ಕನ್ನಡ ವಾರ್ತೆಗಳು

ಕಾಳಸಂತೆಯಲ್ಲಿ ತತ್ಕಾಲ್ ಟಿಕೆಟ್ ಮಾರಾಟಕ್ಕೆ ಯತ್ನ : ರೂ.20,935 ಮೌಲ್ಯದ ಟಿಕೆಟ್‍ ಸಹಿತಾ ಮೂವರು ಆರೋಪಿಗಳು ಸೆರೆ

Pinterest LinkedIn Tumblr

ಮಂಗಳೂರು : ಆರ್‍‌ಪಿಎಫ್ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೇ ಪ್ರಯಾಣಿಕರ ತತ್ಕಾಲ್ ಟಿಕೆಟ್‍ ಗಳನ್ನು ಖರೀದಿಸಿ ಬಳಿಕ ಹೆಚ್ಚು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲೆತ್ನಿಸುತ್ತಿದ್ದ ಮೂವರನ್ನು ಬಂಧಿಸಿ, ರೂ.20,935 ಮೌಲ್ಯದ ಟಿಕೆಟ್‍ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನಗರದ ಚಿಲಿಂಬಿ ನಿವಾಸಿಕಿರಣ್ ಜೆ. ಭಟ್ (35), ಕೆಂಜಾರು ಗುಂಡೊಟ್ಟು ಹೌಸ್ ನಿವಾಸಿ ರವಿ ರಾಜೇಂದ್ರ ಶೆಟ್ಟಿ (30) ಮತ್ತು ಕಂಕನಾಡಿ ವೆಲೆನ್ಸಿಯಾ ನಿವಾಸಿ ಉಮೇಶ್ (41) ಎಂದು ಹೆಸರಿಸಲಾಗಿದೆ.

ಆರೋಪಿಗಳು ಶನಿವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್‍ನಲ್ಲಿ ಟಿಕೆಟ್ ಪಡೆಯಲೆಂದು ರಿಸರ್ವೇಶನ್ ಕೌಂಟರ್‌ನ ಬಳಿ ಸರದಿ ಸಾಲಿನಲ್ಲಿ ನಿಂತಿದ್ದರು. ಮೂವರು ಕೂಡ ತತ್ಕಾಲದಲ್ಲಿ ಟಿಕೆಟ್‍ ಗಳನ್ನು ಕಾದಿರಿಸಿ ಬಳಿಕ ಅಲ್ಲೇ ಕೆಲವರನ್ನು ಸಂಪರ್ಕಿಸಿ ಟಿಕೆಟ್‍ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ಚಲನವಲನದಿಂದ ಅನುಮಾನಗೊಂಡ ಆರ್‍ ಪಿ ಎಫ್ ಎಸ್‍ ಐ ಭರತ್‍ ರಾಜ್ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾಳಸಂತೆಯಲ್ಲಿ ಮಾರಾಟ ಮಾಡಲು ಟಿಕೆಟ್‍ ಗಳನ್ನು ಪಡೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಕಿರಣ್ ಭಟ್‍ನಿಂದ 8,655 ರೂ., ಉಮೇಶ್‍ನಿಂದ 4,960ರೂ. ಹಾಗೂ ರವಿರಾಜೇಂದ್ರನಿಂದ 7,320 ರೂ. ಬೆಲೆಯ ಒಟ್ಟು ರೂ. 20,935 ಮೌಲ್ಯದ ಟಿಕೆಟ್‍ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.