ಗಲ್ಫ್

ಬಹರೈನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ; ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಇಂಟೆಕ್ಸ್ ಲಯನ್ಸ್ ತಂಡ: ಕ್ರಿಕೆಟ್ ತಾರೆ – ಬಾಲಿವುಡ್ ತಾರೆಗಳ ಉಪಸ್ಥಿತಿ

Pinterest LinkedIn Tumblr

ಬಹರೈನ್:ಆರು ತಂಡಗಳು ,ತೊಂಬತ್ತು ಆಟಗಾರರು ಸುಮಾರು ಒಂದು ತಿಂಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿ ಮನರಂಜಿಸಿದ ಬಹರೈನ್ ಪ್ರೀಮಿಯರ್ ಲೀಗ್ ನ ಮೊದಲ ಆವೃತ್ತಿಯ ಕ್ರಿಕೆಟ್ ಪಂದ್ಯಾಟಕ್ಕೆ ಇತ್ತೀಚೆಗೆ ಇಲ್ಲಿನ ಇಸಾ ಟೌನಿನಲ್ಲಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದ ಸಾವಿರಾರು ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಅಂತಿಮ ಹಂತದ ಪಂದ್ಯಾಟ ಜರುಗಿ ಅದರನಂತರ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳ ಕಲಾ ಪ್ರದರ್ಶನ ಹಾಗು ಬಹುಮಾನ ವಿತರಣೆಯೊಂದಿಗೆ ವರ್ಣರಂಜಿತ ಮುಕ್ತಾಯ ಕಂಡಿತು . ಬಾಲಿವುಡ್ಡಿನ ಖ್ಯಾತ ತಾರೆ ಸುನಿಲ್ ಶೆಟ್ಟಿ ,ಖ್ಯಾತ ಭಾರತೀಯ ಕ್ರಿಕೆಟ್ ಪಟು ಆಕಾಶ್ ಚೋಪ್ರಾ ಮುಂತಾದವರು ಈ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದರು .

ದ್ವೀಪದ ಕನ್ನಡಿಗ ಉದ್ಯಮಿ ,ಸಾರಾ ಸಮೂಹ ಸಂಸ್ಥೆಯ ಛೇರ್ಮನ್ ಶ್ರೀ ಮೊಹಮ್ಮದ್ ಮನ್ಸೂರ್ ನವರ ಕನಸಿನ ಕೂಸಾಗಿರುವ “ಬಹರೇನ್ ಪ್ರೀಮಿಯರ್ ಲೀಗ್ ” ವೃತ್ತಿಪರ ಹಾಗು ಅಚ್ಚುಕಟ್ಟಿನ ಅಂತಾರಾಷ್ಟ್ರೀಯ ಗುಣಮಟ್ಟದ ಆಯೋಜನೆಯಿಂದಾಗಿ ತನ್ನ ಪ್ರಥಮ ಆವ್ರತ್ತಿಯಲ್ಲಿಯೇ ಜನಪ್ರಿಯಗೊಂಡು ಅಪಾರ ಜನಮನ್ನಣೆಗಳಿಸಿದೆ . ಬಹರೈನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಅಧ್ಯಕ್ಷರೂ,ಸುಪ್ರೀಂ ಕೌನ್ಸಿಲ್ ಓಫ್ ಯೂತ್ ಎಂಡ್ ಸ್ಪೋರ್ಟ್ಸ್ ನ ಉಪಾಧ್ಯಕ್ಷರೂ ಆಗಿರುವ ಇಲ್ಲಿನ ರಾಜಮನೆತನದ ಘನತೆವೆತ್ತ ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾರ ಆಶ್ರಯದಲ್ಲಿ ಕೆ ಹೆಚ್ ಕೆ ಸ್ಪೋರ್ಟ್ಸ್ ಹಾಗು ಎಕ್ಸೆಲೊನ್ ಸಂಸ್ಥೆಯ ಸಹಯೋಗದೊಂದಿಗೆ ಜರುಗಿದ ಬಹರೇನ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷರಾಗಿ ಕನ್ನಡಿಗ ಮೊಹಮ್ಮದ್ ಮನ್ಸೂರರವರು ಕಾರ್ಯನಿರ್ವಹಿಸುತ್ತಿದ್ದಾರೆ .  ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾದರಿಯಲ್ಲಿಯೇ ಈ ಪಂದ್ಯಾಟವನ್ನು ವಿನ್ಯಾಸಗೊಳಿಸಿ ಆಯೋಜಿಸಿದ್ದು ತಂಡಗಳ ಖರೀದಿಯ ನಂತರ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆದಿತ್ತು . ದ್ವೀಪದಲ್ಲಿ ನೆಲೆಸಿರುವ ಭಾರತ,ಶ್ರೀಲಂಕಾ ,ಬಾಂಗ್ಲಾದೇಶ್ ಹಾಗು ಪಾಕಿಸ್ತಾನ ಮೂಲದ ಅತ್ಯುತ್ತಮ ಕ್ರಿಕೆಟ್ ಪಟುಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಪಂದ್ಯಾಟಗಳ ಪೂರ್ವಭಾವಿಯಾಗಿ ಬಹರೈನ್ ಪ್ರೀಮಿಯರ್ ಲೀಗ್ ನ ಬಗ್ಗೆ ಹೆಚ್ಚಿನ ಜನಜಾಗ್ರತಿ ಮೂಡಿಸಲು ಶಾಲಾ ಮಕ್ಕಳಿಗೆ ಕ್ರಿಕೆಟ್ ನ ಬಗ್ಗೆ ಕ್ವಿಜ್ ಕಾರ್ಯಕ್ರಮವನ್ನು ಕೂಡ ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು . ತಂಡಗಳ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಆಕರ್ಷಕವಾಗಿ ಜರುಗಿದರೆ ,ಪಂದ್ಯಾಟಕ್ಕೆ ಅದ್ದೊರಿಯಾಗಿಯೇ ಚಾಲನೆ ನೀಡಲಾಗಿತ್ತು .

