ಗಲ್ಫ್

ಕುವೈತ್ ಕನ್ನಡ ಕೂಟದ 33 ನೆಯ ಕರ್ನಾಟಕ ರಾಜ್ಯೋತ್ಸವ

Pinterest LinkedIn Tumblr

ಕುವೈತ್: ನುಡಿ ನೆಲದಿಂದ ದೂರ, ಕುವೈತ್ ದೇಶದಲ್ಲಿ ನೆಲೆಸಿರುವ ಕನ್ನಡಿಗರು; ಕನ್ನಡಮ್ಮನ ನೆನೆದು, ಭಾಷಾವಾರು ವಿಂಗಡಣೆಯ ಕನ್ನಡ ಮಾತನಾಡುವ ಕರ್ನಾಟಕ ರಾಜ್ಯದ ಪ್ರಜೆಗಳಾಗಿ, ಕನ್ನಡ ನೆಲದ ಸೊಗಡನ್ನು ಎತ್ತಿ ಹಿಡಿಯುವ ಸಂಸ್ಕೃತಿ, ಕಲೆ, ಸಾಹಿತ್ಯ, ವಿಜ್ಞಾನ, ನೈಸರ್ಗಿಕ ಸಂಪತ್ತು ಎಲ್ಲವುಗಳ ಪರಿಚಯವನ್ನು ಕುವೈತಿನಲ್ಲಿ ನೆಲಸಿರುವ ಸ್ವದೇಶೀ ಜನರ, ಕುವೈತೀ ಬಾಂಧವರ ಮತ್ತು ನುಡಿ ಸಹೋದರರ ಜೊತೆ ಹಂಚಿಕೊಳ್ಳುತ್ತಾ ಸಾಗುವ ಮುಖ್ಯ ಧ್ಯೇಯದೊಂದಿಗೆ ಕುವೈತ್ ಕನ್ನಡ ಕೂಟವೆಂಬ ಸಮೂಹವನ್ನು ಕಟ್ಟಿದರು. ಕುವೈತ್ ಕನ್ನಡ ಕೂಟದ 33 ನೆಯ ವಾರ್ಷಿಕಾಚರಣೆಯಾದ ಕನ್ನಡ ರಾಜ್ಯೋತ್ಸವವನ್ನು “ಕುವೈತ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ಅಂಡ್ ಟೆಕ್ನಾಲಜಿ” ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 

ನಾಡಿನ ಹೆಸರಾಂತ ಪರಿಸರವಿಜ್ಞಾನಿ, ವನ್ಯಜೀವಿ ಸಂರಕ್ಷಕ, ರಾಷ್ಟ್ರೀಯ ಹುಲಿ ಪರಿಯೋಜನೆಯ ಮಹತ್ತರ ಸಾಧನೆಗಳ ಕರ್ತೃ ಡಾ. ಉಲ್ಲಾಸ್ ಕಾರಂತರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೂಟದ ಉಪಾಧ್ಯಕ್ಷ ಡಾ. ಆಜಾದ್ ಐ.ಎಸ್. ರವರ ಸ್ವಾಗತದ ನಂತರ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿ ಶುಭಾರಂಭಕ್ಕೆ ಚಾಲನೆಯಿತ್ತ ಅತಿಥಿಗಳ ಸಂಕ್ಷಿಪ್ತ ಪರಿಚಯವನ್ನು ಶ್ರೀಮತಿ ವೀಣಾ ಗಿರಿಧರ್ ಮಾಡಿಕೊಟ್ಟರು. ಕೂಟದ ಅಧ್ಯಕ್ಷರು ಮಾತನಾಡಿ ತಮ್ಮ ಪ್ರಾರಂಭದ ದಿನಗಳಲ್ಲಿ ಡಾ. ಉಲ್ಲಾಸ್ ರವರೊಂದಿಗೆ ಕೈಗೊಂಡ ಪರಿಸರ ಕಾಳಜಿಯ ಚಟುವಟಿಕೆಗಳನ್ನು ನೆನಪಿಸಿಕೊಳ್ಳುತ್ತಾ ಡಾ. ಉಲ್ಲಾಸರ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಕಾಳಜಿಯ ತೀವ್ರತೆಯನ್ನು ವಿವರಿಸಿದರು.

