ದಮಾಮ್, ಡಿ. 5: ‘‘ಬಾಬರಿ ಮಸೀದಿ- ನೆನೆಯುತ್ತಿರೋಣ ಕಟ್ಟುವವರೆಗೂ…’’ ಅಭಿಯಾನದ ಅಂಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟನ್ ಪ್ರೊವಿನ್ಸ್ ವಿಭಾಗದ ವತಿಯಿಂದ ಡಿಸೆಂಬರ್ 5ರಂದು ರಾತ್ರಿ ದಮಾಮ್-ಖೋಬರ್ ನಾದ ಕ್ಲಬ್ ಸಭಾಂಗಣದಲ್ಲಿ ‘‘ಸಾಂವಿಧಾನಿಕ ವೌಲ್ಯಗಳ ಮರುಸ್ಥಾಪನೆ- ನಮ್ಮ ಹೊಣೆಗಾರಿಕೆ’’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ದಿಕ್ಸೂಚಿಯಾಗಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮಾಮ್ ಜಿಲ್ಲಾ ಸಮಿತಿ ಸದಸ್ಯರಾದ ಫಯಾಝ್ ಎನ್ ಅವರು, ಬಾಬರಿ ಮಸ್ಜಿದ್ ಕೇವಲ ಮುಸ್ಲಿಮರ ಪ್ರಾರ್ಥನಾ ಮಂದಿರವಾಗಿರದೆ ಅದು ದೇಶದ ಜಾತ್ಯತೀತ ಪರಂಪರೆಯ ಸಂಕೇತವಾಗಿತ್ತು. ಅದನ್ನು ಕೇವಲ ಫ್ಯಾಷಿಸ್ಟ್ ಶಕ್ತಿಗಳು ತಮ್ಮ ಶಸ್ತ್ರಾಗಳಿಂದ ಮಾತ್ರ ಧ್ವಂಸಗೊಳಿಸಿದ್ದಲ್ಲ. ಬದಲಾಗಿ ಸಂವಿಧಾನವನ್ನು ಸ್ತಬ್ಧವಾಗಿಸಿ ಕಾನೂನು ಮತ್ತು ಆಡಳಿತ ವ್ಯವಸ್ಥೆಯನ್ನು ಬಳಸಿ ವಿಧ್ವಂಸಕ ಕತ್ಯ ಎಸಗಿದ್ದಾರೆ. ಬಾಬರಿ ಮಸ್ಜಿದ್ ಧ್ವಂಸದ ಮೂಲಕವೇ ದೇಶದಲ್ಲಿ ಫ್ಯಾಷಿಸ್ಟ್ ಶಕ್ತಿಗಳು ವ್ಯಾಪಕವಾಗಿ ಬೆಳೆಯಿತು. ಬಾಬರಿ ಮಸ್ಜಿದ್ ಧ್ವಂಸದೊಂದಿಗೆ ಜಾತ್ಯತೀತ ಶಕ್ತಿಗಳು ಶಿಥಿಲಗೊಂಡಿರುವುದು ಕೂಡ ಧ್ವಂಸದ ಆರೋಪಿಗಳು ಅಧಿಕಾರಕ್ಕೇರುವಲ್ಲಿ ಸಫಲರಾಗಲು ಕಾರಣ ಎಂದರು.ಬಾಬರಿ ಮಸ್ಜಿದ್ ಎಂಬುದನ್ನು ಒಂದು ನಿರ್ದಿಷ್ಟ ಮನೋಸ್ಥಿತಿಯಿಂದ ಹೊರಬಂದು ವಿಶ್ಲೇಷಿಸಬೇಕಾಗಿದೆ. ಇಂದು ದೇಶದಲ್ಲಿ ಭಾರತೀಯತೆ ಮತ್ತು ಫ್ಯಾಷಿಸ್ಟರ ನಡುವಿನ ಸಂಘರ್ಷ ನಡೆಯುತ್ತಿದೆ. ಧ್ವಂಸಗೊಂಡ ಸಾಮರಸ್ಯವನ್ನು ಬಲಗೊಳಿಸುವುದು ನಮ್ಮ ಇಂದಿನ ಸವಾಲಾಗಿದೆ. ಈ ಕಾರಣಕ್ಕಾಗಿ ಸಾಂವಿಧಾನಿಕ ವೌಲ್ಯಗಳನ್ನು ಮರುಸ್ಥಾಪಿಸಬೇಕಾಗಿರುವುದು ಈ ದೇಶದ ಉಳಿವಿನ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕವಿ, ಚಿಂತಕ ಜಲೀಲ್ ಮುಕ್ರಿ ಅವರು ಮಾತನಾಡಿ, ಇಷ್ಟು ವರ್ಷಗಳ ಕಾಲ ನಾವು ಈ ಕರಾಳ ದಿನವನ್ನು ನೆನಪಿಸುತ್ತಲೇ ಬಂದಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ನ್ಯಾಯ ಮರುಸ್ಥಾಪನೆಗೆ ದುಡಿಯಬೇಕಾದ ಅಗತ್ಯತೆ ಇದೆ. ನಾವು ಒಗ್ಗಟ್ಟಾಗಿ ಈ ಸವಾಲನ್ನು ಎದುರಿಸಿದರೆ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಇನ್ನಷ್ಟು ಅನಾಹುತಗಳನ್ನು ತಡೆಬಹುದಾಗಿದೆ ಎಂದರು.
ಇಂಡಿಯಾ ಫ್ರೆಟರ್ನಿಟಿ ಫೋರಮ್ ಉರ್ದು ಚಾಪ್ಟರ್ ಸಮಿತಿ ಸದಸ್ಯ ಮಿರಾಜ್ ಗುಲ್ಬರ್ಗಾ ಮಾತನಾಡಿ, ಈ ದೇಶದಲ್ಲಿ ಜನರು ಫ್ಯಾಷಿಸಂನ ಆಳವನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಜಾತ್ಯತೀತತೆ ಈ ದೇಶದ ತಳಹದಿ. ಅದನ್ನು ಉಳಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ ಎಂದರು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ನ ಕರ್ನಾಟಕ ರಾಜ್ಯಾಧ್ಯಕ್ಷ ಶರೀಫ್ ಅಡ್ಡೂರು ಉಪಸ್ಥಿತರಿದ್ದರು.ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮಾಮ್ ಜಿಲ್ಲಾ ಕಾರ್ಯದರ್ಶಿ ಇರ್ಶಾದ್ ಜೆ. ಸ್ವಾಗತಿಸಿದರು. ಇಂಡಿಯಾ ಫ್ರೆಟರ್ನಿಟಿ ಫೋರಮ್ ಖೋಬರ್ ಘಟಕದ ಅಧ್ಯಕ್ಷ ಬಶೀರ್ ಅಮ್ಮೆಮ್ಮಾರ್ ಕಿರಾಅತ್ ಪಠಿಸಿದರು. ಐಎಫ್ಎಫ್ ದಮಾಮ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ. ಧನ್ಯವಾದ ಸಲ್ಲಿಸಿದರು. ಮನ್ಸೂರು ಗುರುಪುರು ಕಾರ್ಯಕ್ರಮ ನಿರೂಪಿಸಿದರು.