ಗಲ್ಫ್

ದುಬೈ ಯಕ್ಷ ಪ್ರೇಮಿಗಳನ್ನು ತ್ರೇತಾ ಯುಗಕ್ಕೆ ಕೊಂಡೊಯ್ದ ಇಡಗುಂಜಿ ಮೇಳದ “ಸೀತಾಪಹರಣ”

Pinterest LinkedIn Tumblr

ದಿನಾಂಕ ೭-೧-೨೦೧೭ ಸಂಜೆ ೫:೩೦ ರಿಂದ ೮:೩೦ ರ ವರೆಗೆ ದುಬೈ Indian ಕಾನ್ಸುಲೇಟ್ ನ ಸಭಾಂಗಣದಲ್ಲಿ ನೆರೆದವರ ಮನ ಸೂರೆಗೊಂಡಿತು. ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗ್ಡೆ ಹಾಗು ತಂಡದವರ ಯಕ್ಷಗಾನ ಪ್ರದರ್ಶನ. ಶೃಂಗಾರಕ್ಕೆ ,ನಾಟ್ಯಕ್ಕೆ ,ಭಾವಾಭಿನಯ, ಹಾಡುಗಾರಿಕೆ ಹಾಗು ಮಾತಿಗೆ ಹೆಸರಾದ ಬಡಗು ತಿಟ್ಟು ಶೈಲಿಯಲ್ಲಿ. ಈ ಕಾರ್ಯಕ್ರಮ ಪ್ರಸ್ತುತ ಪಡಿಸಿದವರು ಇಂದ್ರಧನುಷ್ ಹಾಗು ಇಂಡಿಯನ್ ಕಾನ್ಸುಲೇಟ್ ದುಬೈ.

ಕಾರ್ಯಕ್ರಮದ ಆರಂಭದಲ್ಲಿ H.E ಅನುರಾಗ್ ಭೂಷಣ್ (consul genaral) ಹಾಗು ಶ್ರೀಮತಿ ದೀಪ ಜೈನ್ (Head of Chancery & Consul (Culture & Protocol)) ಕಾರ್ಯಕ್ರಮ ಉದ್ಘಾಟಿಸಿ Indian consulate services ಹಾಗು ಸಾಂಸ್ಕೃತಿಕ ಚಟುವಟಿಕೆಗಳ ಮಾಹಿತಿ ನೀಡಿದರು. ವಿಶಾಖಿ ಮಯ್ಯ ಕಾರ್ಯಕ್ರಮ ನಿರೂಪಿಸಿದರು, ಚಿನ್ಮಯಿ ಮಯ್ಯ ಪ್ರಾಥನೆ ಮಾಡಿದರು.

ವನವಾಸದ ಸಮಯದಲ್ಲಿ ಪಂಚವಟಿ ಯಲ್ಲಿ ಬಂದುನೆಲೆಸುವ ರಾಮ, ಲಕ್ಷ್ಮಣ ಸೀತೆಯಿಂದ ಆರಂಭವಾದ ಕತೆ ,ಶೂರ್ಪನಖಿಯ ಮೂಗು ಕತ್ತರಿಸಿ , ಸೇಡಿಗಾಗಿ ರಾಜ ರಾವಣ ಸಿದ್ಧನಾಗುವುದು , ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಚಿತ್ತ ಚಂಚಲ ಗೊಳಿಸುವುದು , ಸೀತೆ ರಾಮನನ್ನು ಜಿಂಕೆಗಾಗಿ ಅಂಗಲಾಚುವುದು , ಲಕ್ಷ್ಮಣ ರೇಖೆ , ಸನ್ಯಾಸಿ ರಾವಣ ಸೀತೆಯನ್ನು ಅಪಹರಿಸುತ್ತಿದ್ದಂತೆ ಘೋರ ರಾವಣ ನಾಗುವುದು ಹಾಗು ಜಟಾಯುಯೊಂದಿಗಿನ ಯುದ್ದದಿಂದ ಸೀತಾಪಹರಣದ ಕತೆ ಸಮಾಪ್ತಿಯಾಯಿತು.

