ಗಲ್ಫ್

ದ್ವೀಪದಲ್ಲಿ ಅನಾವರಣಗೊಂಡ ಕನ್ನಡ ಸಾಂಸ್ಕ್ರತಿಕ ಲೋಕ ; ಸಾವಿರಾರು ಕನ್ನಡಿಗರ ಕಣ್ಮನ ಸೂರೆಗೊಂಡ “ಕನ್ನಡ ವೈಭವ “

Pinterest LinkedIn Tumblr

ಬಹರೈನ್; ಕಳೆದ 4 ದಶಕಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡದ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಮುಂಚೂಣಿಯಲ್ಲಿರುವ ದ್ವೀಪದ ಕನ್ನಡಿಗರ ಮಾತೃ ಸಂಸ್ಥೆಯಾಗಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ತನ್ನ 40ರ ಸಂಭ್ರಮಾಚರಣೆಯ ಅಂಗವಾಗಿ ಮನಾಮದ ಮರೀನಾದಲ್ಲಿರುವ ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಿದ್ದ ವರ್ಣರಂಜಿತ “ಕನ್ನಡ ವೈಭವ ” ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು .ನಾಡಿನ ಜನಪ್ರಿಯ ಖ್ಯಾತ ಕಲಾವಿದರುಗಳು ಹಾಗು ದ್ವೀಪದ ಸುಮಾರು 50 ಕ್ಕಿಂತಲೂ ಹೆಚ್ಚಿನ ಕಲಾವಿದರುಗಳು ಭವ್ಯ ರಂಗದ ಮೇಲೆ ಅನಾವರಣಗೊಳಿಸಿದ ಅಪ್ಪಟ ಕನ್ನಡ ಸಾಂಸ್ಕ್ರತಿಕ ಕಲಾ ಪ್ರದರ್ಶನಗಳಿಗೆ ಸಾವಿರಾರು ಕನ್ನಡಿಗರು ಕಿಕ್ಕಿರಿದು ನೆರೆದು ಸಾಕ್ಷಿಯಾಗಿ ತಮ್ಮ ಕಣ್ಮನ ತುಂಬಿಕೊಂಡರು .

ಕನ್ನಡ ಚಿತ್ರರಂಗದ ಪ್ರತಿಭಾವಂತ ಜನಪ್ರಿಯ ನಟ ಡೈನಾಮಿಕ್ ಸ್ಟಾರ್ ದೇವರಾಜ್ ,ಅವರ ಧರ್ಮಪತ್ನಿ ನಟಿ ಶ್ರೀಮತಿ ಚಂದ್ರಲೇಖಾ ದೇವರಾಜ್ ,ಮಂಗಳೂರಿನ ದಿಟ್ಟ ಮೇಯರ್ ಶ್ರೀಮತಿ ಕವಿತಾ ಸನಿಲ್ ಇವರುಗಳು ನಾಡಿನಿಂದ ದ್ವೀಪಕ್ಕೆ ಆಗಮಿಸಿ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಕೊಲ್ಲಿಯ ಮಣ್ಣಿನಲ್ಲಿ ಕನ್ನಡ ತೇರನ್ನು ಎಳೆಯುವ ಸಂಘದ ಕಾಯಕದಲ್ಲಿ ಕೈಜೋಡಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಕನ್ನಡಿಗರಲ್ಲಿ ನೂರ್ಮಡಿ ಚೈತನ್ಯ ಮೂಡಿಸಿದರು.

ಕನ್ನಡ ಚಲನ ಚಿತ್ರ ರಂಗದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದೇವರಾಜ್ ದಂಪತಿಗಳನ್ನು ,ಮಂಗಳೂರಿನ ಮೇಯರ್ ಆಗಿ ಅನೇಕ ಸಮಾಜ ಹಿತ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ದಿಟ್ಟ ಮೇಯರ್ ಕವಿತಾ ಸನಿಲ್ ರವರನ್ನು ದ್ವೀಪದ ಕನ್ನಡಿಗರ ಪ್ರೀತಿ ವಿಶ್ವಾಸ ಹಾಗು ಅಭಿಮಾನದ ದ್ಯೋತಕವಾಗಿ ಫಲ ,ಪುಷ್ಪ ಹಾಗು ಬ್ರಹತ್ ಸ್ಮರಣಿಕೆಯನ್ನು ನೀಡಿ ಸಾಮಾನಿಸಲಾಯಿತು .

ಸಮ್ಮಾನಕ್ಕೆ ಉತ್ತರಿಸುತ್ತಾ ಮಾತನಾಡಿದ ಹಿರಿಯ ನಟ ದೇವರಾಜ್ ರವರು ” ಸಂಘ ಸಂಸ್ಥೆಗಳನ್ನು ಕಟ್ಟುವುದು ಸುಲಭ ಅದನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟ ಅಂತಹುದರಲ್ಲಿ ಹೊರ ದೇಶವೊಂದರಲ್ಲಿ ಸಂಘವೊಂದನ್ನು ಕಟ್ಟಿಕೊಂಡು ಅದನ್ನು ನಾಲ್ಕು ದಶಕಗಳಿಂದ ಬಹಳ ಅರ್ಥಪೂರ್ಣವಾಗಿ ನಡೆಸಿಕೊಂಡು ಬಂದಿರುವ ಕನ್ನಡ ಸಂಘ ಹಾಗು ಬಹರೇನ್ ಕನ್ನಡಿಗರ ಯಶೋಗಾಥೆ ನಿಜಕ್ಕೂ ಅನನ್ಯ . ಇಲ್ಲಿನ ಕನ್ನಡಿಗರ ಹೃದಯ ಶ್ರೀಮಂತಿಕೆಗೆ ನಾನು ಹಾಗು ನನ್ನ ಪತ್ನಿ ಮಾರು ಹೋಗಿದ್ದೇವೆ ” ಎಂದರೆ ಮೇಯರ್ ಕವಿತಾ ಸನಿಲ್ ರವರು ಮಾತನಾಡಿ “ನಾನು ಬಹಳಷ್ಟು ಕನ್ನಡ ಸಂಘಗಳನ್ನು ನೋಡಿದ್ದೇನೆ ಆದರೆ ನಿಮ್ಮ ಸಂಘದ ಕಾರ್ಯ ವೈಖರಿ ಎಲ್ಲರಿಗೂ ಮಾದರಿಯಾದುದು . ನಾಲ್ಕು ದಶಕಗಳ ಶ್ರೀಮಂತ ಇತಿಹಾಸವಿರುವ ಸಂಘ ಇದೀಗ ತನ್ನದೇ ಆದ ಸ್ವಂತ ಕನ್ನಡ ಭವನದ ನಿರ್ಮಾಣಕ್ಕೆ ಮುಂದಾಗಿದೆ ಎನ್ನುವುದು ಬಹಳ ಸಂತೋಷದ ವಿಷಯವಾಗಿದೆ . ಇದಕ್ಕಾಗಿ ನನ್ನಿಂದ ಯಾವುದೇ ರೀತಿಯ ಸಹಾಯ ಬೇಕಾದರೂ ನಾನು ನೀಡಲು ಸಿದ್ಧನಿದ್ದೇನೆ ” ಎಂದರು .

