ದುಬೈ ನೆಲದಲ್ಲಿ ಯಕ್ಷಗಾನದ ಚಟುವಟಿಕೆಗಳನ್ನು ನಡೆಸುತ್ತಾ ಅವಿರತವಾಗಿ ಯಕ್ಷಗಾನಕ್ಕಾಗಿ ದುಡಿಯುತ್ತಿರುವ `ಯಕ್ಷಮಿತ್ರರು ದುಬೈ’ ಇವರು ಮಸ್ಕತ್ನ ಗಣೇಶೋತ್ಸವ ಸಮಿತಿಯವರ ಆಹ್ವಾನದ ಮೇರೆಗೆ ಸೆಪ್ಟೆಂಬರ್ 5ನೇ,2014ರಂದು ಮಸ್ಕತ್ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಕಕ್ಕಿರಿದ ಕಲಾ ರಸಿಕರ ಮಧ್ಯೆ “ಭಕ್ತಪಹ್ಲಾದ ಮತ್ತು ಇಂದ್ರಜಿತು ಕಾಳಗ ” ಎಂಬ ಆಖ್ಯಾನವನ್ನು ಆಡಿ ತೋರಿಸಿದರು. ಮಸ್ಕತ್ನ ಯಕ್ಷಗಾನ ಕಲಾಭಿಮಾನಿಗಳು ದುಬೈಯ ಯಕ್ಷಗಾನ ಕಲಾವಿದರ ಪ್ರತಿಭಾ ವಿಲಾಸಕ್ಕೆ ತಲೆದೂಗಿ ಪ್ರಶಂಸೆಯ ಸುರಿಮಳೆ ಸುರಿಸಿದರು.
ಮಸ್ಕತ್ನ ಶ್ರೀಕೃಷ್ಣಮಂದಿರದಲ್ಲಿ ನಿಗದಿಯಾದಂತೆ ಸಂಜೆ 6ಕ್ಕೆ ಸರಿಯಾಗಿ ಪ್ರದರ್ಶನ ಪ್ರಾರಂಭವಾಯಿತು.ಸಂಪ್ರದಾಯದಂತೆ ನೆರೆದ ಭಕ್ತಾಭಿಮಾನಿಗಳ ಸಂಮುಖ ಚೌಕಿಮನೆಯಲ್ಲಿ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.ವೇದಿಕೆಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಶ್ರೀಯುತ ಸವ್ತರ್ೊತ್ತಮ ಶೆಟ್ಟಿ ದುಬಾಯಿ ಮತ್ತು ವಾಸುಕುಮಾರ್ ಶೆಟ್ಟಿ ದುಬಾಯಿ.ಇವರೊಂದಿಗೆ ಸ್ಥಳೀಯ ಗಣ್ಯಅತಿಥಿಗಳು ಕೈಜೋಡಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪ್ರಸಂಗಾರಂಭಕ್ಕೆ ಮೊದಲು ಪಾತ್ರಪರಿಚಯ ಮಾಡಿದ ಶ್ರೀಯುತ ಪ್ರಕಾಶ ನಾಯಕ್ ಎರಡೂ ಪ್ರಸಂಗಗಳ ಕಥಾಹಂದರವನ್ನುಸ್ಥೂಲವಾಗಿ ವಿವರಿಸಿದರು.
ಯಕ್ಷಮಿತ್ರರ ಸದಸ್ಯರ ಜೊತೆ ಪ್ರದರ್ಶನದ ಯಶಸ್ಸಿಗೆ ಪಾಲುದಾರರಾದವರು ತಾಯ್ನಾಡಿನಿಂದ ಆಗಮಿಸಿದ ಯಕ್ಷರಂಗದ ದಿಗ್ಗಜರೆನಿಸಿದ ಭಾಗವತರು, ಗಾನಕೋಗಿಲೆ- ಶ್ರೀಯುತ ರವಿಚಂದ್ರ ಕನ್ನಡಿಕಟ್ಟೆ, ಚೆಂಡೆಯ ಗಂಡುಗಲಿ -ಶ್ರೀಯುತ ಪದ್ಯಾಣ ಶಂಕರನಾರಾಯಣ ಭಟ್ -ಹಿಮ್ಮೇಳದಲ್ಲಿ ಮಿಂಚಿನ ಸಂಚಾರ ಹರಿಸಿದರು. ವೇಷಧಾರಿಯಾಗಿ ಪ್ರಖ್ಯಾತ ಯುವ ಕಲಾವಿದ, ಯಕ್ಷರಂಗದ ಮುಂಚೂಣಿಯ ಪುಂಡುವೇಷಧಾರಿ, ಕಟೀಲು ಮೇಳದ ಅಗ್ರಗಣ್ಯ ಕಲಾವಿದರಲ್ಲಿ ಒಬ್ಬರಾದ ಶ್ರೀಯುತ ಅಮ್ಮುಂಜೆ ಮೋಹನ್ ಕುಮಾರ್ ಮತ್ತು ವೇಷಭೂಷಣ- ಪ್ರಸಾಧನ ಕಲಾವಿದರಾಗಿ ಶ್ರೀಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅಲ್ಲದೆ ಪ್ರಸ್ತುತ ಊರಿನಲ್ಲೇ ಇರುವ ಯಕ್ಷಮಿತ್ರದ ಸದಸ್ಯ ಶ್ರೀಯುತ ಕಿಶೋರ್ ಗಟ್ಟಿ ಇವರು ಪ್ರದರ್ಶನ ಬಾಲಗೋಪಾಲರ ಪೂರ್ವರಂಗ ಕುಣಿತದಿಂದಲೇ ಪ್ರಾರಂಭವಾಗಿ ಪ್ರದರ್ಶನಕ್ಕೆ ವಿಶೇಷ ಮೆರುಗನ್ನು ನೀಡಿತು. ಕುಮಾರಿ ಅದಿತಿ ದಿನೇಶ್ ಶೆಟ್ಟಿ, ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಲ ಮತ್ತು ಪ್ರತೀಕ್ ಜಯಾನಂದ ಪಕ್ಕಲ ಬಾಲ ಕಲಾವಿದರಾಗಿ ರಂಜಿಸಿದವರು. ಮತ್ತೆ ಇವರು ನಳ, ನೀಲ ಮತ್ತು ಅಂಗದರಾಗಿಯೂ ಪ್ರೇಕ್ಷಕರನ್ನು ಮುದಗೊಳಿಸಿದರು. ಇನ್ನೋರ್ವ ಬಾಲ ಕಲಾವಿದೆ. ಕುಮಾರಿ ಶರಣ್ಯಾ ವೆಂಕಟೇಶ್ ಶಾಸ್ತ್ರಿ, ಪ್ರಹ್ಲಾದ ಮತ್ತು ಕಪಿಯಾಗಿ ತಾನೋರ್ವ ಸಮರ್ಥ ಕಲಾವಿದೆ ಎಂದು ಸಾಬೀತು ಪಡಿಸಿದರು. ಇನ್ನೋರ್ವ ಕಲಾವಿದೆ ಕುಮಾರಿ ಸಮಂತಾ ಹೆಗ್ಡೆ- ವಿಭೀಷಣನಾಗಿ ತಮ್ಮ ಹಿತಮಿತ ಕುಣಿತ ಮಾತುಗಳಿಂದ ಪ್ರೇಕ್ಷಕರ ಮನ ಗೆದ್ದರು.
ಶ್ರೀಮತಿ ಆಶಾ ಕೊರೆಯಾ ಕಯಾದು ಪಾತ್ರ್ರದ ಮೂಲಕ ಕರುಣಾ ರಸದ ಅದ್ಭುತ ಅಭಿನಯದಿಂದ ಭಾವಪೂರ್ಣ ಮಾತುಗಳಿಂದ ಪ್ರೇಕ್ಷಕರನ್ನು ಮಿಸುಕಾಡದಂತೆ ಹಿಡಿದಿಟ್ಟುಕೊಂಡರು. ತಂಡದ ಅನುಭವಿ ಕಲಾವಿದ ಶ್ರೀಯುತ ರವೀಂದ್ರ ಉಚ್ಚಿಲ ಇವರು ಹಿರಣ್ಯ ಕಶ್ಯಪ ಪಾತ್ರದಲ್ಲಿ ಖಳನಾಯಕ ಪಾತ್ರ ಚಿತ್ರಣವನ್ನು, ಗತ್ತು ಗೈರತ್ತುಗಳನ್ನು ಗಾಂಭೀರ್ಯತೆಯಿಂದ ಕಟ್ಟಿ ಕೊಟ್ಟರು. ಗುರು ಚಂಡ ಮಾರ್ಕರಾಗಿ ತನ್ನ ವಾಗ್ವೈಕರಿಯ ನೈಪುಣ್ಯ ತೋರಿಸಿದ ಶ್ರೀಯುತ ಅಮ್ಮುಂಜೆ ಮೋಹನರು ಮತ್ತೆ ಹನೂಮಂತನಾಗಿ ತಮ್ಮ ಹಾವಭಾವ ಕುಣಿತ ಮಾತುಗಳಿಂದ ರಂಗದಲ್ಲಿ ವಿದ್ಯುತ್ ಸಂಚಾರವನ್ನು ಹರಿಸಿದರು. ಪ್ರಸಂಗ ಆರಂಭದಲ್ಲಿ ರಾಮನಾಗಿ ಶ್ರೀಯುತ ಬಾಲಕೃಷ್ಣ ಡಿ ಶೆಟ್ಟಿಗಾರ್ ಮತ್ತು ಲಕ್ಷ್ಮೀಯಾಗಿ ಶ್ರೀಯುತ ಕೃಷ್ಣಪ್ರಸಾದ್ ಭಟ್ ಕಾಣಿಸಿಕೊಂಡರೆ ಮತ್ತ್ತೆ ರಾಮ ಮತ್ತು ಸೀತೆಯರಾಗಿ ಕಾಣಿಸಿಕೊಂಡು ಪ್ರಸಂಗ ಕಳೆಕಟ್ಟುವಲ್ಲಿ ಸಹಕರಿಸಿದರು. ರಾವಣನಾಗಿ ಪರಂಪರೆಯ ಕೇಶಾವರಿ ತಟ್ಟಿ ವೇಷದಲ್ಲಿ ಕಾಣಿಸಿಕೊಂಡ ಶ್ರೀಯುತ ವಿಕ್ರಮ ಶೆಟ್ಟಿ ಕಡಂದಲೆ ತಮ್ಮ ದೈತ್ಯಪ್ರತಿಭೆಯನ್ನು ಪ್ರಸ್ತುತಪಡಿಸಿದರು. ಮರಳಿ ಶುಕ್ರಾಚಾರ್ಯ ಪಾತ್ರದ ಮೂಲಕ ತಾನು ಯಾವ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟರು.
