ಗಲ್ಫ್

ಬಿಜೆಪಿ ಜೊತೆಗಿನ ಮೈತ್ರಿಗೆ ಹೆಚ್ ಡಿ ಕುಮಾರಸ್ವಾಮಿ ವಿಷಾದ

Pinterest LinkedIn Tumblr

ದುಬೈ: ಜಾತ್ಯಾತೀತ ನಿಲುವಿನಲ್ಲಿ ಕಾರ್ಯಾಚರಿಸುವ ನಮ್ಮ ಪಕ್ಷವು ಹಿಂದೊಮ್ಮೆ ಬಿಜೆಪಿಯೊಂದಿಗೆ ಆಡಳಿತ ನಡೆಸಿದ್ದು ತಪ್ಪಾಗಿತ್ತು ಎಂದು ಕರ್ನಾಟಕ ರಾಜ್ಯದ ಮಾಜೀ ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ವಿಷಾದವ್ಯಕ್ತಪಡಿಸಿದ್ದಾರೆ. ಜಾತ್ಯಾತೀತ ಪಕ್ಷಗಳು ಅಧಿಕಾರದಲ್ಲಿ ಇರಲಿ ಎಂಬ ನಿಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಕಾಂಗ್ರೆಸ್ಸಿನೊಂದಿಗೆ ಯಾವುದೇ ಶರತ್ತಿಲ್ಲದೆ ಬೆಂಬಲ ಮೈತ್ರಿ ಮಾಡಿಕೊಳ್ಳಲಾಗಿತ್ತು. ದುರಾದೃಷ್ಟವೆಂಬಂತೆ ಜೆಡಿಎಸ್ ಪಕ್ಷವನ್ನೇ ನಿರ್ನಾಮ ಮಾಡಲು ಕೆಲವರು ಮುಂದಾದಾಗ ಅನಿವಾರ್ಯವಾಗಿ ಬಿಜೆಪಿಗೆ ಬೆಂಬಲ ನೀಡಬೇಕಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ದುಬೈ ನಲ್ಲಿ ಆಯೋಜಿಸಿದ ಗಲ್ಫ್ ಇಶಾರ ಮಾಸಿಕದ ಯುಎಇ ಆವೃತ್ತಿಯ ಪ್ರಥಮ ವಾರ್ಷಿಕೋತ್ಸವ ಹಾಗೂ ಭಾರತದ 68 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ದೇವೇಗೌಡರವರ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ಶೇಖಡಾ 4 ರಷ್ಟು ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ ಜಾರಿಗೆ ತಂದದ್ದು ದೇಶದಲ್ಲಿ ಇನ್ನ್ಯಾವುದೇ ರಾಜ್ಯಗಳು ತರಲಿಲ್ಲ ಎಂದು ನೆನಪಿಸಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಹಜ್ ಭವನ ನಿರ್ಮಾಣಕ್ಕೆ ಚಾಲನೆ ಮಾಡಿ ಹತ್ತು ಕೋಟಿ ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ ಈದ್ಗಾ ಮೈದಾನದ ವಿಷಯದಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ಇತ್ಯರ್ಥಮಾಡಿದ್ದು ಅದರ ನಂತರ ಇಂದಿನವರೆಗೆ ಅಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬಂದಿದೆ ಎಂದು ಅವರು ಹೇಳಿದರು. ಬಿಜೆಪಿಯೊಂದಿಗೆ ಅಧಿಕಾರವನ್ನು ನಡೆಸಿದರು ಕೋಮುವಾದಿಗಳೊಂದಿಗೆ ಯಾವುದೇ ರಾಜಿ ಮಾಡದೆ ಮಂಗಳೂರು ಮತ್ತು ಬಾಬಾ ಬುಡನ್ಗಿರಿಯಲ್ಲಿ ನಡೆದ ಕೋಮುಗಲಾಟೆಯನ್ನು ಅತಿ ಶೀಘ್ರದಲ್ಲಿ ಹತೋಟಿಗೆ ತಂದು ಅದಕ್ಕೆ ಕಾರಣಕರ್ತರಾದವರನ್ನು ಪಕ್ಷ ನೋಡದೆ ಬಂದಿಸಿದ್ದಾಗಿ ಹೇಳಿದರು. ದೇವೇಗೌಡ ರವರು ರಾಜ್ಯದಲ್ಲಿ ನಾಲ್ಕು ಮುಸ್ಲಿಂ ರೆಸಿಡೆನ್ಶಿಯಲ್ ಶಾಲೆಗಳನ್ನು ಪ್ರಾರಂಭಮಾಡಿದ್ದರಲ್ಲದೇ; ಪ್ರಧಾನಿಯಾಗಿದ್ದಾಗ ರಾಷ್ಟ್ರಮಟ್ಟದಲ್ಲಿ ಅದನ್ನು ಜಾರಿಗೆ ತರಲು ಪ್ರಯತ್ನಿಸಿದ್ದರೆಂದೂ ಅವರು ಹೇಳಿದರು.