ಅಂತಿಮ ಪಂದ್ಯಾಟದಲ್ಲಿ ಇಂಟೆಕ್ಸ್ ಲಯನ್ಸ್ ತಂಡವು ಅವಾನ್ ವಾರಿಯರ್ಸ್ ತಂಡದ ವಿರುದ್ಧ ಸರ್ವಾಂಗೀಣ ಆಟದ ಪ್ರದರ್ಶನವನ್ನು ನೀಡಿ ಪ್ರತಿಷ್ಠಿತ ಬಹರೈನ್ ಪ್ರೀಮಿಯರ್ ಲೀಗ್ ನ ಪ್ರಥಮ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು . ಅಂತಿಮ ಹಂತದ ಪಂದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊಂಡ “ಅವಾನ್ ವಾರಿಯರ್ಸ್ ” ತಂಡ ಬ್ಯಾಟಿಂಗನ್ನು ಆಯ್ದುಕೊಂಡು ನಿಗದಿತ 20 ಓವರುಗಳಲ್ಲಿ 142 ಓಟಗಳ ಬ್ರಹತ್ ಮೊತ್ತವನ್ನು ಪೇರಿಸಲು ಶಕ್ತವಾಯಿತು . ಇದಕುತ್ತರವಾಗಿ ಬಿರುಸಿನ ಆಟ ಆರಂಭಿಸಿದ “ಇಂಟೆಕ್ಸ್ ಲಯನ್ಸ್ ” ತಂಡವು ಒಂದು ಹಂತದಲ್ಲಿ ಕೇವಲ 13 ಓಟಗಳಿಗೆ ಮೂರು ಉದ್ದರಿಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದರೂ ನಾಯಕ ತಾಹಿರ್ ಹಾಗು ಪ್ರಶಾಂತ್ ರವರ ಜವಾಬ್ದಾರಿಯುತ ಹಾಗು ಸ್ಫೋಟಕ ಬ್ಯಾಟಿಂಗಿನ ನೆರವಿನಿಂದ ಇನ್ನೂ 14 ಎಸೆತಗಳು ಬಾಕಿಯಿರುವಾಗಲೇ ಜಯ ದಾಖಲಿಸಿತು . ಈ ಹಿಂದೆ ಜರುಗಿದ ಸೆಮಿ ಫೈನಲ್ ಹಂತದ ಪಂದ್ಯಾಟದಲ್ಲಿ ಅವನ್ ವಾರಿಯರ್ಸ್ ತಂಡವು ಬಲಿಷ್ಟ ಬಹರೈನ್ ಸೂಪರ್ ಜಯಂಟ್ಸ್ ತಂಡವನ್ನು ಮಣಿಸಿ ಅಂತಿಮ ಹಂತಕ್ಕೆರಿದರೆ ,ಇಂಟೆಕ್ಸ್ ಲಯನ್ಸ್ ತಂಡವು ಫೋರ್ ಸ್ಕ್ವಾರ್ ಚಾಲೆಂಜರ್ಸ್ ತಂಡವನ್ನು ಸೋಲಿಸಿ ಅಂತಿಮ ಹಂತದ ಪಂದ್ಯಾಟಕ್ಕೆ ತೇರ್ಗಡೆಗೊಂಡಿತ್ತು.

