯಾಂಡ್​ನಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದ. ಅದು ಕೂಡ ಯಾವುದೇ ರಾಜಕುಮಾರರಿಗೂ ಕಡಿಮೆ ಇಲ್ಲವೆಂಬತೆ.

48 ವರ್ಷದ ಆಂಥೋನಿ ಗಿಗ್ನ್ಯಾಕ್, ನಕಲಿ ರಾಜತಾಂತ್ರಿಕ ಲೈಸೆನ್ಸ್ ನಂಬರ್ ಪ್ಲೇಟ್ ಹೊಂದಿರುವ ಫೆರಾರಿ ಕಾರಿನಲ್ಲಿಯೇ ಓಡಾಡಿಕೊಂಡಿದ್ದನು. ಇದರಿಂದ ಈತನ ಮೇಲೆ ಯಾರಿಗೂ ಸಂದೇಹ ಬರುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಗಿಗ್ನ್ಯಾಕ್ ತನ್ನ ಬೆಳೆಯನ್ನು ರಾಯಲ್ ಲುಕ್​ನಲ್ಲೇ ಬೇಯಿಸಿಕೊಳ್ಳುತ್ತಿದ್ದ. ಅಸಲಿಗೆ ಈ ವಂಚಕನ ಕಥೆ ಶುರುವಾಗುವುದೇ ಯೌವ್ವನದಲ್ಲಿ. ಕೊಲಂಬಿಯಾದಲ್ಲಿ ಜನಿಸಿದ್ದ ಗಿಗ್ನ್ಯಾಕ್​ನನ್ನು ಕುಟುಂಬವೊಂದು ದತ್ತು ತೆಗೆದುಕೊಂಡಿದ್ದರು. 17 ರ ಹರೆಯಕ್ಕೆ ಬರುತ್ತಿದ್ದಂತೆ ತನ್ನ ಚಾಲಾಕಿತನವನ್ನು ತೋರಿಸಲು ಗಿಗ್ನ್ಯಾಕ್ ಪ್ರಾರಂಭಿಸಿದ್ದ. ತನ್ನ ಹದಿಹರೆಯದಲ್ಲೇ ಹಲವಾರು ವಂಚನೆ ಪ್ರಕರಣಗಳಲ್ಲಿ ಈತ ಬಂಧನಕ್ಕೆ ಕೂಡ ಒಳಗಾಗಿದ್ದನು.

ರಾಯಲ್ ಕಳ್ಳ ಸಿಕ್ಕಿಬಿದ್ದದ್ದು ಹೇಗೆ?
ರಿಯಲ್ ಎಸ್ಟೇಟ್ ವ್ಯವಹಾರ ಕುದುರಿಸುವುದಾಗಿ ಹಲವರಿಂದ ಗಿಗ್ನ್ಯಾಕ್ ಹಣ ವಸೂಲಿ ಮಾಡುತ್ತಿದ್ದನು. ಹೀಗೆ ಒಂದು ದಿನ ಐಷರಾಮಿ ಹೋಟೆಲ್​ವೊಂದರಲ್ಲಿ ಹೂಡಿಕೆದಾರರೊಂದಿಗೆ ಜತೆ ಮೀಟಿಂಗ್ ನಡೆಸಿದ್ದ. ಈ ವೇಳೆ ಹಂದಿ ಮಾಂಸವನ್ನು ಆರ್ಡರ್ ಮಾಡಿದ್ದನು. ಇಸ್ಲಾಂ ಪ್ರಕಾರ ಹಂದಿ ಮಾಂಸ ಸೇವನೆ ನಿಷಿದ್ಧ. ಹಾಗೆಯೇ ಸೌದಿಯಲ್ಲಿ ಹಂದಿ ಮಾಂಸಕ್ಕೆ ಸ್ಥಾನವಿಲ್ಲ. ಆದರೂ ಇದೇ ಮಾಂಸವನ್ನೇ ತಿನ್ನುತಿರುವುದರಿಂದ ಗಿಗ್ನ್ಯಾಕ್ ಮೇಲೆ ಜತೆಗಿದ್ದವರಿಗೆ ಅನುಮಾನ ಮೂಡಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಇದರಿಂದ ಸೌದಿ ರಾಜಕುಮಾರನ ಅಸಲಿ ಮುಖವಾಡ ಕಳಚಿತು. ಇದೀಗ 2017ರ ನವೆಂಬರ್ 17ರಂದು 18 ಕೌಂಟ್ಸ್ ಆರೋಪದಡಿ ಆಂಥೋನಿ ಗಿಗ್ನ್ಯಾಕ್​ನನ್ನು ಬಂಧಿಸಲಾಗಿದ್ದು, ವಿದ್ಯುನ್ಮಾನ ವಂಚನೆ ಮತ್ತು ಗುರುತಿನ ಪತ್ರದ ದುರ್ಬಳಕೆ ಸೇರಿದಂತೆ ಹಲವಾರು ಆರೋಪಗಳನ್ನು ದಾಖಲಿಸಲಾಗಿದೆ. ಸದ್ಯ ವಿಚಾರಣೆ ನಡೆಸಿರುವ ನ್ಯಾಯಾಲಯವು 30 ವರ್ಷ ನಕಲಿ ರಾಜಕುಮಾರನಾಗಿ ಮೆರೆದ ಆಂಥೋನಿ ಗಿಗ್ನ್ಯಾಕ್​ಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಮಿಯಾಮಿ ಹೆರಾಲ್ಡ್ ವರದಿ ಮಾಡಿದೆ.

Comments are closed.