ಕನ್ನಡ ಭಾಷೆಯ ಅದೇ ಸಂಪನ್ನು ಅನಿವಾಸಿ ಕನ್ನಡಿಗರಿಗೆ ಮುಟ್ಟಿಸಲು ಸಕಾಲಿಕ ಲೇಖನಗಳೊಂದಿಗೆ ಭಾರತದ ಹೊರಗೆ ಕನ್ನಡ ಭಾಷೆಯಲ್ಲಿ ಮುದ್ರಿಸಿ, ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತಲೂ ಹೆಚ್ಚಾಗಿ ಕನ್ನಡ ಪ್ರೇಮವನ್ನು ಮೆರೆಯುತ್ತಿರುವ ಗಲ್ಫ್ ಇಶಾರ ಮತ್ತು ಕೆಸಿಎಫ್ ಕಾರ್ಯಕರ್ತರು ನಿಜಕ್ಕೂ ಅಭಿನಂದನಾರ್ಹವಾದದ್ದು ಎಂದು ಹರ್ಷ ವ್ಯಕ್ತಪಡಿಸಿದ ಅವರು ರಾಜ್ಯ ಎಸ್ಸೆಸ್ಸೆಫ್ ಅಧೀನದಲ್ಲಿ ಹತ್ತು ಕೇಂದ್ರಗಳಲ್ಲಿ ಕಾರ್ಯರೂಪಕ್ಕೆ ಬರಲಿರುವ ನಾಲೆಡ್ಜ್ ವಿಲೇಜ್ ಕೇಂದ್ರಗಳಿಗೆ ಆರ್ಥಿಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ಸಿ ಎಸ್ ಪುಟ್ಟರಾಜು ಮಂಡ್ಯ ರವರು ಉದ್ಘಾಟಿಸಿದರು. ಇತ್ತೀಚಿನ ದಿನಗಳಲ್ಲಿ ಕರ್ಣಾಟಕದಲ್ಲಿಯೇ ಕನ್ನಡ ಭಾಷೆಯ ಬಳಕೆಯು ಕಡಿಮೆಯಾಗುತ್ತಿರುವ ಸಂಧರ್ಭದಲ್ಲಿ ವಿದೇಶದಲ್ಲಿ ಕನ್ನಡ ಭಾಷೆಯಲ್ಲಿ ನಡೆಯುತ್ತಿರುವ ಪತ್ರಿಕೆ ಮತ್ತು ಕಾರ್ಯಕ್ರಮಗಳು ನೋಡಿದಾಗ ನಿಮ್ಮ ಕನ್ನಡ ಪ್ರೇಮದ ಮುಂದೆ ನಾವುಗಳು ನಗಣ್ಯವೆಂದು ಸಂಸದರು ಹೇಳಿದರು.

ಅಥಿತಿಗಳಾಗಿ ಆಗಮಿಸಿ ಭಾಷಣ ಮಾಡಿದ ಹಿರಿಯ ಉದ್ಯಮಿಗಳೂ ರಾಜ್ಯ ಜೆಡಿಎಸ್ ಕಾರ್ಯದರ್ಶಿಗಳೂ ಫಿಝಾ ಗ್ರೂಪ್ ಮುಖ್ಯಸ್ಥರೂ ಆದ ಜನಾಬ್ ಬಿಎಂ ಫಾರೂಖ್ ರವರು ಮಾತನಾಡಿ ಅಲ್ಪ ಸಂಖ್ಯಾತರ ಹೀನಾಯ ಪರಿಸ್ಥಿತಿಯ ಬಗ್ಗೆ ಭಾರತದಲ್ಲಿ ನಡೆಸಿದ ಸಾಚಾರ್ ಮತ್ತು ರಾಜೇಂದರ್ ಪ್ರಸಾದ್ ವರದಿಗಳು ಬಂದು ದಶಕಗಳು ಕಳೆದರು ಸಮುದಾಯದ ಏಳಿಗೆಯನ್ನು ಸುಧಾರಿಸಲು ನಂತರ ಬಂದ ಸರಕಾರಗಳು ಅದರ ಬಗ್ಗೆ ಯಾವುದೇ ರೀತಿಯ ಚರ್ಚೆಗಳಾಗಲೀ ಅಥವಾ ನಡೆವಳಿಕೆಗಳಾಗಲೀ ಮಾಡದಿರುವುದು ವಿಷಾದನೀಯವೆಂದು ಹೇಳಿದರು. ಖತಾರ್ ಉದ್ಯಮಿ ಜನಾಬ್ ಇಕ್ಬಾಲ್ ನಾವುಂದ ಅಥಿತಿಗಳಾಗಿ ಭಾಗವಹಿಸಿದ್ದರು.

