ಗಲ್ಫ್

ಕುಮಾರಿ ಶ್ರುತಿಯ ನೋವಿನ ಕಥೆಗೆ ಸ್ಪಂದಿಸಿದ “ಬಹರೈನ್ ಬಿಲ್ಲವಾಸ್ ” : ಆರ್ಥಿಕ ಸಹಾಯದೊಂದಿಗೆ ಕಣ್ಣೀರು ಒರೆಸಲು ಮುಂದಾದ ಸಂಘಟನೆ 

Pinterest LinkedIn Tumblr

ka

ಬಹರೈನ್ ; ಇಲ್ಲಿನ ಅನಿವಾಸಿ ಬಿಲ್ಲವರ ಒಕ್ಕೂಟವಾದ “ಬಹರೈನ್ ಬಿಲ್ಲವಾಸ್ ” ಅಸ್ತಿತ್ವಕ್ಕೆ ಬಂದು ಇದೀಗ ೧೧ ವರುಷಗಳು ಕಳೆದಿದ್ದು ಸಂಘಟನೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಮುದಾಯದ ನೊಂದವರ ಕಣ್ಣೀರನ್ನು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದು ಇತ್ತೀಚಿಗೆ ತಾಯ್ನಾಡಿನ ಯುವತಿಯೊಬ್ಬಳ ಕರುಣಾಜನಕ ಕಥೆಯನ್ನು ಕೇಳಿ ಆರ್ಥಿಕ ಸಹಾಯದೊಂದಿಗೆ ಸ್ಪಂದಿಸಿ ಸಮುದಾಯದ ಬಗೆಗಿರುವ ತನ್ನ ಕಳಕಳಿಯನ್ನು ಮತ್ತೊಮ್ಮೆ ಮೆರೆಯಿತು .

ಎಂ ಕಾಂ ನ ಪ್ರಥಮ ವರುಷದ ವ್ಯಾಸಂಗ ಪೂರೈಸುತ್ತಿರುವ ಉಡುಪಿಯ ಪ್ರತಿಭಾವಂತ ವಿಧ್ಯಾರ್ಥಿನಿ ಶ್ರುತಿ ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ತಂದೆಯಿಲ್ಲದ ಆ ಮನೆಗೆ ಆಧಾರವಾಗುವ ಕನಸು ಕಾಣುತಿದ್ದಳು . ತಾಯಿ ಕೂಡ ಅವಳನ್ನು ಕಷ್ಟಪಟ್ಟು ಓದಿಸಿ ಮುಂದೊಂದು ದಿನ ತಮ್ಮೆಲ್ಲ ಕಷ್ಟಗಳೂ ಮುಗಿದು ಒಳ್ಳೆಯ ದಿನಗಳು ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು . ಶ್ರುತಿಯ ಎರಡೂ ಮೂತ್ರ ಪಿಂಡಗಳು ವೈಫಾಲ್ಯಗೊಂಡಿರುವ ಸುದ್ದಿ ಬರಸಿಡಿಲಿನಂತೆ ಆ ಕುಟುಂಬದ ಮೇಲೆ ಎರಗಿ ಬಡ ಕುಟುಂಬದ ಕನಸನ್ನೇ ನುಚ್ಚುನೂರು ಮಾಡಿತು . ಮಾಧ್ಯಮಗಳಲ್ಲಿ ,ಅಂತರ್ಜಾಲಗಳಲ್ಲಿ ಈ ಸುದ್ದಿ ಪ್ರಕಟವಾಗಿ ಎಲ್ಲರ ಹ್ರದಯವನ್ನೇ ಕಲುಕುವಂತೆ ಮಾಡಿದಾಗ ತಕ್ಷಣವೇ ಸ್ಪಂದಿಸಿದ್ದು ಇಲ್ಲಿನ ಅನಿವಾಸಿ ಬಿಲ್ಲವರ ಒಕ್ಕೂಟವಾದ “ಬಹರೈನ್ ಬಿಲ್ಲವಾಸ್”.

