ಗುದೈಬಿಯ, ಬಹ್ರೈನ್: ತನ್ನ ದಶಮದ ವರ್ಷಾಚರಣೆಯನ್ನು ದಶ ವಿಶೇಷ ಕಾರ್ಯಕ್ರಮಗಳ ಮೂಲಕ ವರ್ಷದುದ್ದಕ್ಕೂ ಅತಿ ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿರುವ ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ಇತ್ತೀಚೆಗೆ ತನ್ನ ಅಷ್ಟಮ ಕಾರ್ಯಕ್ರಮವಾಗಿ ‘ಅಟಿಲ್’ ಎಂಬ ಭರ್ಜರಿ ತುಳುನಾಡ ಖಾದ್ಯ ಮೇಳವನ್ನು ಗುದೈಬಿಯಾ ನಗರದ ಇಂಡಿಯನ್ ಕ್ಲಬ್‍ನ ಹೊರಾಂಗಣದಲ್ಲಿ ಅತಿ ಸಂಭ್ರಮದಿಂದ ಆಯೋಜಿಸಿತು.
ಸಂಸ್ಥೆ ಹುಟ್ಟಿದ ವರ್ಷದಿಂದ ಅಟಿಲ್ ಶೀರ್ಷಿಕೆಯೊಂದಿಗೆ ಆರಂಭಗೊಂಡ ಈ ತುಳುನಾಡ ಮಹಾ ಆಹಾರೋತ್ಸವವು ಮೊಗವೀರ್ಸ್ ಬಹ್ರೈನ್‍ನ ಅತಿ ಆದ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ದ್ವೀಪ ರಾಷ್ಟ್ರದ ತುಳು-ಕನ್ನಡಿಗ ಸಮುದಾಯದ ಮಧ್ಯೆ ಅತ್ಯಂತ ಜನಮೆಚ್ಚುಗೆಯನ್ನು ಪಡೆಯುತ್ತಾ ಬಂದ ಒಂದು ಸಂಭ್ರಮೋಲ್ಲಾಸದ ಅರ್ಥಪೂರ್ಣ ಕಾರ್ಯಕ್ರಮವೂ ಆಗಿರುತ್ತದೆ. ಸಂಸ್ಥೆಯ ಹಿಂದಿನ ಅಹಾರ ಮೇಳಗಳಂತೆ ಈ ಬಾರಿಯ ಅಟಿಲ್‍ನಲ್ಲೂ ತುಳು-ಕನ್ನಡಿಗರಿಗಾಗಿ ತಾಯ್ನಾಡಿನ ಸಾಂಪ್ರದಾಯಿಕ ಶೈಲಿಯ ಮನೆ-ಪಾಕದ ಸ್ವಾದಿಷ್ಟಮಯ ಖಾದ್ಯ ವೈವಿಧ್ಯಗಳನ್ನು ಪ್ರದರ್ಶನ ಮತ್ತು ಆಸ್ವಾದನೆಗಾಗಿ ಇಡಲಾಗಿತ್ತು. ಅಂತೆಯೇ ಮೇಳಕ್ಕೊಪ್ಪುವ ಕೆಲವು ಬಗೆಯ ನಾಡ ಶೈಲಿಯ ಮೋಜಿನ ಆಟಗಳನ್ನೂ ಆಯೋಜಿಸಲಾಗಿತ್ತು.
