ಗಲ್ಫ್

ದುಬೈ ಅಂತರಾಷ್ಟ್ರೀಯ ಡುಕಾಟಿ ಚಾಂಪಿಯನ್ ಶಿಪ್ ಬೈಕ್ ರೇಸಿನಲ್ಲಿ ತೃತೀಯ ಸ್ಥಾನ ಪಡೆದ ಕನ್ನಡಿಗ ನಾಸಿರ್!

Pinterest LinkedIn Tumblr

ದುಬೈ : ದುಬೈ ಮೋಟಾರ್ ಸಿಟಿಯಲ್ಲಿ ಅತ್ಯಂತ ರೋಚಕವಾಗಿ ನಡೆದ ಅಂತಾರಾಷ್ಟ್ರೀಯ ಡುಕಾಟಿ ಚಾಂಪಿಯನ್ ಶಿಪ್ ಮೋಟಾರ್ ಬೈಕ್ ರೇಸಿನಲ್ಲಿ ಕನ್ನಡಿಗ ನಾಸಿರ್ ಸೈಯದ್ ತೃತೀಯ ಸ್ಥಾನ ಗೆದ್ದಿದ್ದಾರೆ. 12 ದೇಶದ ಸುಮಾರು 16 ಸ್ಪರ್ಧಿಗಳು ಭಾಗವಹಿಸಿದ್ದ ಈ ರೋಚಕ ಬೈಕ್ ರೇಸಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅನಿವಾಸಿ ಕನ್ನಡಿಗ ನಾಸಿರ್ ಎಲ್ಲಾ ಸ್ಪರ್ಧಿಗಳಿಗೂ ಕಠಿಣ ಸ್ಪರ್ಧೆಯೊಡ್ಡಿ ತೃತೀಯ ಸ್ಥಾನ ಪಡೆಯಲು ಯಶಸ್ವಿಯಾದರು.

ಅಲ್ ಮಸೂದ್ ನ್ಯಾಷನಲ್ ಮೋಟಾರ್ಸ್ ರ ಡುಕಾಟಿ ಚಾಂಪಿಯನ್ ಶಿಪ್ ಮೋಟಾರ್ ಬೈಕ್ ರೇಸಿನಲ್ಲಿ ತೃತೀಯ ಸ್ಥಾನ ವಿಜೇತರಾದ ನಾಸಿರ್ ಸೈಯದ್ ಮೂಲತಃ ಕನ್ನಡಿಗ, ಉಡುಪಿ ಜಿಲ್ಲೆಯ ಕಾರ್ಕಳದವರಾದ ನಾಸಿರ್ ಯುರೋಪಿಯನ್ ರಾಷ್ಟ್ರಗಳೇ ಆಧಿಪತ್ಯ ಸಾಧಿಸುವ ಬೈಕ್ ರೇಸಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾರೆ. ಹಲವಾರು ಅಂತರಾಷ್ಟ್ರೀಯ ಮತ್ತು ಅರಬ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿಜಯದ ಸಂತೋಷ ಹಂಚಿಕೊಂಡ ನಾಸಿರ್ ಕನ್ನಡ ಮಾಧ್ಯಮ ಮಿತ್ರರೊಂದಿಗೆ ಅಚ್ಚ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿಮೂಡಿಸಿದರು.

“ಯುಎಈಯಲ್ಲಿ 15ವರ್ಷಗಳಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿರುವೆ, ನಾಲ್ಕು ವರ್ಷಗಳಿಂದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವೆನು, ಭಾರತವನ್ನು ಪ್ರತಿನಿಧಿಸುವ ಇಬ್ಬರಲ್ಲಿ ನಾನೊಬ್ಬನೇ ಕನ್ನಡಿಗ, ಕನ್ನಡ ಮಾತನಾಡದೇ ವರ್ಷಗಳೇ ಕಳೆದು ಹೋಗಿದೆ, ನಿಮ್ಮೊಂದಿಗೆ ಮಾತನಾಡಲು ಖುಷಿಯಾಗುತ್ತಿದೆ, ನಮ್ಮ ದೇಶದಲ್ಲಿ ಹಲವಾರು ಅತ್ಯುತ್ತಮ ಪ್ರತಿಭಾವಂತ ಯುವಕರು ಈ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಏರಬಹುದು, ಆದರೆ ನಮ್ಮ ಸರಕಾರ ಕ್ರೀಡೆಗೆ ಪ್ರೋತ್ಸಾಹಿಸಲು ಉತ್ತಮ ಸೌಲಭ್ಯಗಳನ್ನು ನೀಡಿದರೆ ಖಂಡಿತ ಯುವಕರಿಗೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.

ಭಾರತದಲ್ಲಿ ನಿರ್ಲಕ್ಷ್ಯತೆಯಿಂದ ವೇಗವಾಗಿ ಬೈಕ್ ಚಲಾಯಿಸಿ ಅಪಘಾತದಿಂದ ಸಾವನ್ನಪ್ಪುವ ವರದಿಗಳನ್ನು ದಿನನಿತ್ಯ ಪತ್ರಿಕೆ ಮತ್ತು ಟಿವಿ ಮಾಧ್ಯಮದ ಮೂಲಕ ತಿಳಿದು ಬೇಸರವಾಗುತ್ತದೆ, ಯುವಕರ ಪ್ರತಿಭೆ ಮತ್ತು ಆಸಕ್ತಿಯನ್ನು ಸರಿಯಾದ ರೀತಿಯಲ್ಲಿ ಸರ್ಕಾರ ಅವರಿಗೆ ಕ್ರೀಡಾ ಸೌಲಭ್ಯ ನೀಡುವ ಮೂಲಕ ಉಪಯೋಗಿಸಿದರೆ ಇದೇ ಪ್ರತಿಭೆ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೆ ಎಂದು ನಾಸಿರ್ ಕಾಳಜಿ ವ್ಯಕ್ತಪಡಿಸಿದರು.

ಬಾಲ್ಲದಿಂದಲೂ ಇದ್ದ ಬೈಕ್ ರೇಸಿಂಗ್ ಮೇಲಿನ ಪ್ರೀತಿ ದುಬೈನಲ್ಲಿ ಬಂದು ಕಠಿಣ ಪರಿಶ್ರಮದ ಮೂಲಕ ಇದೀಗ ಡುಕಾಟಿ ಚಾಂಪಿಯನ್ ಶಿಪ್ ಎಲ್ಲರ ಮನೆಮಾತಾದ ಹೆಸರು ಗಳಿಸಿದ 41ರ ಹರೆಯದ ನಾಸಿರ್ ಅವರ ಪುತ್ರನೂ ತಂದೆಯಂತೆ ಬೈಕ್ ರೇಸರ್. ಬಹರೈನ್ ನಲ್ಲಿ ನಡೆದ ಬೈಕ್ ರೇಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದ 18 ರ ಹರೆಯದ ಪುತ್ರ ಸಮೀ ನಾಸಿರ್ ತಂದೆಯ ಹಾದಿಯಲ್ಲೇ ಮುನ್ನಡೆಯುವ ತವಕದಲ್ಲಿದ್ದಾರೆ.

ವರದಿ : ಕರ್ನಾಟಕ ಮೀಡಿಯಾ ಫೋರಮ್ ಯು ಎ ಇ

Comments are closed.