ಗಲ್ಫ್

ಮತ್ತೆ ಮೊಳಗಲಿದೆ ದ್ವೀಪದಲ್ಲಿ ಗಂಡು ಕಲೆಯ ಚೆಂಡೆ : ದ್ವೀಪದ ಯಕ್ಷಗಾನ ಪ್ರೇಮಿಗಳಿಗೆ ತೆಂಕು -ಬಡಗಿನ ರಸದೌತಣ ‘ಯಕ್ಷ ವೈಭವ”

Pinterest LinkedIn Tumblr

ಬಹರೈನ್; ಇದೆ ಸೆಪ್ಟೆಂಬರ್ ತಿಂಗಳ 21 ನೇ ತಾರೀಖಿನ ಶುಕ್ರವಾರದಂದು ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಆಯೋಜಿಸಿರುವ “ಯಕ್ಷ ವೈಭವ” ಕಾರ್ಯಕ್ರಮಕ್ಕೆ ಇದಾಗಲೇ ಕ್ಷಣಗಣನೆ ಆರಂಭವಾಗಿದೆ . ನಾಡಿನ ಯಕ್ಷಲೋಕದ ದಿಗ್ಗಜ ಕಲಾವಿದರುಗಳ ಅಪೂರ್ವ ಸಂಗಮದೊಂದಿಗೆ ಕನ್ನಡ ಸಂಘದ ಯಕ್ಷಗಾನ ಕಲಾವಿದರು “ಗದಾಯುದ್ಧ ಹಾಗು ರಕ್ತ ರಾತ್ರಿ” ಎಂಬ ಎರಡು ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಗಳನ್ನು ಆಡಿತೊರಿಸಲಿದ್ದು ಈ ಯಕ್ಷಗಾನ ಕಾರ್ಯಕ್ರಮವು ಇಲ್ಲಿನ ‘ಸಗಯ್ಯಾ ‘ ಪರಿಸರದಲ್ಲಿರುವ ಕೇರಳ ಕೆಥೋಲಿಕ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ಸಂಜೆ 5;30ಕ್ಕೆ ಸರಿಯಾಗಿ ಪ್ರದರ್ಶನ ಕಾಣಲಿದೆ.

ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲಿಯೇ ತೆಂಕು ಹಾಗು ಬಡಗು ತಿಟ್ಟಿನ ಈ ಕೂಡಾಟವು ಪ್ರಪ್ರಥಮವಾಗಿದ್ದು ,ಇದು ದ್ವೀಪದ ಯಕ್ಷಪ್ರೇಮಿಗಳನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ . ಖ್ಯಾತ ಯಕ್ಷಗಾನ ಕಲಾವಿದ ದೀಪಕ್ ಪೇಜಾವರ ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಯಕ್ಷಗಾನ ಪ್ರದರ್ಶನದಲ್ಲಿ ನಾಡಿನ ಯಕ್ಷಲೋಕದ ಅನೇಕ ಮೇರು ಕಲಾವಿದರುಗಳು ಭಾಗವಹಿಸಲಿದ್ದಾರೆ . ನಾಡಿನ ಖ್ಯಾತ ಬಡಗು ತಿಟ್ಟು ಹಿಮ್ಮೇಳ ಕಲಾವಿದರಾದ ಶ್ರೀ ಮಹೇಶ್ ಮಂದರ್ತಿ,ತೆಂಕು ತಿಟ್ಟಿನ ಖ್ಯಾತ ಚೆಂಡೆ ವಾದಕ ಅಡೂರು ಲಕ್ಷ್ಮೀನಾರಾಯಣ ,ಬಡಗು ತಿಟ್ಟಿನ ಸುಪ್ರಸಿದ್ಧ ಭಾಗವತ ಹೆಬ್ರಿ ಗಣೇಶ್ ಕುಮಾರ್ ,ತೆಂಕು ತಿಟ್ಟಿನ ಸುಪ್ರಸಿದ್ಧ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ,ಖ್ಯಾತ ಮದ್ದಳೆ ವಾದಕ ನರಸಿಂಹ ಹೆಗಡೆ ಮುರೂರು ,ಸೌದಿ ಅರೇಬಿಯಾದ ಹವ್ಯಾಸಿ ಭಾಗವತರಾದ ರೋಶನ್ ಕೋಟ್ಯಾನ್ ಮುಂತಾದವರ ಜೊತೆಗೆ ದ್ವೀಪದ ಪ್ರತಿಭಾವಂತ ಕಲಾವಿದರುಗಳು ಈ ಯಕ್ಷಗಾನ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಮೆರೆದು ದ್ವೀಪದ ಕಲಾಪ್ರೇಮಿ ಗಳನ್ನು ರಂಜಿಸಲಿದ್ದಾರೆ . ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಮುಕ್ತವಾಗಿದ್ದು ದ್ವೀಪದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಯಕ್ಷಗಾನ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಡಬೇಕೆಂದು ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಯವರು ಕೆರೆ ನೀಡಿದ್ದಾರೆ .

ಕಳೆದ ನಾಲ್ಕು ದಶಕಗಳಿಂದ ಈ ದ್ವೀಪರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಸಾಂಸ್ಕ್ರತಿಕ ಲೋಕದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಿ ಗೆದ್ದಿದೆ . ಈ ಹಿಂದೆ ಪ್ರದರ್ಶನ ಕಂಡಿದ್ದ ಯಕ್ಷಗಾನ ಕಾರ್ಯಕ್ರಮವಾದ “ಗಲ್ಫ್ ಯಕ್ಷವೈಭವ ” ಅಭೂತಪೂರ್ವ ಯಶಸ್ಸನ್ನು ಕಂಡಿದೆ . ನಾಡಿನ ಸಾಂಪ್ರದಾಯಿಕ ಹಾಗು ಪುರಾತನ ಕಲೆ,ಸಂಸ್ಕ್ರತಿಗಳನ್ನು ಉಳಿಸಿ ಬೆಳೆಸುವುದಕ್ಕೆ ವಿಶೇಷ ಆಸ್ಥೆ ವಹಿಸುತ್ತಿದೆ . ಯಕ್ಷಗಾನವನ್ನು ಪ್ರಪ್ರಥಮವಾಗಿ ಸೀಮೋಲಂಘನ ಮಾಡಿಸಿದ ಕೀರ್ತಿ ಕೂಡ ಬಹರೈನ್ ಕನ್ನಡ ಸಂಘಕ್ಕೆ ಸಂದರೆ ಯಕ್ಷಗಾನದ ಸಂಪೂರ್ಣ ಹಿಮ್ಮೇಳ ಹಾಗು ಮುಮ್ಮೇಳ ಹೊಂದಿರುವ ಸಂಘ ಎನ್ನುವ ಹೆಗ್ಗಳಿಕೆ ಕೂಡ ಇಲ್ಲಿನ ಕನ್ನಡ ಸಂಘಕ್ಕಿದೆ.

ವರದಿ-ಕಮಲಾಕ್ಷ ಅಮೀನ್ 

Comments are closed.