ಬಹರೈನ್; ಇದೆ ಅಬಿರುವ ಮೇ ತಿಂಗಳ ಮೂರನೇ ತಾರೀಖಿನ ಶುಕ್ರವಾರದಂದು ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ಇದಾಗಲೇ ಕ್ಷಣಗಣನೆ ಆರಂಭವಾಗಿದೆ . ಬಹರೈನ್ ನ ಸಂಘದ ಯಕ್ಷಗಾನ ಕಲಾವಿದರು “”ವೀರ ಬಬ್ರುವಾಹನ ಹಾಗು “ಸುದರ್ಶನೋಪಖ್ಯಾನ” ಎಂಬ ಎರಡು ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಗಳನ್ನು ಆಡಿತೊರಿಸಲಿದ್ದು ಈ ಯಕ್ಷಗಾನ ಕಾರ್ಯಕ್ರಮವು ಇಲ್ಲಿನ ‘ಸಗಯ್ಯಾ ‘ ಪರಿಸರದಲ್ಲಿರುವ ಕೇರಳ ಕೆಥೋಲಿಕ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ಮೇ 3 ರಂದು ಸಂಜೆ 5;30ಕ್ಕೆ ಸರಿಯಾಗಿ ಪ್ರದರ್ಶನ ಕಾಣಲಿದೆ.
ಇಲ್ಲಿನ ಕನ್ನಡ ಸಂಘದ ಆಶ್ರಯದಲ್ಲಿ ಯಕ್ಷೋಪಾಸನ ಕೇಂದ್ರದ ಮೂಲಕ ನಾಡಿನ ಖ್ಯಾತ ಯಕ್ಷಗಾನ ಕಲಾವಿದ ದೀಪಕ್ ಪೇಜಾವರ ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಯಕ್ಷಗಾನ ಪ್ರದರ್ಶನದಲ್ಲಿ ಅವರ ಯಕ್ಷೋಪಾಸನ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಬಾಲ ಕಲಾವಿದರು ರಂಗ ಪ್ರವೇಶ ಮಾಡುತ್ತಿದ್ದಾರೆ .
ಬಾಲಕ,ಬಾಲಕಿಯರು ಸೇರಿದಂತೆ ಇಲ್ಲೇ ಹೆಜ್ಜೆಗಾರಿಕೆ,ಅರ್ಥಗಾರಿಕೆ ಹಾಗು ಅಭಿನಯ ಕಲಿತ ಸುಮಾರು ಹತ್ತು ಬಾಲ ಕಲಾವಿದರಿಂದ “ವೀರ ಬಬ್ರುವಾಹನ ” ಎಂಬ ಯಕ್ಷಗಾನ ಪ್ರದರ್ಶನವು ರಂಗದಲ್ಲಿ ಮೂಡಿಬರಲಿದೆ. ಇದಾಗಲೇ ಸಂಪೂರ್ಣ ಹಿಮ್ಮೇಳ ಹಾಗು ಮುಮ್ಮೇಳವನ್ನು ಹೊಂದಿರುವ ಖ್ಯಾತಿಯನ್ನು ಪಡೆದಿರುವ ಬಹರೈನ್ ಯಕ್ಷಗಾನ ತಂಡಕ್ಕೆ ಇದೀಗ ಬಾಲ ಕಲಾವಿದರುಗಳ ಸೇರ್ಪಡೆಯು ಇನ್ನಷ್ಟು ಹೆಮ್ಮೆಯನ್ನು ತಂದಿದ್ದು ನಮ್ಮ ನಾಡಿನ ಗಂಡು ಕಲೆಯನ್ನು ಯುವ ಪೀಳಿಗೆಗೂ ಕಲಿಸಿ ಕೊಲ್ಲಿಯ ಈ ಮಣ್ಣಿನಲ್ಲೂ ಉಳಿಸಿ ಬೆಳೆಸುವ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ .ಬಾಲ ಕಲಾವಿದರ ಯಕ್ಷಗಾನ ಪ್ರದರ್ಶನದ ನಂತರ ಹಿರಿಯ ಕಲಾವಿದರುಗಳಿಂದ “ಸುದರ್ಶನೋಪಖ್ಯಾನ” ಎಂಬ ಯಕ್ಷಗಾನ ಪ್ರಸಂಗವು ಆಡಿತೋರಿಸಲಿದ್ದಾರೆ .
