ಗಲ್ಫ್

ಜಗತ್ತಿನ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಶೂಟಿಂಗ್! ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ…

Pinterest LinkedIn Tumblr

ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಚಿತ್ರೀಕರಣ ಮುಗಿದು, ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಭುರ್ಜ್‌ ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಹಾಗೆ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ನರೇಂದ್ರ ಬಾಬು ನಿರ್ದೇಶನದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಪಾತ್ರವಾಗಿದೆ. ಚಿತ್ರದಲ್ಲಿ ಎತ್ತರದ ಕಟ್ಟಡಗಳಿರುವ ನಗರವೊಂದು ಹಿನ್ನೆಲೆಯಾಗಿ ಬೇಕಿತ್ತಂತೆ. ಮುಂಬೈ, ಬಾಲಿ … ಹೀಗೆ ಯಾವ್ಯಾವ ಸ್ಕೈಕ್ರಾಪರ್‌ಗಳು ಎಲ್ಲೆಲ್ಲಿವೆ ಮತ್ತು ಎಲ್ಲಿ ಚಿತ್ರೀಕರಣ ಮಾಡಬೇಕೆಂದು ಚಿತ್ರತಂಡದವರು ತಲೆ ಕೆಡಿಸಿಕೊಂಡಾಗ, ಹೊಳೆದ ಹೆಸರು ದುಬೈ.

ದುಬೈ ನಗರದಲ್ಲಿ ಹಲವು ಸ್ಕೈಕ್ರಾಪರ್‌ಗಳಿವೆ. ಅಲ್ಲಿ ಚಿತ್ರೀಕರಣ ಮಾಡಬೇಕೆಂದರೆ ತುಂಬಾ ಖರ್ಚಾಗುತ್ತದೆ. ಆ ಸಂದರ್ಭದಲ್ಲಿ ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಖ್ಯಾತ ಉದ್ಯಮಿ ಹರೀಶ್‌ ಶೇರಿಗಾರ್‌ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಅನಂತ್‌ ನಾಗ್‌ ಅವರು ಹರೀಶ್‌ ಶೇರಿಗಾರ್‌ ನಿರ್ಮಾಣದ “ಮಾರ್ಚ್‌ 22′ ಚಿತ್ರದಲ್ಲಿ ನಟಿಸಿದ್ದರು. ಅದೇ ಸ್ನೇಹದಲ್ಲಿ ದುಬೈನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸಾಧ್ಯವಾಯಿತು.

ದುಬೈನಲ್ಲಿ ಚಿತ್ರೀಕರಣಕ್ಕೆ ಎಲ್ಲಾ ರೀತಿಯ ನೆರವು ಮಾಡುವ ಮೂಲಕ ಅವರು ಸಹ-ನಿರ್ಮಾಪಕರಾಗಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರತಂಡದವರು ಬರೀ ದುಬೈನಲ್ಲಿ ಒಂದು ವಾರ ಕಾಲ ಚಿತ್ರೀಕರಣ ಮಾಡಿದ್ದಷ್ಟೇ ಅಲ್ಲ, ವಿಶ್ವದ ಅತೀ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಯ ಭುರ್ಜ್‌ ಖಲೀಫಾದಲ್ಲೂ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಕನ್ನಡ ಚಿತ್ರರಂಗದಿಂದ ಅಲ್ಲಿ ಯಾರೂ ಚಿತ್ರೀಕರಣ ಮಾಡಿರಲಿಲ್ಲ.

Comments are closed.