ಲಕ್ಷ್ಮಣನಾಗಿ ಅಭಿನಯಿಸಿದ ಶ್ರೀಯುತ ಕಿಶೋರ್ ಗಟ್ಟಿಯವರು ತಮ್ಮ ಚುರುಕು ಕುಣಿತ, ಹರಿತ ಮಾತುಗಳಿಂದ ಲಕ್ಷ್ಮಣನ ಪಾತ್ರಕ್ಕೆ ನ್ಯಾಯ ಒದಗಿಸಿದರು. ಪ್ರದರ್ಶನದ ಉದ್ದಕ್ಕೂ ಹಾಸ್ಯದ ಹೊನಲನ್ನು ಹರಿಸಿದವರು, ತಂಡದ ಹಾಸ್ಯ ಕಲಾವಿದ ಶ್ರೀಯುತ ಗಿರೀಶ್ ನಾರಾಯಣ್ ಕಾಟಿಪಳ್ಳ. ಇವರ ಶಿಷ್ಯರು.. ರಾವಣ ದೂತ ಜಾಂಬವ ಪಾತ್ರಗಳು ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದವು. ಉಳಿದಂತೆ ಶಿಷ್ಯರು ಮತ್ತು ಕಟುಕರಾಗಿ ಶ್ರೀಯುತ ಡೋನಿ ಕೊರೆಯ, ಶ್ರೀಯುತ ವಸಂತ ಸೇವರ್ೇಗಾರ್ ಮತ್ತು ಇನ್ನೋರ್ವ ಶಿಷ್ಯರಾಗಿ ಶ್ರೀಯುತ ವಿಕ್ರಮ ಕಟೀಲು ಇವರು ತಮ್ಮ ಚಾಟೂಕ್ತಿಗಳಿಂದ ರಂಜಿಸಿದರು. ನರಸಿಂಹನಾಗಿ ಕಾಣಿಸಿಕೊಂಡವರು ಹಿರಿಯ ಕಲಾವಿದ ಶ್ರೀಯುತ ಸುಧಾಕರ ತುಂಬೆಯವರು. ಚೆಂಡೆ ಮದ್ದಲೆಯಲ್ಲಿ ಸಹಕರಿಸಿದವರು ತಂಡದ ಹಿರಿಯ ಸದಸ್ಯ ಶ್ರೀಯುತ ವೆಂಕಟೇಶ ಶಾಸ್ತ್ರಿಯವರು. ಶ್ರೀಯುತ ಚಂದ್ರ ಮೋಹನ್ ಚಕ್ರ ತಾಳದಲ್ಲಿ ಸಹಕರಿಸಿದರು.ರಂಗ ಸಜ್ಜಿಕೆಯಲ್ಲಿ ದಿನೇಶ ಬಿಜೈ ಮತ್ತು ಶ್ರೀಯುತ ಭಾಸ್ಕರ್ ನೀರುಮಾರ್ಗ ಇವರು ಸಹಕರಿಸಿದರು.