ಅನಿವಾಸಿ ಬಿಲ್ಲವರ ಸಂಘಟನೆ ” ಬಹರೈನ್ ಬಿಲ್ಲವಾಸ್” ಅಧ್ಯಕ್ಷರಾದ ಶ್ರೀ ಕೃಷ್ಣ ಸುವರ್ಣರವರ ಮುಂದಾಳತ್ವದಲ್ಲಿ ಆರ್ಥಿಕ ಸಹಾಯ ನೀಡುವ ನಿರ್ಧಾರ ಮಾಡಿದಾಗ ಈ ಸಮಾಜಮುಖಿ ಕಾರ್ಯಕ್ಕೆ ಬಿಲ್ಲವ ಭಾಂದವರು ಮಾತ್ರವಲ್ಲದೆ ಬಿಲ್ಲವೇತರರು ಸ್ಪಂದಿಸಿದರು . ಕುಮಾರಿ ಶ್ರುತಿಯ ತಾಯಿ ತನ್ನ ಮಗಳಿಗೆ ಒಂದು ಮೂತ್ರ ಪಿಂಡವನ್ನು ದಾನ ಮಾಡಲು ನಿರ್ಧರಿಸಿದ್ದು ,ಇದಾಗಲೇ ಅದರ ಪ್ರಾಥಮಿಕ ಪ್ರಕ್ರಿಯೆಗಳು ಮುಗಿದಿದ್ದು ಇನ್ನು ಕೆಲವೇ ದಿನಗಳಲ್ಲಿ ಮೂತ್ರ ಪಿಂಡದ ಜೋಡಣೆ ಮಾಡಲಾಗುವುದು . ಇದು ಬಹಳ ದುಬಾರಿಯಾದ ಚಿಕಿತ್ಸೆಯಾಗಿದ್ದು ಇದಕ್ಕೆ ಲಕ್ಷಾಂತರ ರೂಪಾಯಿಗಳ ಅವಶ್ಯಕತೆಯಿದ್ದು ಇದಾಗಲೇ ಅನೇಕ ದಾನಿಗಳು ಸಹಾಯ ಹಸ್ತ ಚಾಚಿ ಮುಂದೆ ಬಂದಿದ್ದಾರೆ .

ಇತ್ತೇಚೆಗೆ ಉಡುಪಿಯ ಶ್ರುತಿಯ ಮನಗೆ ತೆರಳಿದ ಬಹರೇನ್ ಬಿಲ್ಲವಾಸ್ ನ ಹಿರಿಯ ಸದಸ್ಯರಾದ ಕಮಲಾಕ್ಷ ಅಮೀನ್ ಹಾಗು ಜಯಕುಮಾರ್ ಮಣಿಪಾಲ್ ರವರು ಯೋಗಕ್ಷೇಮ ವಿಚಾರಿಸಿ “ಬಹರೈನ್ ಬಿಲ್ಲವಾಸ್ ” ನವರ ಪರವಾಗಿ ಒಂದು ಲಕ್ಷದ ಐದು ಸಾವಿರ ಭಾರತೀಯ ರುಪಾಯಿಗಳನ್ನು ಕುಮಾರಿ ಶ್ರುತಿಗೆ ಹಸ್ತಾಂತರಿಸಿ ಶೀಘ್ರವೇ ಗುಣಮುಖರಾಗಲೆಂದು ಶುಭ ಹಾರೈಸಿದರು . ಈ ಸಂಧರ್ಭದಲ್ಲಿ ಶ್ರೀಮತಿ ಸುನಿತಾ ಜಯಕುಮಾರ್ , ಸಮಾಜ ಸೇವಕ ಪ್ರಭಾತ್ ಕೊಡವೂರು ,ಶ್ರುತಿಯ ತಾಯಿ ಉಪಸ್ಥಿತರಿದ್ದರು .
ಚಿತ್ರ -ವರದಿ – ಕಮಲಾಕ್ಷ ಅಮೀನ್

Write A Comment