ಶಾಸಕರುಗಳು, ಸಂಸದರುಗಳು, ಸಾಹಿತಿಗಳು ಮತ್ತು ಉದ್ಯಮಿಗಳಿಂದ ತುಂಬಿ ತುಳುಕಿದ ಸಭಾಂಗಣ

ಗಲ್ಫ್ ಇಶಾರ ಮಾಸಿಕದ ಯುಎಇ ಆವೃತ್ತಿಯ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಅಕ್ಷರಶ ಅಥಿತಿಗಳಿಂದ ತುಂಬಿ ತುಳುಕಿತ್ತು. ಸಂಸದರಾದ ಸಿ ಎಸ್ ಪುಟ್ಟರಾಜು ಮಂಡ್ಯ, ಕೆ ಆರ್ ನಗರ ಕ್ಷೇತ್ರದ ಶಾಸಕರಾದ ಶ್ರೀ ಸಾ ರಾ ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಟಿ ಶ್ರೀಕಂಠೇಗೌಡ, ಶ್ರೀ ಎನ್ ಅಪ್ಪಾಜಿಗೌಡ, ಶ್ರೀ ಬಿಎಂಎಲ್ ಕಾಂತೆರಾಜು, ಶ್ರೀ ಮಂಜುನಾಥ ಕೋಲಾರ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ರವಿಕುಮಾರ್, ಮೈಸೂರು ವಿಶ್ವವಿದ್ಯಾನಿಲಯ ನಿವೃತ ಕುಲಪತಿಗಳಾದ ಶ್ರೀ ರಂಗಪ್ಪ, ಆರ್ ಜೆ ಡಿ ರಾಜ್ಯಾಧ್ಯಕ್ಷರಾದ ಯಾಕುಬ್ ಯೂಸುಫ್ ಹೊಸನಗರ, ಅಮೇರಿಕಾ ಉದ್ಯಮಿಗಳಾದ ಡಾ ಚಿಕ್ಕಸ್ವಾಮಿ, ಯುಎಇ ಉದ್ಯಮಿಗಳಾದ ಜನಾಬ್ ಲತೀಫ್ ಮುಲ್ಕಿ, ಡಾ ಮುಹಮ್ಮದ್ ಕಾಪು, ಜನಾಬ್ ಎಂ ಇ ಮೂಳೂರು, ಫಕ್ರುದ್ದೀನ್ ಅಜ್ಮಲ್ ಗ್ರೂಪ್ ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸಿದ್ದು ಕೆಸಿಎಫ್ ಕಾರ್ಯಕ್ರಮಗಳ ಪಾಲಿಗೆ ಸುವರ್ಣ ಕ್ಷಣವಾಗಿ ಮಾರ್ಪಟ್ಟಿತು.

ಜನಪರ ಕಾರ್ಯಗಳಿಗೆ ನಮ್ಮ ಬೆಂಬಲ: ಮೌಲಾನಾ ಶಾಫಿ ಸಅದಿ

ರಾಜಕೀಯವಾಗಿ ಯಾವುದೇ ಪಕ್ಷವಿರಲಿ, ಜನಪರ ಕಾರ್ಯಗಳನ್ನು ಮಾಡುವ ಯಾವುದೇ ನಾಯಕರಾಗಲಿ ಸುನ್ನಿ ಕಾರ್ಯಕರ್ತರ ಬೆಂಬಲವಿದೆ ಎಂದು ರಾಜ್ಯ ವಕ್ಫ್ ಮಂಡಳಿ ನಿರ್ದೇಶಕರೂ, ಎಸ್ಸೆಸ್ಸೆಫ್ ರಾಜ್ಯಅದ್ಯಕ್ಷರೂ ಆದ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು ಹೇಳಿದರು. ಸಮಾರಂಭದಲ್ಲಿ ಭಾರತದ ಗಣರಾಜ್ಯೋತ್ಸವ ವಿಚಾರ ಸಂಕಿರಣದ ಮುಖ್ಯ ಭಾಷಣ ಮಾಡಿ ಮಾತನಾಡಿದ ಶಾಫಿ ಸಅದಿ ರವರು ಪಕ್ಷಗಳು ಕೇವಲ ರಾಜಕೀಯ ಕೆಲಸಗಳಿಗೆ ಮಾತ್ರ ಮುಸ್ಲಿಂ ಸಮುದಾಯವನ್ನು ಉಪಯೋಗಿಸಿ ಮೂಲೆಗುಂಪುಮಾಡಿ ಸಮುದಾಯವನ್ನು ಮುಂದೆ ತರಲು ಪ್ರಯತ್ನಿಸುತ್ತಿಲ್ಲ. ಸಮುದಾಯದ ಉನ್ನತಿಗೆ ಅಡ್ಡಗಾಲು ಹಾಕುವವರಿಗೆ ಮತದಾನದ ಮೂಲಕ ನಾವು ಪ್ರತ್ಯುತ್ತರ ನೀಡುವುದಾಗಿ ಅವರು ಹೇಳಿದರು. ಇದು ನಮ್ಮ ನಾಯಕ ತಾಜುಲ್ ಉಲಮಾ ವರ್ಷಗಳ ಹಿಂದೆ ನೀಡಿದ ಹೇಳಿಕೆಯಾಗಿದ್ದು ಅದು ಸಂಪೂರ್ಣವಾಗಿದೆ ಎಂದು ಹೇಳಿದರು.