ಸಂಘದ ಚುಕ್ಕಾಣಿಯನ್ನು ಹಿಡಿದಿರುವ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರು ನೆರೆದವರೆಲ್ಲರಿಗೂ ಶುಭ ಹಾರೈಸಿ ಮಾತನಾಡಡುತ್ತಾ ” ನಮ್ಮದೇ ಆದ ಸ್ವಂತ ಕನ್ನಡ ಭವನದ ನಿರ್ಮಾಣ ಕನ್ನಡಿಗರ ಬಹಳ ದಿನಗಳ ಕನಸು . ಇದು ನಮ್ಮ ಸಂಘವನ್ನು ಕಟ್ಟಿ ಬೆಳೆಸಿರುವ ಹಿರಿಯರಿಗೆ ಇದು ನಾವು ನೀಡುವ ಬಹಳ ದೊಡ್ಡ ಗೌರವಾರ್ಪಣೆ ಹಾಗು ಮುಂದಿನ ಪೀಳಿಗೆಗೆ ನಾವು ನೀಡುತ್ತಿರುವ ಉಡುಗೊರೆ .ಇದಾಗಲೇ ಕನ್ನಡ ಭವನ ನಿರ್ಮಾಣದ ಮೂಲಭೂತ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ,ಕರ್ನಾಟಕ ಸರಕಾರದ ಅನುದಾನ ಕೂಡ ದೊರಕಿರುತ್ತದೆ . ಈ ಭವನದ ನಿರ್ಮಾಣಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಹಾಯ ,ಸಹಕಾರ ಅತ್ಯಗತ್ಯ” ಎಂದು ಹೇಳಿದರು . ವೇದಿಕೆಯಲ್ಲಿದ್ದ ಅತಿಥಿಗಳು ಸಂಭಾವ್ಯ ಕನ್ನಡ ಭವನದ ನೀಲಿ ನಕ್ಷೆಯನ್ನು ಅನಾವರಣಗೊಳಿಸಿ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದರು . ಅಲ್ಲದೆ ಸಂಘದ ವಾರ್ಷಿಕ ಸ್ಮರಣಿಕೆ “ಕಾವೇರಿ ” ಯನ್ನು ಇದೆ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು .

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಖ್ಯಾತ ಭರತ ನಾಟ್ಯ ಹಾಗು ಕೂಚುಪುಡಿ ಪ್ರವೀಣೆ ವಿಧುಷಿ ರೇಖಾ ಸತೀಶ್ , ಖ್ಯಾತ ಭರತನಾಟ್ಯ ಹಾಗು ಕೂಚುಪುಡಿ ಪ್ರವೀಣ ಸುಜಯ್ ಶಾನಭೋಗ್ ಹಾಗು ತಂಡದವರು ರಂಗದಲ್ಲಿ ಪ್ರದರ್ಶಸಿದ “ಸಿರಿ ಸಾಮ್ರಾಜ್ಯ ” ಎನ್ನುವ ಒಂದು ಘಂಟೆಯ ನ್ರತ್ಯ ರೂಪಕ ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಿ ಮೂಢಿಬಂದು ನಾಡಿನ ಭವ್ಯ ಇತಿಹಾಸ ,ಶ್ರೀಮಂತ ಕಲೆ,ಸಂಸ್ಕ್ರತಿಯ ಪರಿಚಯ ನೀಡಿ ನೆರೆದವರನ್ನು ರಂಜಿಸಿತು . ಸಂಘದ ಸುಮಾರು ೫೦ಕ್ಕೂ ಹೆಚ್ಚಿನ ಪ್ರತಿಭಾವಂತ ಕಲಾವಿದರುಗಳಿಂದ ನಾಡಿನ ಇತಿಹಾಸ ,ಪುರಾಣ ,ಹಿರಿಮೆ ಗರಿಮೆಯನ್ನು ಸಾರುವ ವೈವಿಧ್ಯಮಯ ನ್ರತ್ಯರೂಪಕಗಳು ,ನ್ರತ್ಯಗಳು ರಂಗದಲ್ಲಿ ಆಕರ್ಷಕವಾಗಿ ಮೂಡಿಬಂತು .

ಮಂಗಳೂರಿನ ಜನಪ್ರಿಯ ಬಹುಮುಖ ಯುವ ಪ್ರತಿಭೆ ಅಕ್ಷತಾ ಕುಡ್ಲ ರವರಿಂದ ಮಿಮಿಕ್ರಿ ,ಜಾನಪದ ಹಾಡುಗಳು ,ವೀರ ಗಾಸೆಯಂತ ಜಾನಪದ ನ್ರತ್ಯಗಳು ಪ್ರದರ್ಶನಗೊಂಡವು .ನಟ ದೇವರಾಜ್ ರವರು ಕನ್ನಡ ಚಲನಚಿತ್ರ ರಂಗಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಅವರಿಗಾಗಿ ಅವರ ಚಲನಚಿತ್ರದ ಆಯ್ದ ಹಾಡುಗಳಿಂದ ಸಂಯೋಜಿಸಿದ ನ್ರತ್ಯ ರೂಪಕದಲ್ಲಿ ದೇವರಾಜ್ ದಂಪತಿಗಳೂ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದರು . ಕಾರ್ಯಕ್ರಮದ ವೈಶಸ್ಸಿಗಾಗಿ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು .

ಆಗಮಿಸಿದ ಗಣ್ಯರುಗಳನ್ನು ಸ್ವಾಗತಿಸಿ ಸಭಾ ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದಂತಹ ಶ್ರೀ ಕಿರಣ್ ಉಪಾಧ್ಯಾರವರು ನಡೆಸಿಕೊಟ್ಟರೆ ,ಒಟ್ಟು ಕಾರ್ಯಕ್ರಮವನ್ನು ಶ್ರೀ ಕಮಲಾಕ್ಷ ಅಮೀನ್ ಹಾಗು ಶ್ರೀಮತಿ ಚೇತನ ಹೆಗ್ಡೆ ಯವರು ನಿರೂಪಿಸಿದರು . ಮನೋರಂಜನಾ ಕಾರ್ಯದರ್ಶಿ ಶ್ರೀ ವರುಣ್ ಹೆಗ್ಡೆಯವರು ಧನ್ಯವಾದ ಸಮರ್ಪಣೆಯನ್ನು ನೀಡುವುದರೊಂದಿಗೆ ವರ್ಣರಂಜಿತ “ಕನ್ನಡ ವೈಭವ”ಕ್ಕೆ ತೆರೆಬಿತ್ತು.

ಈ ಕಾರ್ಯಕ್ರಮದ ಶೀರ್ಷಿಕಾ ಪ್ರಾಯೋಜಕರಾಗಿ ಬಿ ಎಮ್ ಎಮ್ ಐ ಸಂಸ್ಥೆಯ ರಾಜೀವ್ ಮೆನನ್ ರವರು ಸಹಕರಿಸಿದ್ದರೆ ಮುಖ್ಯ ಪ್ರಾಯೋಜಕರಾಗಿ ಪ್ರುಡೆನ್ಷಿಯಲ್ ಮ್ಯಾನೇಜ್ಮೆಂಟ್ ಎಂಡ್ ಮಾರ್ಕೆಟಿಂಗ್ ನ ಆಡಳಿತ ನಿರ್ದೇಶಕ ಸುಧಾಕರ್ ಶೆಟ್ಟಿ , ಅಲ್ ಸಫೀರ್ ಹೋಟೆಲ್ ನ ಆಡಳಿತ ನಿರ್ದೇಶಕ ಶಾಂತಾರಾಮ್ ಶೆಟ್ಟಿ ,ಪ್ರೆಸಿಡೆಂಟ್ ಗ್ರೂಫ್ ನ ಆಡಳಿತ ನಿರ್ದೇಶಕ ಅಬ್ದುಲ್ ಸತ್ತಾರ್ ಕೋಟೇಶ್ವರ್ ,ಅವ್ಮಾ (auma) ಸಂಸ್ಥೆಯ ಆಡಳಿತ ನಿರ್ದೇಶಕ ನವೀನ ಶೆಟ್ಟಿ ,ಪ್ಯಾಪಿಲೋನ್ ರೆಸ್ಟೋರೆಂಟ್ ನ ಆಡಳಿತ ನಿರ್ದೇಶಕ ಸವಿನ್ ಶೆಟ್ಟಿ,exelon ಸಂಸ್ಥೆಯ ಆಡಳಿತ ನಿರ್ದೇಶಕ ಮೊಹಮ್ಮದ್ ಮನ್ಸೂರ್ ,ನಾಸ್ asphalt ಸಂಸ್ಥೆ ,ಬಿನ್ ಹಿಂದಿ ಸಂಸ್ಥೆ ,ಮಲಬಾರ್ ಗೋಲ್ಡ್ ಹಾಗು ಆರ್ . ವಿ . ಹೆಗ್ಡೆ ಯವರು ಸಹಕರಿಸಿದ್ದರು.

ವರದಿ-ಕಮಲಾಕ್ಷ ಅಮೀನ್

Comments are closed.