ಶಾಂತ ಚಿತ್ತ ಪುರುಷೋತ್ತಮ ರಾಮನಾಗಿ ಶ್ರೀ ಕೆರೆಮನೆ ಶಿವಾನಂದ ಹೆಗ್ಡೆ ಯವರು , ಸ್ತ್ರೀ ಸಹಜ ಅಭಿಲಾಷೆ, ಪ್ರೀತಿ , ವ್ಯಾಮೋಹ ,ಪಶ್ಚಾತ್ತಾಪ ಮತ್ತು ಅಸಹಾಯಕತೆಯಾ ಸೀತೆ ಯಾಗಿ ಶ್ರೀ ಸದಾಶಿವ ಭಟ್ ಮನೋಜ್ಞ ಅಭಿನಯ ನೀಡಿದರು . ರಾಜಾ ರಾವಣ ಹಾಗು ಸನ್ಯಾಸಿ ರಾವಣ ನಾಗಿ ಶ್ರೀಈಶ್ವರ ಭಟ್ , ಘೋರ ರಾವಣ ಹಾಗು ಶೂರ್ಪನಖಿ ಯಾಯಾಗಿ ರಾಘವ ಹೆಗ್ಡೆ ಯವರುಗಳ ಅಭಿನಯ ಪರಕಾಯ ಪ್ರವೇಶಿಸಿದಂತಿತ್ತು, ಮಾತುಗಾರಿಕೆ ಅದ್ಭುತವಾಗಿತ್ತು .ರಾಕ್ಷಸರಾದರು ತಮ್ಮ ನಟನೆಯಿಂದ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು . ಮಾರೀಚನಾಗಿ ಹಿರಿಯ ಕಲಾವಿದ ಶ್ರೀ ತಿಮ್ಮಪ್ಪ ಹೆಗ್ಡೆ , ಲಕ್ಷ್ಮಣನಾಗಿ ಪ್ರತಿಭಾವಂತ ಕಲಾವಿದ ಶ್ರೀ ವಿಘ್ನೇಶ್ವರ ಹಾವಾಗೂಡಿ ,ಜಟಾಯುವಾಗಿ ಯುವಕಲಾವಿದ ಶ್ರೀ ಚಂದ್ರ ಶೇಖರ ಉಪ್ಪಾರ , ಬಾಂಗಾರದ ಜಿಂಕೆಯಾಗಿ ಚುರುಕುತನದ ಪ್ರದರ್ಶನ ನೀಡಿದ ಶ್ರೀ ಅನಂತ ಕುಣುಬಿ ಇವರೊಂದಿಗೆ ಹಿಮ್ಮೇಳನದಲ್ಲಿ ಕೇಂದ್ರ ಸಂಗೀತ ಅಕಾಡಮಿಯಿಂದ ‘ಬಿಸ್ಮಿಲ್ಲಾಖಾನ್ ಯುವ ಪ್ರತಿಭೆ ” ಪ್ರಶಸ್ತಿ ಪುರಸ್ಕೃತ ಭಾಗವತರಾದ ಶ್ರೀ ಅನಂತ ಹೆಗ್ಡೆ,ಚೆಂಡೆಯಲ್ಲಿ ಶ್ರೀ ಶ್ರೀಧರ ಗೌಡ ಮದ್ದಳೆಯಲ್ಲಿ ಸಾಥ್ ನೀಡಿದವರು ಶ್ರೀ ಪರಮೇಶ್ವರ ಹೆಗ್ಡೆ.

ಗ್ಲೋಬಲ್ ವಿಲೇಜ್ ನಲ್ಲೂ ಯಕ್ಷ ದುಂಧುಬಿ

5/1/2017 ರಂದು ಸಂಜೆ ಗ್ಲೋಬಲ್ ವಿಲೇಜ್ ಇಂಡಿಯನ್ ಪೆವಿಲಿಯೊನ್ ನಲ್ಲಿ ಪ್ರತಿ ೭ ನಿಮಿಷಗಳ ೩ ಯಕ್ಷಗಾನ ಪ್ರದರ್ಶನ ನಡೆಯಿತು. ಚೆಂಡೆ ಸದ್ದು ಕನ್ನಡೇತರ ಹಾಗು ಭಾರತೀಯೇತರರನ್ನು ಸೂಜಿಗಲ್ಲಿನಂತೆ ಸೆಳೆಯಿತು , ಜಗಮಗಿಸುವ ಯಕ್ಷಗಾನ ದಿರಿಸಿನಲ್ಲಿದ್ದ ಕಲಾವಿದರೊಂದಿಗಿನ ಭಾವ ಚಿತ್ರಕ್ಕೆ ಜನ ಮುಗಿಬಿದ್ದರು . ಕರ್ನಾಟಕದ ಈ ಶ್ರೀಮಂತ ಕಲೆ ನೆರೆದವರ ಮನಗೆದ್ದಿತು .

ದುಬೈಯಲ್ಲಿ ನಡೆದ ಯಕ್ಷಗಾನದ ಸಂಪೂರ್ಣ ಜವಾಬ್ದಾರಿ ಹಾಗು ಪ್ರಧಾನ ಸಂಯೋಜನೆ ಮಾಡಿದವರು ಶ್ರೀ ಸತೀಶ್ ಮಯ್ಯ , ಶ್ರೀಮತಿ ಗೋಪಿಕಾ ಮಯ್ಯ ಹಾಗು ಶ್ರೀ ಸಂಪತ್.