ನಂತರ ಮಾತನಾಡಿದ ಡಾ. ಉಲ್ಲಾಸ್ ಕಾರಂತರವರು ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕೊಂಡಾಡುವ ನಾವು ಅಷ್ಟೇ ಸಮೃದ್ಧವಾದ ನೈಸರ್ಗಿಕ ಸಂಪತ್ತನ್ನು ವನ್ಯಜೀವಿ ವೈವಿಧ್ಯತೆಯನ್ನು ಹಾಡಿ ಹೊಗಳುವುದಿಲ್ಲ. ನಮ್ಮ ಸಿರಿ ಇಲ್ಲೂ ಅಡಗಿದೆ ಇದನ್ನು ನಾವು ಗುರುತಿಸಬೇಕು ಎಂದು ತಿಳಿಸಿದ್ದಲ್ಲದೇ ನಮ್ಮ ವನ್ಯ ಜೀವಿ ಸಂಪತ್ತಿನ ಬಗ್ಗೆ ಸಭಿಕರಲ್ಲಿ ಅರಿವನ್ನು ಮೂಡಿಸಿದರು.

ಇದಲ್ಲದೇ, ಕರ್ನಾಟಕದ ಉಡುಪಿಯ “ನೃತ್ಯನಿಕೇತನ-ಕೊಡವೂರು” ಸಂಸ್ಥೆಯ ಕಲಾ ನಿಪುಣರೂ ಮತ್ತು ನೃತ್ಯರೂಪಕ ವಿಶೇಷಜ್ಞರಾದ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಹಾಗೂ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಕುವೈತಿಗೆ 15 ದಿನ ಮುಂಚಿತವಾಗಿಯೇ ಆಗಮಿಸಿ ತಾವೇ ಪರಿಕಲ್ಪಿಸಿ ನಿರ್ದೇಶಿಸಿದ “ಮಳೆಬಂತು ಮಳೆ” ಎಂಬ ನೃತ್ಯ ರೂಪಕವನ್ನು ಕೂಟದ ಮಕ್ಕಳಿಗೆ ಮತ್ತು ಸದಸ್ಯರಿಗೆ ತರಬೇತಿ ನೀಡಿ ಅಣಿಗೊಳಿಸುವ ಮೂಲಕ ಪ್ರಸ್ತುತಪಡಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದ “ಕರುನಾಡ ಕಣ್ಮಣಿಗಳು” ಎಂಬ ಕಾರ್ಯಕ್ರಮ ಘೋಷವಾಕ್ಯದೊಂದಿಗೆ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿತಗೊಂಡಿತ್ತು. ಕರ್ನಾಟಕದ ಇತ್ತೀಚಿನ ಸಾಧಕರ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ದೇಶದ ಮತ್ತು ನಾಡಿನ ಅನಿವಾಸಿ ಜನತೆಗೆ ಮಾಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿತ್ತು.