ಪ್ರಶಂಸೆಗೆ ಪಾತ್ರವಾದ ಮಹಬೂಬ್ ಸಖಾಫಿ ಭಾಷಣ

ಪ್ರಾಸ್ತಾವಿಕ ಭಾಷಣ ಮಾಡಿದ ಕೆಸಿಎಫ್ ದುಬೈ ಝೋನ್ ಅಧ್ಯಕ್ಷರಾದ ಬಹು ಮಹಬೂಬ್ ರಹ್ಮಾನ್ ಸಖಾಫಿ ಕಿನ್ಯರವರು ಕೆಸಿಎಫ್ ಮತ್ತು ಗಲ್ಫ್ ಇಶಾರ ಕುರಿತು ಮನಮುಟ್ಟುವಂತೆ ಮಾಡಿದ ಭಾಷಣ ಶ್ರೀ ಕುಮಾರಸ್ವಾಮಿ ಸಹಿತ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಇಶಾರಾ ಎಲೈಟ್ ಕ್ಲಬ್ ಬಿಡುಗಡೆಯನ್ನು ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜೀ ಶೈಖ್ ಬಾವ ಮಂಗಳೂರು ನಿರ್ವಹಿಸಿದರು, ರಾಷ್ಟ್ರೀಯ ಸಮಿತಿ ನಾಯಕರಾದ ಪಿಎಂಹೆಚ್ ಅಬ್ದುಲ್ ಹಮೀದ್, ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ಕರೀಂ ಹಾಜಿ ಬಿಕರ್ನಕಟ್ಟೆ, ಮೂಸ ಹಾಜಿ ಬಸರ, ಅರಾಫತ್ ನಾಪೋಕ್ಲು, ದುಬೈ ಝೋನ್ ಕೋಶಾಧಿಕಾರಿ ಅಬೂಬಕರ್ ಹಾಜಿ ಕೊಟ್ಟಮುಡಿ, ಖಲೀಲ್ ಭಾಷಾ ಮಡಿಕೇರಿ, ಅಝೀಮ್ ಉಚ್ಚಿಲ ರಶೀದ್ ಹಾಜಿ ಬೆಳ್ಳಾರೆ ಸೇರಿದಂತೆ ರಾಷ್ಟ್ರೀಯ ಹಾಗೂ ಝೋನಲ್ ನಾಯಕರುಗಳು ಉಪಸ್ಥಿತರಿದ್ದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಉಸ್ಮಾನ್ ನಾಪೋಕ್ಲು ಸ್ವಾಗತಿಸಿ, ಗಲ್ಫ್ ಇಶಾರ ಪ್ರಥಮ ವಾರ್ಷಿಕೋತ್ಸವ ಸಮಿತಿ ಛೇರ್ಮನ್ ಝೈನುದ್ದೀನ್ ಹಾಜಿ ಬೆಳ್ಳಾರೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಿಯಾಝ್ ಕೊಂಡಂಗೇರಿ ಮತ್ತು ಆರ್ ಕೆ ಮದನಿ ಅಮ್ಮೆಂಬಲ ಕಾರ್ಯಕ್ರಮವನ್ನು ನಿರೂಪಿಸಿ, ಕರೀಂ ಮುಸ್ಲಿಯಾರ್ ಶಾರ್ಜಾ ವಂದಾರ್ಪಣೆ ನಿರ್ವಹಿಸಿದರು

Comments are closed.