ಕನ್ನಡ ವಾರ್ತೆಗಳು

ಆರ್‌ಟಿಎ ಕಾರ್ಯಕರ್ತ ಬಾಳಿಗ ಕೊಲೆ ಪ್ರಕರಣ : ನಾಲ್ಕನೇ ಆರೋಪಿಯ ಸೆರೆ

Pinterest LinkedIn Tumblr

Besent_murder_photo_1

ಮಂಗಳೂರು, ಮೇ.18 : ಆರ್ ಟಿ ಎ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಶಂಕಿತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚಂದ್ರ ಪೂಜಾರಿ ಎಂಬವರ ಪುತ್ರ ಶೈಲೇಶ್ @ ಶೈಲು (40) ಎಂದು ಹೆಸರಿಸಲಾಗಿದೆ. ಈ ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಎಂದು ಶಂಕಿಸಲಾಗಿರುವ ಈತ ಮಂಗಳೂರು ಹೊರವಲಯದಲ್ಲಿದ್ದಾನೆಂಬ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 23ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು.

ದಿನಾಂಕ: 21-03-2016 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,

ಗಂಭೀರ ಗಾಯಗೊಂಡ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಲುಪಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವಿನಾಯಕ ಪಾಂಡುರಂಗ ಬಾಳಿಗರವರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ವಿನಾಯಕ ಪಾಂಡುರಂಗ ಬಾಳಿಗರವರ ತಂಗಿಯಾದ ಅನುರಾಧ ಬಾಳಿಗರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ ಮತ್ತು ಶಿವ @ ಶಿವಪ್ರಸಾದ್ ಎಂಬವರನ್ನು ಬಂಧಿಸಲಾಗಿದೆ. ಇದೀಗ ಈ ಪ್ರಕರಣದ ಮತ್ತೊಬ್ಬ ಆರೋಪಿ ಶೈಲೇಶ್ @ ಶೈಲು ಎಂಬಾತನನ್ನು ಬಂಧಿಸುವ ಮೂಲಕ ಬಾಳಿಗ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದಂತಾಗಿದೆ. ಸಿ.ಸಿ.ಬಿ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಸೇರಿದಂತೆ ಉಳಿದ ಆರೋಪಿಗಳ ಮಾಹಿತಿ ದೊರೆತಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರ ಅಧಿಕೃತ ಪ್ರಕಟಣೆ ತಿಳಿಸಿದೆ.

Comments are closed.