ಇಡಗುಂಜಿ ಮೇಳ ಹಾಗು ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ
ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ , ಕೆರೆಮನೆ ಆರಂಭ ಗೊಂಡಿದ್ದು ೧೯೩೪ರಲ್ಲಿ ,ದಿವಂಗತ ಕೆರೆಮನೆ ಶಿವರಾಮ ಹೆಗ್ಡೆ ನೇತೃತ್ವ ದಲ್ಲಿ . ಪರಿಶುದ್ಧ ಹಾಗು ಸಂಪ್ರದಾಯ ಬದ್ದ ಪ್ರದರ್ಶನಗಳಿಗೆ ಹೆಸರಾದ ಈ ಮೇಳವನ್ನು ಉತ್ತುಂಗಕ್ಕೆ ಕೊಂಡೊಯ್ದು ೪೦ ವರ್ಷಗಳ ಕಾಲ ನಿರ್ದೇಶಕರಾಗಿದ್ದ ವರು ಯಕ್ಷ ದಿಗ್ಗಜ ದಿವಂಗತ ಶ್ರೀ ಶಂಭು ಹೆಗ್ದೆಯವರು. ಪ್ರಸ್ತುತ ಯಕ್ಷಗಾನ , ಭಾರತೀಯ ಶಾಸ್ತ್ರೀಯ ನೃತ್ಯಗಳಾದ ಕಥಕ್ , ಮಣಿಪುರಿ,ಛಾಹೂ ಗಳಲ್ಲಿ ಪಾಂಡಿತ್ಯವನ್ನು(ಶ್ರೀಮತಿ ಮಾಯಾ ರಾವ್ ಶಿಷ್ಯರು ) ಪಡೆದಿರುವ ಶ್ರೀ ಶಿವಾನಂದ ಹೆಗ್ಡೆ ಯವರ ನಾಯಕತ್ವದಲ್ಲಿ ಮೇಳ ಮುಂದುವರಿಯುತ್ತಿದೆ. ಇದುವರೆಗೆ ೮೦೦೦ಕ್ಕೂ ಮಿಕ್ಕು ಪ್ರದರ್ಶನ ನೀಡಿರುವ ಮೇಳ ಭಾರತದಾದ್ಯಂತ ವಲ್ಲದೆ ೧೮ ದೇಶಗಳಲ್ಲಿ ಪ್ರದರ್ಶನ ನೀಡಿದೆ .

ಯಕ್ಷಗಾನ ಉಳಿಯಬೇಕಾದರೆ ಅದರ ಶಿಕ್ಷಣ ಅಗತ್ಯವೆಂದು ಮನಗೊಂಡ ಶ್ರೀ ಶಂಭು ಹೆಗ್ಡೆಯವರು ೧೯೮೬ರಲ್ಲಿ ಶಿಕ್ಷಣ, ರಕ್ಷಣ ,ಪ್ರಸರಣ ಎಂಬ ದ್ಯೆಯೋಕ್ತಿಯೊಂದಿಗೆ ಆರಂಭಿಸಿದ ಕಲಿಕಾ ಕೇಂದ್ರವೇ “ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ ” ಇಲ್ಲಿ ಗುರುಕುಲ ಪದ್ಧತಿ , ಇಲ್ಲಿ ಉಚಿತ ಊಟ, ವಸತಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಿ ಹುರಿದುಂಬಿಸಲಾಗುತ್ತದೆ. ಇಂದಿನ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಲವಾರು ದಿಗ್ಗಜರು ಈ ಕಲಿಕಾ ಕೇಂದ್ರದಲ್ಲಿ ಅರಳಿದ ಕುಸುಮಗಳೇ , ಪ್ರಮುಖರಾದವರು ಶ್ರೀ ನೀಲ್ಕೋಡು ಶಂಕರ ಹೆಗ್ಡೆ, ಶ್ರೀ ಯಲಗುಪ್ಪ ಸುಬ್ರಮಣ್ಯ ಹೆಗ್ಡೆ, ಶ್ರೀ ಮಂಕಿ ಈಶ್ವರ ನಾಯ್ಕ ರವೀಂದ್ರ ಭಟ್ ,ಮೃದಂಗದಲ್ಲಿ ಏನ್.ಜಿ.ಹೆಗ್ಡೆ ,ಸುನಿಲ್ ಭಂಡಾರಿ , ಭಾಗವತ ಅನಂತ್ ದಂತಲಿಕೆ ಇನ್ನು ಹಲವರು .

ರಾಷ್ಟೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುವ ಕೆರೆಮನೆ ಕಲಾವಿದರಿಗೆಇನ್ನು ಪ್ರೋತ್ಸಾಹ ಪುರಸ್ಕಾರ ಸಿಗುತ್ತಿರಲಿ , ಆದಷ್ಟು ಬೇಗ ೧೦೦೦೦ ಪ್ರದರ್ಶನಗಳನ್ನು ಪೂರೈಸಲಿ ಎಂಬುದು ಅಭಿಮಾನಿಗಳ ಆಶಯ.

-ವರದಿ: ಆರತಿ ಅಡಿಗ

Comments are closed.