ನಾಡಿನ ಖ್ಯಾತ ಹಿಮ್ಮೇಳ ವಾದಕ ಶ್ರೀ ಶ್ರೀಧರ್ ವಿಟ್ಲಾ ರವರು ಈ ಯಕ್ಷಗಾನ ಪ್ರದರ್ಶನದಲ್ಲಿ ವಿಶೇಷವಾಗಿ ಭಾಗವಹಿಸಿ ಚೆಂಡೆಯಲ್ಲಿ ತಮ್ಮ ಕೈ ಚಳಕ ತೋರಲಿದ್ದಾರೆ . ಸೌದಿ ಅರೇಬಿಯಾದ ಹವ್ಯಾಸಿ ಭಾಗವತರಾದ ರೋಶನ್ ಕೋಟ್ಯಾನ್ ಹಾಗು ನಾರಾಯಣ ಪಂಜತೊಟ್ಟಿಯವರು ಭಾಗವತರಾಗಿ ತಮ್ಮ ಶುಶ್ರಾವ್ಯ ಕಂಠದಿಂದ ಮೋಡಿಮಾಡಲಿದ್ದರೆ , ದ್ವೀಪದ ಪ್ರತಿಭಾವಂತ ಕಲಾವಿದರುಗಳು ಈ ಯಕ್ಷಗಾನ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಮೆರೆದು ದ್ವೀಪದ ಕಲಾಪ್ರೇಮಿ ಗಳನ್ನು ರಂಜಿಸಲಿದ್ದಾರೆ . ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಮುಕ್ತವಾಗಿದ್ದು ದ್ವೀಪದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಯಕ್ಷಗಾನ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಡಬೇಕೆಂದು ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಯವರು ಕೆರೆ ನೀಡಿದ್ದಾರೆ . ಯಕ್ಷಗಾನ ಪ್ರದರ್ಶನದ ನಂತರ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ .
ಕಳೆದ ನಾಲ್ಕು ದಶಕಗಳಿಂದ ಈ ದ್ವೀಪರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಸಾಂಸ್ಕ್ರತಿಕ ಲೋಕದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಿ ಗೆದ್ದಿದೆ . ನಾಡಿನ ಸಾಂಪ್ರದಾಯಿಕ ಹಾಗು ಪುರಾತನ ಕಲೆ,ಸಂಸ್ಕ್ರತಿಗಳನ್ನು ಉಳಿಸಿ ಬೆಳೆಸುವುದಕ್ಕೆ ವಿಶೇಷ ಆಸ್ಥೆ ವಹಿಸುತ್ತಿದೆ . ಯಕ್ಷಗಾನವನ್ನು ಪ್ರಪ್ರಥಮವಾಗಿ ಸೀಮೋಲಂಘನ ಮಾಡಿಸಿದ ಕೀರ್ತಿ ಕೂಡ ಬಹರೈನ್ ಕನ್ನಡ ಸಂಘಕ್ಕೆ ಸಂದರೆ ಯಕ್ಷಗಾನದ ಸಂಪೂರ್ಣ ಹಿಮ್ಮೇಳ ಹಾಗು ಮುಮ್ಮೇಳ ಹೊಂದಿರುವ ಸಂಘ ಎನ್ನುವ ಹೆಗ್ಗಳಿಕೆ ಕೂಡ ಇಲ್ಲಿನ ಕನ್ನಡ ಸಂಘಕ್ಕಿದೆ. ಇದೀಗ ನುರಿತ ಬಾಲ ಕಲಾವಿದರುಗಳ ಯಕ್ಷ ತಂಡವೊಂದು ರೂಪುಗೊಂಡಿದ್ದು ನಿಜವಾಗಿಯೂ ಅಭಿನಂದನೀಯ .
ವರದಿ-ಕಮಲಾಕ್ಷ ಅಮೀನ್ .