ಪ್ರಸಂಗವನ್ನು ಅಚ್ಚುಕಟ್ಟಾಗಿ ನಿದರ್ೇಶಿಸಿದ ಶೇಖರ್ ಡಿ. ಶೆಟ್ಟಿಗಾರ್ ಇಂದ್ರಜಿತು ಪಾತ್ರದಲ್ಲಿಯೂ ಅಬ್ಬರಿಸಿದರು. ಪ್ರದರ್ಶನದ ಪ್ರಮುಖ ರಸಘಟ್ಟಗಳಾಗಿ – ಕಯಾದು-ಪ್ರಹ್ಲಾದರ ಭಾವಪೂರ್ಣ ಅಭಿನಯ ದೃಶ್ಯ, ಶ್ರೀರಾಮನ ಲಕ್ಷ್ಮಣ, ವಿಭೀಷಣ ಮತ್ತು ಕಪಿಗಳೊಂದಿಗೆ ಒಡ್ಡೋಲಗದ ದೃಶ್ಯ ಮತ್ತು ಇಂದ್ರಜಿತು – ಹನೂಮಂತರ ಹಾಸ್ಯ ಲೇಪನದ ಸಂಭಾಷಣೆಯ ಸೊಗಡು ನೆರೆದ ಯಕ್ಷ ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀಯುತ ಚಿದಾನಂದ ಪೂಜಾರಿ ವಾಮಂಜೂರು ಮತ್ತು ಶ್ರೀಯುತ ದಿನೇಶ್ ಶೆಟ್ಟಿ ಕೊಟ್ಟಿಂಜ ಇವರು ಕಾರ್ಯಕ್ರಮ ಅಚುಕಟ್ಟಾಗಿ ಪ್ರದರ್ಶನಗೊಳ್ಳುವಲ್ಲಿ ಶ್ರಮಿಸಿದರು.ವುಡಶೈನ್ ಕಾಪರ್ೆಂಟರ್ಸ್ ದುಬೈಯವರ ಪರಂಪರೆಯ ರಂಗಸ್ಥಳ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತು. ಕಾವೂರು ಇಲೆಕ್ಟ್ರಿಕಲ್ಸ್ ನವರು ಒದಗಿಸಿದ ವಿಶೇಷ ವಿದ್ಯುದ್ದೀಪಗಳ ಅಲಂಕಾರ ಮತ್ತಷ್ಟು ಶೋಭೆ ಹೆಚ್ಚಿಸಿತು.ಯಕ್ಷಮಿತ್ರರೊಡನೆ ಬಹಳಷ್ಟು ದುಬೈಯ ಯಕ್ಷರಸಿಕರು ಆಗಮಿಸಿ ಕಲಾವಿದರನ್ನು ಹುರಿದುಂಬಿಸಿದರು- ಯಕ್ಷಕೌಮುದಿಗೆ ಸಾಕ್ಷಿವೊದಗಿಸಿದರು.ಪ್ರದರ್ಶನಾವಕಾಶ ಕಲ್ಪಿಸಿದ ಮಸ್ಕತಿನ ಗಣೇಶೋತ್ಸವ ಸಮಿತಿಯವರು ಪ್ರದರ್ಶನದ ಯಶಸ್ಸಿನಿಂದ ತಮ್ಮ ಶ್ರಮಕ್ಕೆ ತಕ್ಕ ಫಲ ದೊರಕಿದ ಧನ್ಯತೆಯನ್ನು ಹೊಂದಿದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯರಾದ ಎಸ್.ಕೆ.ಪೂಜಾರಿ ಮತ್ತು ರಮೇಶ್ ಶೆಟ್ಟಿಗಾರ್, ನಾಗೇಶ್ ಶೆಟ್ಟಿಯವರ ಜೊತೆ ಗಣ್ಯಾತಿಗಣ್ಯ ಅತಿಥಿಗಳು ಸೇರಿ ಊರಿನಿಂದ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶ್ರೀಯುತ ರವಿಚಂದ್ರ ಕನ್ನಡಿಕಟ್ಟೆ,ಶ್ರೀಯುತ ಪದ್ಯಾಣ ಶಂಕರನಾರಾಯಣ ಭಟ್, ಶ್ರೀಯುತ ಅಮ್ಮುಂಜೆ ಮೋಹನ್ ಕುಮಾರ್, ಶ್ರೀಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶ್ರೀಯುತ ಕಿಶೋರ್ ಗಟ್ಟಿ ಇವರನ್ನುಶಾಲು ಹೊದಿಸಿ,ಫಲತಾಂಬೂಲ- ಸ್ಮರಣಿಕೆಗಳನ್ನು ನೀಡಿ ಸಂಮಾನಿಸಿದರು. ಯಕ್ಷಮಿತ್ರರ ಸದಸ್ಯರನ್ನು ಕೂಡ ಸ್ಮರಣಿಕೆ ನೀಡಿ ಯಥೋಚಿತವಾಗಿ ಸತ್ಕರಿಸಲಾಯಿತು. ಶ್ರೀಮತಿ ರಮೇಶ್ ಶೆಟ್ಟಿಗಾರ್ ಇವರು ಧನ್ಯವಾದ ಸಮರ್ಪಣೆ ಮಾಡಿದರು.