ಗಲ್ಫ್

ಬಹರೈನ್ ಕನ್ನಡಿಗರ ಕನಸಿನ “ಕನ್ನಡ ಭವನ”ಕ್ಕೆ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರವರಿಂದ ಶಂಕುಸ್ಥಾಪನೆ

Pinterest LinkedIn Tumblr

ಬಹರೈನ್ ;ಇಲ್ಲಿನ ಕನ್ನಡಿಗರ ಬಹುಕಾಲದ ಕನಸಾಗಿರುವ “ಕನ್ನಡ ಭವನ ” ದ ನಿರ್ಮಾಣಕ್ಕೆ ಬೇಕಾಗಿರುವ ಎಲ್ಲಾ ಪ್ರಾಥಮಿಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ದೇಶದ ಮಾಜಿ ಪ್ರಧಾನಿ ,ನಾಡಿನ ಜನಪ್ರಿಯ ರಾಜಕೀಯ ಮುತ್ಸದ್ದಿ ಶ್ರೀ ಎಚ್ .ಡಿ .ದೇವೇಗೌಡರವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ‘”ಕನ್ನಡ ಭವನ”ದ ಶಂಕು ಸ್ಥಾಪನೆ ಮಾಡಲಿದ್ದಾರೆ .

ಭಾರತೀಯ ರುಪಾಯೀ ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ದ್ವೀಪದ ಹೃದಯ ಭಾಗವಾದ ಮನಾಮದಲ್ಲಿ ತಲೆಯೆತ್ತಲಿರುವ ಸುಸಜ್ಜಿತ ಕನ್ನಡ ಭವನದಲ್ಲಿ ವಿಶಾಲವಾದ ಸಭಾಂಗಣವೂ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಒಳಗೊಂಡಿರುತ್ತದೆ . ಶಂಕು ಸ್ಥಾಪನೆ ಕಾರ್ಯಕ್ರಮವು ಇದೇ ನವೆಂಬರ್ ತಿಂಗಳ 13ನೇ ತಾರೀಖಿನ ಮಂಗಳವಾರದಂದು ಬೆಳಗ್ಗೆ 6:30 ಕ್ಕೆ ಕನ್ನಡ ಸಂಘದ ಆವರಣದಲ್ಲಿ ಜರುಗಲಿದ್ದು ಕಾರ್ಯಕ್ರಮದಲ್ಲಿ ಕನ್ನಡಿಗರೆಲ್ಲರೂ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ಕರೆ ನೀಡಿದ್ದಾರೆ .

ಕನ್ನಡ ಕಲೆ,ಭಾಷೆ,ಸಂಸ್ಕ್ರತಿಗೆ ಕಳೆದ ನಾಲ್ಕು ದಶಕಗಳಿಂದಲೂ ಕೊಲ್ಲಿಯ ಮಣ್ಣಿನಲ್ಲಿ ಅನನ್ಯ ಕೊಡುಗೆ ನೀಡುತ್ತಾ ಬಂದಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಅನೇಕ ಸಾಧನೆಗಳನ್ನು ಮಾಡಿದೆ . ಇದೀಗ ಕರ್ನಾಟಕ ಘನ ಸರಕಾರದ ಅನುದಾನದೊಂದಿಗೆ ಕೊಲ್ಲಿ ರಾಷ್ತ್ರದಲ್ಲೊಂದು ಸುಸಜ್ಜಿತ “ಕನ್ನಡ ಭವನ” ವೊಂದನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿರುವುದು ಇಲ್ಲಿನ ಕನ್ನಡಿಗರ ನಾಡು ,ನುಡಿಯ ಮೇಲಿನ ಅದಮ್ಯ ಪ್ರೀತಿಗೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಪ್ರಥಮ ‘ಕನ್ನಡ ಭವನ” ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ . ಸುಮಾರು ಒಂಭತ್ತು ತಿಂಗಳ ಕಾಮಗಾರಿಯಲ್ಲಿ ಪೂರ್ಣಗೊಳ್ಳಲಿರುವ ಈ “ಕನ್ನಡ ಭವನ” ವು ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಸುಮಾರು ಇಪ್ಪತ್ತು ಸಾವಿರ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಲಿದ್ದು ,ನಾಡಿನ ಹಾಗು ದ್ವೀಪದ ಕನ್ನಡಿಗರನ್ನು ಬೆಸೆಯುವ ಸ್ನೇಹ ಸೇತುವಾಗಿ ಕೂಡ ಕಾರ್ಯನಿರ್ವಹಿಸಲಿದೆ . ಎಲ್ಲರ ತನು ,ಮನ,ಧನದ ಸಹಕಾರದೊಂದಿಗೆ ಆದಷ್ಟು ಬೇಗನೆ “ಕನ್ನಡ ಭವನ” ತಲೆಯೆತ್ತಿ ನಿಲ್ಲಲಿ ಎನ್ನುವುದೇ ಇಲ್ಲಿನ ಕನ್ನಡಿಗರ ಆಶಯ .

ವರದಿ-ಕಮಲಾಕ್ಷ ಅಮೀನ್

Comments are closed.