ವಿಶೇಷವೆಂಬಂತೆ ಈ ಬಾರಿಯ ಖಾದ್ಯ ಮೇಳದಲ್ಲಿ ನೂರಕ್ಕೂ ಮಿಕ್ಕಿದ ಶುಚಿ-ರುಚಿಯ ಶಾಖಾಹಾರಿ, ಮಾಂಸಾಹಾರಿ ಖಾದ್ಯಗಳಲ್ಲದೆ, ತಾಯ್ನಾಡಿನ ಸಾಂಪ್ರದಾಯಿಕ ಸ್ವಾದೀಯ ವ್ಯಂಜನಗಳೂ, ತುಳುನಾಡಿನ ಹಬ್ಬದ ತಿಂಡಿ-ತಿನಿಸುಗಳೂ ಮತ್ತು ವಿಶೇಷ ಸೇರಿಕೆಯಾಗಿ ಬಗೆ ಬಗೆಯ ಸಿಹಿ ತಿಂಡಿ ತಥಾ ಸಿಹಿ ಖಾದ್ಯಗಳೂ ಪಾಲು ಪಡೆದಿದ್ದವು. ಮೇಳದಲ್ಲಿ ಕರಾವಳಿಯ ಸ್ವಾದಿಷ್ಟಮಯ ಮೀನಿನ ಖಾದ್ಯಗಳು ಪ್ರಧಾನ ಆಕರ್ಷಣೆಯಾಗಿದ್ದು, ವಿವಿಧ ಬಗೆಯ ಆ ಖಾದ್ಯಗಳು ತಾಯಂದಿರ ಮನೆಯಡುಗೆಯ ನಳಪಾಕದ ರುಚಿಯನ್ನು ಸವಿಯುವ ನಿರೀಕ್ಷೆಯೊಂದಿಗೆ ಮೇಳಕ್ಕೆ ಆಗಮಿಸಿದವರ ಆಸೆಯನ್ನು ಈಡೇರಿಸುವಲ್ಲಿ ಸಫಲವಾಯಿತು. ಹೆಚ್ಚಿನವರು ವಿವಿಧ ವಿನೋದದ ಆಟಗಳಲ್ಲೂ ಭಾಗಿಯಾಗಿ ಸಂತೃಪ್ತರಾದರು.
ಕಾರ್ಯಕ್ರಮದ ಆರಂಭದಲ್ಲಿ, ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ನೆರೆದವರೆಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಉಪಾಧ್ಯಕ್ಷೆ ಶರ್ಮಿಳಾ ಭಾಸ್ಕರ್ ಕಾಂಚನ್ ಅವರು ಆಹಾರೋತ್ಸವಕ್ಕೆ ಶುಭ ಹಾರೈಸಿದರು. ಹಿರಿಯರಾದ ವಿಟ್ಠಲ್ ಸುವರ್ಣ ಅವರು ತೆಂಗಿನಕಾಯಿ ಒಡೆಯುವ ಮೂಲಕ ಈ ಬೃಹತ್ ಆಹಾರ ಮೇಳವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟಿಸಿದರು. ನಂತರದಲ್ಲಿ ತುಳುನಾಡ ಸಂಸ್ಕೃತಿಯಂತೆ ಸಂಸ್ಥೆಯ ಮಹಿಳಾ ಸದಸ್ಯೆಯರು ಸುನಂದಾ ಸೀತಾರಾಮ್ ಪುತ್ರನ್ ಅವರ ನೇತೃತ್ವದಲ್ಲಿ ತುದಿ ಬಾಳೆಯ ಎಲೆಯ ಮೇಲೆ ವಿವಿಧ ಭಕ್ಷ್ಯಗಳನ್ನು ಬಡಿಸಿ ಅದನ್ನು ಸಾಂಕೇತಿಕವಾಗಿ ಪ್ರಕೃತಿಗೆ ಸಮರ್ಪಿಸುತ್ತಾ ಆ ಮೂಲಕ ಅಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಖಾದ್ಯ ವೈವಿಧ್ಯಗಳ ಪ್ರದರ್ಶನ ಮತ್ತು ಆಸ್ವಾದನೆಗೆ ಚಾಲನೆ ನೀಡಿದರು.