ಬಹರೇನ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಮನ್ಸೂರ್ ರವರ ಉಪಸ್ಥಿತಿಯಲ್ಲಿ ಅಂತಿಮ ಹಂತದ ಪಂದ್ಯಾಟಕ್ಕೆ ಖ್ಯಾತ ಭಾರತೀಯ ಕ್ರಿಕೆಟ್ ಪಟು ಆಕಾಶ್ ಚೋಪ್ರಾರವರು ನಾಣ್ಯವನ್ನು ಚಿಮ್ಮಿಸಿದರೆ ,ಬಾಲಿವುಡ್ಡಿನ ಖ್ಯಾತ ನಟ ಸುನಿಲ್ ಶೆಟ್ಟಿಯವರು ಬೌಲಿಂಗ್ ಮಾಡಿ ವಿದ್ಯುಕ್ತ ಚಾಲನೆ ನೀಡಿದರು . ಸಾವಿರಾರು ಕ್ರಿಕೆಟ್ ಪ್ರೇಮಿಗಳ ಜೊತೆಗೆ ಅಂತಿಮ ಹಂತದ ಪಂದ್ಯಾಟವನ್ನು ಸಂಪೂರ್ಣವಾಗಿ ವೀಕ್ಷಿಸಿದ ಇವರುಗಳು ಪಂದ್ಯಾಟದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ಪಂದ್ಯಾಟದ ನಂತರ ಜರುಗಿದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು .

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಬಹರೈನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಅಧ್ಯಕ್ಷರೂ,ಸುಪ್ರೀಂ ಕೌನ್ಸಿಲ್ ಓಫ್ ಯೂತ್ ಎಂಡ್ ಸ್ಪೋರ್ಟ್ಸ್ ನ ಉಪಾಧ್ಯಕ್ಷರೂ ಆಗಿರುವ ಇಲ್ಲಿನ ರಾಜಮನೆತನದ ಘನತೆವೆತ್ತ ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾರವರಿಗೆ ಬಹರೈನ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಮನ್ಸೂರ್ ರವರು ಬಹರೇನ್ ಪ್ರೀಮಿಯರ್ ಲೀಗ್ ಹಾಗು ದ್ವೀಪದ ಕ್ರಿಕೆಟ್ ಪ್ರೇಮಿಗಳ ಪ್ರೇಮಿಗಳ ಪ್ರೀತಿ,ವಿಶ್ವಾಸ ಹಾಗು ಅಭಿಮಾನದ ದ್ಯೋತಕವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕ್ರಿಕೆಟ್ ಬ್ಯಾಟೊಂದನ್ನು ಸ್ಮರಣಿಕೆಯಾಗಿ ಹಸ್ತಾ೦ತರಿಸಿದರು . ಕಣ್ಣು ಕೋರೈಸುವ ವರ್ಣರಂಜಿತ ಬೆಳಕುಗಳ ನಡುವೆ ಖ್ಯಾತ ಅಂತಾರಾಷ್ಟ್ರೀಯ ಕಲಾವಿದರುಗಳಿಂದ ವೇದಿಕೆಯ ಮೇಲೆ ಪ್ರದರ್ಶನಗೊಂಡ ನ್ರತ್ಯ ಹಾಗು ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ಮೆರುಗು ನೀಡಿತ್ತು .

ಸಮಾರೋಪ ಸಂಮಾರಂಭದಲ್ಲಿ ಉಪಸ್ಥಿತರಿದ್ದ ಕ್ರಿಕೆಟ್ ಬಹರೇನ್ ಅಸೋಸಿಯೆಷನ್ ನ ಅಧ್ಯಕ್ಷರಾದ ಸಲೀಂ ಇಲಿಯಾಸಿಯವರು ಪಂದ್ಯಾಟದ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟತೆಯ ಆಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು . ತನ್ನ ಪ್ರಥಮ ಆವ್ರತ್ತಿಯಲ್ಲಿಯೇ ಅಭೂತಪೂರ್ವ ಯಶಸ್ಸುಕಂಡ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿದ ಬಹರೇನ್ ಪ್ರೀಮಿಯರ್ ಲೀಗ್ ನ ಅಧ್ಯಕ್ಷರಾದ ಕನ್ನಡಿಗ ಶ್ರೀ ಮೊಹಮ್ಮದ್ ಮನ್ಸೂರ್ ರವರು ಪಂದ್ಯಾಟಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು .

ಚಿತ್ರ-ವರದಿ-ಕಮಲಾಕ್ಷ ಅಮೀನ್. ​

Comments are closed.