ಗಲ್ಫ್

ಯುಎಇ ಜತೆ ಐದು ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಅಂಕಿತ

Pinterest LinkedIn Tumblr

ಅಬುದಾಬಿ: ಅಬುದಾಬಿಯ ರಾಜಕುಮಾರ ಮುಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಭಾರತೀಯ ತೈಲ ಕಂಪೆನಿಗಳಿಗೆ ಕಡಲಾಚೆಯ ತೈಲಾಗಾರಗಳಲ್ಲಿ ಶೇ.10 ಪಾಲುದಾರಿಕೆಯನ್ನು ನೀಡುವ ಐತಿಹಾಸಿಕ ಒಪ್ಪಂದವೂ ಸೇರಿದಂತೆ ಐದು ಒಪ್ಪಂದಗಳಿಗೆ ಎರಡು ದೇಶಗಳು ಸಹಿ ಹಾಕಿದವು.

ಮೂರು ದೇಶಗಳ ಪ್ರವಾಸದ ಎರಡನೇ ಹಂತದಲ್ಲಿ ಜೋರ್ಡಾನ್‌ನಿಂದ ಅಬುಧಾಬಿ ತಲುಪಿದ ಮೋದಿಯವರನ್ನು ಮುಹಮ್ಮದ್ ಬಿನ್ ಝಯೇದ್ ಹಾಗೂ ರಾಜಮನೆತನದ ಇತರರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ರಾಜಕುಮಾರರಿಗೆ ಧನ್ಯವಾದ ತಿಳಿಸಿದ ಮೋದಿ, ಈ ಭೇಟಿಯು ಭಾರತ-ಯುಎಇ ಸಂಬಂಧದ ಮೇಲೆ ಗುಣಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಯುಎಇಗೆ ಎರಡನೇ ಬಾರಿ ಆಗಮಿಸಿದ ಮೋದಿ ಶನಿವಾರದಂದು ರೋಯಲ್ ಪ್ಯಾಲೇಸ್‌ನಲ್ಲಿ ಮುಹಮ್ಮದ್ ಬಿನ್ ಝಯೇದ್ ಜೊತೆ ಸಮಾಲೋಚನೆ ನಡೆಸಿದರು. ಮೋದಿ, ರೋಯಲ್ ಪ್ಯಾಲೇಸ್‌ಗೆ ಆಹ್ವಾನಿಸಲ್ಪಟ್ಟ ಮೊದಲ ವಿದೇಶಿ ನಾಯಕರಾಗಿದ್ದಾರೆ. ಆಧುನಿಕ ರಾಷ್ಟ್ರವಾಗಿ ಯುಎಇಯ ಅಭಿವೃದ್ಧಿಯಲ್ಲಿ ಭಾರತೀಯ ನೌಕರರು ನಿರ್ವಹಿಸಿರುವ ಪಾತ್ರವನ್ನು ಈ ವೇಳೆ ಅಬುಧಾಬಿ ರಾಜಕುಮಾರ ಶ್ಲಾಘಿಸಿದರು.

ಬಳಿಕ ಭಾರತೀಯ ತೈಲ ಒಕ್ಕೂಟ (ಒವಿಎಲ್, ಬಿಆರ್‌ಪಿಎಲ್, ಐಒಸಿಎಲ್) ಮತ್ತು ಅಬುಧಾಬಿ ರಾಷ್ಟ್ರೀಯ ತೈಲ ಸಂಸ್ಥೆಯ ಮಧ್ಯೆ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ 2018ರಿಂದ 2057ರ ವರೆಗೆ ಭಾರತೀಯ ತೈಲ ಸಂಸ್ಥೆಗಳಿಗೆ ಅಬುಧಾಬಿಯ ಲೋವರ್ ಝಕೂಮ್‌ನ ತೈಲಾಗಾರದಲ್ಲಿ ರಿಯಾಯಿತಿ ದೊರೆಯಲಿದೆ ಎಂದು ಭಾರತೀಯ ರಾಯಭಾರ ಕಚೇರಿಯು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಜನಶಕ್ತಿಯ ಕ್ಷೇತ್ರದಲ್ಲಿ ಸಹಕಾರಿಸುವ ಸಲುವಾಗಿ ಭಾರತ ಮತ್ತು ಯುಎಇ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಮಾಡಿದೆ. ಅದರ ಪ್ರಕಾರ ಕೊಲ್ಲಿ ರಾಷ್ಟ್ರದಲ್ಲಿ ಭಾರತೀಯ ನೌಕರರ ಒಪ್ಪಂದ ಆಧಾರಿತ ಕೆಲಸದ ಸಹಯೋಗ ಆಡಳಿತವನ್ನು ಸಾಂಸ್ಥಿಕಗೊಳಿಸಲಾಗುವುದು.

ರೈಲ್ವೇ ಇಲಾಖೆಯಲ್ಲಿ ತಾಂತ್ರಿಕ ಸಹಕಾರ, ಬಾಂಬೆ ಶೇರು ಮಾರುಕಟ್ಟೆ ಮತ್ತು ಅಬುಧಾಬಿ ಸೆಕ್ಯೂರಿಟಿ ಎಕ್ಸ್‌ಚೇಂಜೆಸ್, ಜಮ್ಮು ಮತ್ತು ಕಾಶ್ಮೀರ ಸರಕಾರ ಮತ್ತು ಡಿಪಿ ವರ್ಲ್ಡ್, ಹೀಗೆ ಐದು ತಿಳುವಳಿಕೆ ಪತ್ರಗಳಿಗೆ ಈ ವೇಳೆ ಸಹಿ ಹಾಕಲಾಯಿತು.

ಮೋದಿಗೆ ಸ್ವಾಗತಕೋರಿ ನಗರದ ಹಲವು ಕಟ್ಟಡಗಳನ್ನು ತ್ರಿವರ್ಣ ಧ್ವಜದ ಬಣ್ಣದ ಬೆಳಕಿನಿಂದ ಅಲಂಕರಿಸಲಾಗಿತ್ತು. ರವಿವಾರಂದು ಪ್ರಧಾನಿ, ಯುಎಇಯ ಹುತಾತ್ಮ ಯೋಧರ ಸ್ಮಾರಕ ವಾಹತ್ ಅಲ್ ಕರಾಮಾಗೆ ತೆರಳಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕೊರಿದರು. ಯುಎಇಯಿಂದ ಮೋದಿ ಒಮನ್‌ಗೆ ತೆರಲಿದ್ದಾರೆ.

Comments are closed.