
ನವದೆಹಲಿ (ಪಿಟಿಐ/ಐಎಎನ್‌ಎಸ್): ಕೆಲಸಕ್ಕೆ ಸೇರಿದ ಮೂವರು ಕೇರಳ ಮೂಲದ ಯುವಕರ ಮೇಲೆ ಸೌದಿಅರೇಬಿಯಾದ ಉದ್ಯೋಗದಾತ ಕಂಪೆನಿಯ ಮಾಲೀಕನೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಲಸ ಕೊಡಿಸುವ ಏಜೆನ್ಸಿಯೊಂದರ ಮೂಲಕ ಯುವಕರು ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅಲ್ಲಿ ಹೋದ ನಂತರ ಏಜೆನ್ಸಿಯವರು ವಂಚಿಸಿರುವುದು ಗೊತ್ತಾಗಿದೆ.
ಉದ್ಯೋಗ ನೀಡುವ ಏಜೆನ್ಸಿಯು ಯುವಕರಿಗೆ ಕೆಲಸದ ಬಗ್ಗೆ ಸುಳ್ಳು ಭರವಸೆ ನೀಡಿ, ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ಅಲ್ಲಿ ಅವರು ಹಲ್ಲೆಗೆ ಒಳಗಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಸೌದಿ ಅರೇಬಿಯಾದ ಕಂಪೆನಿಯ ಮಾಲೀಕನೊಬ್ಬ ಈ ಯುವಕರನ್ನು ಕಟ್ಟಿಗೆಯಿಂದ ಹೊಡೆಯುತ್ತಿರುವ ದೃಶ್ಯ ವ್ಯಾಟ್ಸ್‌ಅಪ್‌ನಲ್ಲಿ ಹರಿದಾಡುತ್ತಿದೆ.
ಬಸ್ಸಿನಲ್ಲಿ ಯುವಕರು: ಉದ್ಯೋಗ ನೀಡುವುದಾಗಿ ವಂಚಿಸಿದ ಏಜೆನ್ಸಿಯೊಂದು ಉತ್ತರ ಪ್ರದೇಶದ ಹತ್ತಕ್ಕೂ ಹೆಚ್ಚು ಜನರನ್ನು ದುಬೈಗೆ ಕರೆದುಕೊಂಡು ಹೋಗಿ ವಂಚಿಸಿ ಹದಿನೈದು ದಿನಗಳ ಕಾಲ ಬಸ್ಸಿನಲ್ಲೇ ಕಾಲ ಕಳೆಯುವಂತೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಷಯವನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಮತ್ತು ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದುಬೈ ಹೊರವಲಯದಲ್ಲಿದ್ದ ಬಸ್ ನೋಡಿದ ಭಾರತೀಯ ವಲಸಿಗರೊಬ್ಬರು ಯುವಕರ ನೆರವಿಗೆ ಧಾವಿಸಿ ಅವರು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಭಾರತೀಯರು ಬಿಡುಗಡೆ: ನೈಜೀರಿಯಾದ ಕಡಲ್ಗಳ್ಳರು ಅಪಹರಿಸಿದ್ದ ಐವರು ಭಾರತೀಯ ನಾವಿಕರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಹೇಳಿದ್ದಾರೆ. ‘ಕಡಲ್ಗಳ್ಳರ ವಶದಲ್ಲಿದ್ದ ಐವರು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಯಶಸ್ವಿಯಾಗಿದ್ದೇವೆ’ ಎಂದು ಸುಷ್ಮಾ ಸ್ವರಾಜ್ ‘ಟ್ವಿಟ್’ ಮಾಡಿದ್ದಾರೆ.
ಐವರು ನಾವಿಕರನ್ನು ಕಡಲ್ಗಳ್ಳರು ಡಿಸೆಂಬರ್ 11 ಅಪಹರಿಸಿದ್ದರು. ನಾವಿಕರ ಬಿಡುಗಡೆಗೆ ಸಂಬಂಧಿಸಿದಂತೆ ನೈಜೀರಿಯಾದಲ್ಲಿನ ಭಾರತದ ರಾಯಭಾರಿ ಎ.ಆರ್. ಘನಶ್ಯಾಮ್ ಅವರು ನೈಜೀರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕಡಲ್ಗಳ್ಳರ ವಶದಿಂದ ನಾವಿಕರನ್ನು ಸುರಕ್ಷಿತವಾಗಿ ಬಿಡಗಡೆಗೊಳಿಸಲು ಶ್ರಮಿಸಿದ ರಾಯಭಾರಿ ಘನಶ್ಯಾಮ ಮತ್ತು ಅಧ್ಯಕ್ಷ ಬುಹಾರಿ ಅವರಿಗೆ ಸಚಿವೆ ಸುಷ್ಮಾ ಅಭಿನಂದನೆ ಸಲ್ಲಿಸಿದ್ದಾರೆ.
***
ಸೌದಿ ಅರೇಬಿಯಾದಲ್ಲಿ ಯುವಕರ ಮೇಲೆ ನಡೆದಿರುವ ಹಲ್ಲೆ ಕುರಿತು ಅಲ್ಲಿಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರಿಗೆ ರಕ್ಷಣೆ ನೀಡಲಾಗಿದೆ.
-ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