ಆಂತೆಯೇ ಆ ತರುವಾಯ ಬಹು ಸಂಖ್ಯೆಯಲ್ಲಿ ಅಲ್ಲಿ ಮೆರೆದಿದ್ದ ಖಾದ್ಯಪ್ರಿಯರನ್ನು ಭಕ್ಷ್ಯ ವೀಕ್ಷಣೆ ಮತ್ತು ಆಸ್ವಾದನೆಗೆ ಅಹ್ವಾನಿಸಲಾಯಿತು. ಆಗಮಿಸಿದವರೆಲ್ಲರೂ ಬಗೆ ಬಗೆಯ ಖಾದ್ಯಗಳ ವ್ಯವಸ್ಥೆ, ವಿವಿಧ ಮೋಜಿನ ಆಟದ ವ್ಯವಸ್ಥೆ ಮತ್ತು ಕಾರ್ಯಕ್ರಮದ ಅಚ್ಚುಕಟ್ಟುತನದಿಂದ ಸಂತೃಪ್ತಿ ಹೊಂದಿದರಲ್ಲದೆ, ಅವರಲ್ಲಿ ಅನೇಕರು ತಮ್ಮ ಮೆಚ್ಚುಗೆಯ ನುಡಿಗಳನ್ನು ನೆರೆದವರ ಮುಂದೆ ತಪ್ಪದೆ ಮಂಡಿಸಿದರು. ಈ ಆಹಾರ ಮೇಳದಲ್ಲಿ ಕೆಲವು ಬಗೆಯ ಹಸಿ ತರಕಾರಿ ಮತ್ತು ಹಸಿ ಮೀನುಗಳನ್ನೂ ಪ್ರದರ್ಶನಕ್ಕಿಡಲಾಗಿದ್ದು, ಕಾರ್ಯಕ್ರಮದ ಕೊನೆಗೆ ಅವೆಲ್ಲವನ್ನೂ ತಾಯ್ನಾಡಿನ ಶೈಲಿಯಲ್ಲಿ ಏಲಂ ಹಾಕಲಾಯ್ತು. ಬಹಳ ಯಶಸ್ಸನ್ನು ಕಂಡ ಈ ಭರ್ಜರಿ ಆಹಾರ ಮೇಳಕ್ಕೆ ನೆರೆಯ ಸೌದಿ ಅರೇಬಿಯಾದಿಂದಲೂ ಆಹ್ವಾನಿತರು ಆಗಮಿಸಿ ಸಂಭ್ರಮಿಸಿದರು.
ಈ ಮಹಾ ಆಹಾರೋತ್ಸವಕ್ಕಾಗಿ ವಿವಿಧ ಬಗೆಯ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ ತಂದವರಿಗೆ ಹಾಗೂ ವಿವಿಧ ರೀತಿಯಲ್ಲಿ ಈ ಉತ್ಸವದ ಯಶಸ್ಸಿಗೆ ಸಹಕಾರವಿತ್ತವರಿಗೆ ಸಂಸ್ಥೆಯ ವತಿಯಿಂದ ಉಡುಗೊರೆಗಳನ್ನು ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಮೆಂಡನ್ ಮತ್ತು ಮನರಂಜನಾ ಕಾರ್ಯದರ್ಶಿ ಸುರೇಶ್ ಅಮೀನ್ ಅವರು ಬಹುವಾಗಿ ಶ್ರಮಿಸಿದ್ದರು. ಅಂತೆಯೇ ಇತರರಾದ ಚಂದ್ರ ಮೆಂಡನ್, ಪುನೀತ್ ಪುತ್ರನ್ ಮತ್ತು ಪದ್ಮನಾಭ ಕಾಂಚನ್ ಇವರೆಲ್ಲಾ ವಿಶೇಷ ಸಹಕಾರವನ್ನು ನೀಡಿದ್ದರು. ಪ್ರದೀಪ್ ಮೂಲ್ಕಿ, ನಾಗೇಶ್ ನಾಯ್ಕ್, ಮನೋಹರ್ ಹೆಜ್ಮಾಡಿ, ತೀರ್ಥ ಸುವರ್ಣ ಮತ್ತು ಸುರೇಶ್ ಸಾಲ್ಯಾನ್ ಇವರೆಲ್ಲಾ ಉತ್ಸವದ ಉಸ್ತುವಾರಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಅತಿ ಸಂಭ್ರಮದ ಈ ಅಟಿಲ್ ಕಾರ್ಯಕ್ರಮಕ್ಕೆ ಇಂಡಿಯನ್ ಕ್ಲಬ್‍ನ ಅಧ್ಯಕ್ಷರಾದ ಆನಂದ್ ಲೋಬೋ ಮತ್ತು ಇಂಟರ್ಕಾಲ್ ಸಂಸ್ಥೆಯ ನವೀನ್ ಮೆಂಡನ್ ಅವರು ಮುಖ್ಯ ಪ್ರಾಯೋಜಕತ್ವವನ್ನು ನೀಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಉತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕಾರವಿತ್ತವರಿಗೆ ಹಾಗೂ ಪ್ರಾಯೋಜಕರಿಗೆ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಸಾದ್ ಅವರು ಗೈದರು.