ಗಲ್ಫ್

ಯುಎಇಯಲ್ಲಿ ಅಕ್ರಮವಾಗಿರುವವರಿಗೆ ಕೆಲಸ ಹುಡುಕಲು 6 ತಿಂಗಳ ವೀಸಾಕ್ಕೆ ಅವಕಾಶ

Pinterest LinkedIn Tumblr

ದುಬೈ: ವೀಸಾ ಕ್ಷಮಾದಾನ ಯೋಜನೆಯ ಮೂಲಕ ತಮ್ಮ ಅಕ್ರಮ ವಾಸ್ತವ್ಯವನ್ನು ಸರಿಪಡಿಸಲು ಮುಂದಾಗಿರುವ ಯುಎಇಯ ಅಕ್ರಮ ನಿವಾಸಿಗಳು, ಕೆಲಸ ಹುಡುಕುವುದಕ್ಕಾಗಿ 6 ತಿಂಗಳ ತಾತ್ಕಾಲಿಕ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ವಾಸ್ತವ್ಯ ಮತ್ತು ವಿದೇಶ ವ್ಯವಹಾರಗಳ ಮಹಾ ನಿರ್ದೇಶನಾಲಯ (ಜಿಡಿಆರ್‌ಎಫ್‌ಎ) ದುಬೈ ಇದರ ಸಹಾಯಕ ಮಹಾ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಖಲಾಫ್ ಅಲ್ ಗೈತ್ ಹೇಳಿದ್ದಾರೆ.

‘‘ಆದಾಗ್ಯೂ, ಆರು ತಿಂಗಳ ಅವಧಿಯಲ್ಲಿ ಅವರಿಗೆ ಕೆಲಸ ಸಿಗದಿದ್ದರೆ ಅವರು ದೇಶವನ್ನು ತೊರೆಯಬೇಕು’’ ಎಂದು ಅವರು ಹೇಳಿದರು.

9 ಕೇಂದ್ರಗಳಲ್ಲಿ ಕ್ಷಮಾದಾನ ಕೋರಿಕೆ ನೋಂದಣಿ

ಕ್ಷಮಾದಾನ ಬಯಸುವವರನ್ನು ಯುಎಇ ಆದ್ಯಂತ ಇರುವ 9 ವಲಸೆ ಕೇಂದ್ರಗಳಲ್ಲಿ ನೋಂದಾಯಿಸಲಾಗುವುದು. ಅಬುಧಾಬಿಯ ನೋಂದಣಿ ಕೇಂದ್ರವು ಶಾಹಮ, ಅಲ್ ಐನ್ ಮತ್ತು ಗಾರ್ಬಿಯಗಳಲ್ಲಿರುವ ವಲಸೆ ಕಚೇರಿಗಳಲ್ಲಿರುತ್ತದೆ. ದುಬೈಯ ನೋಂದಣಿ ಕೇಂದ್ರವು ಅಲ್ ಅವೀರ್‌ನಲ್ಲಿರುತ್ತದೆ. ಇತರ ಎಮಿರೇಟ್‌ಗಳ ನೋಂದಣಿ ಕೇಂದ್ರವು ಪ್ರಮುಖ ವಲಸೆ ಕಚೇರಿಗಳಲ್ಲಿರುತ್ತದೆ.

ಕ್ಷಮಾದಾನ ನೋಂದಣಿ ಕೇಂದ್ರಗಳು ರವಿವಾರದಿಂದ ಗುರುವಾರದವರೆಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ತೆರೆದಿರುತ್ತದೆ.

ಕ್ಷಮಾದಾನ ಅವಧಿ ಆಗಸ್ಟ್ 1ರಿಂದ ಅಕ್ಟೋಬರ್ 31

ಅಕ್ರಮ ವಾಸವನ್ನು ಸರಿಪಡಿಸುವ ಅವಧಿ ಆಗಸ್ಟ್ 1ರಿಂದ ಆರಂಭಗೊಂಡು ಅಕ್ಟೋಬರ್ 31ರವರೆಗೆ ಇರುತ್ತದೆ.

ತನ್ನ ಪ್ರವಾಸ ವೀಸಾ ಅಥವಾ ವಾಸ್ತವ್ಯ ವೀಸಾಗಳ ಅವಧಿಯನ್ನು ಮೀರಿ ಯುಎಇಯಲ್ಲಿ ವಾಸಿಸುತ್ತಿರುವ ಜನರು ಅಥವಾ ಕಾರ್ಮಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ತಮ್ಮ ದಾಖಲೆಯನ್ನು ನವೀಕರಿಸಿಕೊಳ್ಳುವ ಅಥವಾ ದೇಶ ತೊರೆಯುವ ಅವಕಾಶ ಇರುತ್ತದೆ.

ಅವರು ಯುಎಇಯಲ್ಲೇ ಮುಂದುವರಿಯಲು ನಿರ್ಧರಿಸಿದರೆ, ಅಕ್ರಮ ವಾಸ್ತವ್ಯಕ್ಕಾಗಿ ಅವರು ಪಾವತಿಸಬೇಕಾಗಿದ್ದ ಶುಲ್ಕ ಅಥವಾ ದಂಡವನ್ನು ಮನ್ನಾ ಮಾಡಲಾಗುವುದು.

Comments are closed.