ಗಲ್ಫ್

ಮಾರಣಾಂತಿಕ ನಿಫಾ ವೈರಸ್‌ ಗೆ ಬಲಿಯಾದ ದಾದಿ ಮಕ್ಕಳಿಗೆ ದುಬೈ ಉದ್ಯಮಿಗಳ ಸಹಾಯಹಸ್ತ

Pinterest LinkedIn Tumblr


ದುಬೈ: ಮಾರಣಾಂತಿಕ ನಿಫಾ ವೈರಸ್‌ ಸೋಂಕಿತ ರೋಗಿಗಳನ್ನು ಶುಶ್ರೂಷೆ ಮಾಡುತ್ತಾ ಮೃತಪಟ್ಟ ಕೇರಳದ ದಾದಿಯ ಇಬ್ಬರು ಮಕ್ಕಳ ನೆರವಿಗೆ ದುಬೈನ ಇಬ್ಬರು ಉದ್ಯಮಿಗಳು ಮುಂದೆ ಬಂದಿದ್ದಾರೆ. ಸಾವನ್ನೂ ಲೆಕ್ಕಿಸದೆ, ಕರ್ತವ್ಯಪ್ರಜ್ಞೆ ಮೆರೆದ ದಾದಿ ಲಿನಿ ಪುದುಸ್ಸೆರಿ ಅವರನ್ನು ಇದೇ ಸಂದರ್ಭದಲ್ಲಿ ಉದ್ಯಮಿಗಳು ಪ್ರಶಂಶಿಸಿದ್ದಾರೆ.

ಕೇರಳದ ಕಲ್ಲಿಕೋಟೆಯ ಪೆರಂಬ್ರಾ ತಾಲೂಕು ಆಸ್ಪತ್ರೆಯಲ್ಲಿ ನಿಫಾ ವೈರಸ್‌ ಸೋಂಕಿತ ರೋಗಿಗಳನ್ನು ಶುಶ್ರೂಷೆ ಮಾಡುತ್ತಿದ್ದ 28 ವರ್ಷದ ಲಿನಿ, ಸೋಂಕು ತಗುಲಿ ಮೇ 21ರಂದು ಮೃತಪಟ್ಟಿದ್ದರು. ಅವರಿಗೆ 2 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಪಾಲಕ್ಕಾಡ್‌ ಮೂಲದ ಎವಿಟಿಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶಾಂತಿ ಪ್ರಮೋತ್‌ ಮತ್ತು ಜ್ಯೋತಿ ಪಲ್ಲತ್‌ ಅವರು ಲಿನಿ ಅವರ ಪುತ್ರರ ಶಿಕ್ಷಣದ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ವಾಗ್ದಾನ ಮಾಡಿದ್ದಾರೆ.

“ಶುಶ್ರೂಷೆ ವೃತ್ತಿಗಾಗಿ ತನ್ನ ಜೀವನವನ್ನು ಅರ್ಪಿಸಿದ ಲಿನಿ ಅವರಿಗೆ ಗೌರವ ಸೂಚಕವಾಗಿ ನಾವು ಒಂದು ಸಣ್ಣ ಹೆಜ್ಜೆಯನ್ನು ಇರಿಸಿದ್ದೇವೆ. ಅವರ ಕುಟುಂಬಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ಅವರನ್ನು ಸಂಪರ್ಕಿಸಿದ್ದೇವೆ. ಅವರ ಇಬ್ಬರು ಪುತ್ರರ ಶಿಕ್ಷಣದ ಜವಾಬ್ದಾರಿಯನ್ನು ನಾವು ಹೊರುವುದಾಗಿ ಅವರಿಗೆ ತಿಳಿಸಿದ್ದೇವೆ.” — ಶಾಂತಿ ಪ್ರಮೋತ್‌, ಉದ್ಯಮಿ

Comments are closed.