ಇದಕ್ಕೂ ಮುಂಚೆ ಕೂಟದ ಮಕ್ಕಳು ಮತ್ತು ಹಿರಿಯ ಸದಸ್ಯರಿಂದ ಪ್ರಸ್ತುತಗೊಂಡ ಕರ್ನಾಟಕದ ವಿವಿಧ ಕಾರ್ಯಕ್ಷೇತ್ರಗಳ ಸಾಧನೆ ಮತ್ತು ಸಾಧಕರ ವಿಷಯಕೇಂದ್ರಿತ “ಕರುನಾಡ ಕಣ್ಮಣಿಗಳು” ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯನ್ನು ಸಾಂಸ್ಕೃತಿಕ ಸಮಿತಿಯ ಶ್ರೀಮತಿ ಗಾಯತ್ರಿ ಭಟ್ ಮತ್ತು ಶ್ರೀಮತಿ ನಾಗಮಣಿ ಉಲ್ಲಾಸ್ ರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಮೂಡಿಬಂದ ನೃತ್ಯ, ನೃತ್ಯ-ರೂಪಕ, ಪ್ರಹಸನ ಕಾರ್ಯಕ್ರಮಗಳಲ್ಲಿ; “ತೈಲದ ಸಿರಿ”, “ಸಾವಿರ ಕಿರಣವ ಚಲ್ಲಿ”, “ಗುರು ಬ್ರಹ್ಮ”, “ಗೆಲುವೇ ಗೆಲುವೇ” “ಶರಣಂ”, “ನಮ್ಮಮ್ಮ ನಮ್ಮಮ್ಮ”, “ವೀರಭೂಮಿ”, “ಗಂಡು ಮೆಟ್ಟಿದ ನಾಡು”, “ಓಡುವ ಸೇರು ಓಡುವಾ” “ಲೈಫ್ ನಲ್ಲಿ ಗೆಲ್ಲೋಕೆ” “ಧರಿತ್ರಿ”, “ರಣ ವಿಕ್ರಮ”, “ಚನ್ನಪ್ಪ ಚನ್ನಗೌಡ”, “ಚಲ್ಲಿದರು ಮಲ್ಲಿಗೆಯಾ”, “ಕುಂಜಾರದ ಗೊಂಬೆ”, “ಸಾಧನೆ ತೋರಿದ ನಿಮಗೆಲ್ಲಾ”, “ಹುಟ್ಟಿದರೆ ಕನ್ನಡ ನಾಡಲ್ಲಿ” ಮುಂತಾದುವು ಪ್ರಮುಖವಾಗಿದ್ದವು.

ರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮ ಸ್ಮರಣ ಸಂಚಿಕೆ “ಮರಳ ಮಲ್ಲಿಗೆ ರಾಜ್ಯೋತ್ಸವ ಸಂಚಿಕೆ” ಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ದಂಪತಿಗಳ ಸನ್ಮಾನ, ಉಡುಪಿಯ “ನೃತ್ಯನಿಕೇತನ-ಕೊಡವೂರು” ಸಂಸ್ಥೆಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಮತ್ತು ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ರವರನ್ನೂ ಸನ್ಮಾನಿಸಲಾಯಿತು. ಕುವೈತ್ ಕನ್ನಡ ಕೂಟದೊಂದಿಗೆ 25 ವರ್ಷಗಳ ಸತತ ಸೇವೆಗಾಗಿ “ಮೇಕಪ್” ಕಲಾವಿದ ದಂಪತಿಗಳಾದ ಶ್ರೀ ಮತ್ತು ಶ್ರೀಮತಿ ಅಜಯ್ ಘೋಷ್ ರವರನ್ನೂ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ “ಜಾಯ್ ಅಲುಕ್ಕಾಸ್” “ಬದರ್ ಅಲ್ ಸಮಾಹ್”, “ಪ್ರೊ ಸ್ಪೋರ್ಟ್ಸ್” “ಜರ್ಮನ್ ಪ್ರೆಸ್” “ಓರಿಯಂಟಲ್ ರೆಸ್ಟೋರೆಂಟ್” “ಜೆಟ್ ಏರ್ ವೇಸ್”, “ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ” ಮುಂತಾದ ಸಂಸ್ಥೆಗಳಿಗೆ ಕೃತಜ್ಞತಾಪೂರ್ವಕ ಸ್ಮರಣಿಕೆಯನ್ನು ನೀಡಲಾಯಿತು.

ಕೂಟದ ಕಾರ್ಯದರ್ಶಿ ಶ್ರೀ ಜಿತೇಂದ್ರ ರಾವ್ ಮತ್ತು ಖಜಾಂಚಿ ಶ್ರೀ ಮಹೇಶ್ ಶಿರಾಮಗೊಂಡ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತು ಅದರ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಕೂಟದ ಪರವಾಗಿ ಸ್ಮರಿಸಿ ವಂದಿಸಿದರು.

Comments are closed.