ಕನ್ನಡ ವಾರ್ತೆಗಳು

ಎತ್ತಿನಹೊಳೆ : ಮೇ 19ರ ಸ್ವಯಂಪ್ರೇರಿತ ಬಂದ್ ಯಶಸ್ವಿಗೆ ಕರೆ – ಸಚಿವ ರೈ ಧ್ವಂಧ್ವ ಹೇಳಿಕೆ : ಮಾಜಿ ಶಾಸಕರ ಆರೋಪ

Pinterest LinkedIn Tumblr

Ettinhole_prss_meet_1

ಮಂಗಳೂರು, ಮೇ.17 : ಎತ್ತಿನ ಹೊಳೆ ಯೋಜನೆ ಸ್ಥಗಿತಗೊಳಿಸಲು ಆಗ್ರಹಿಸಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯಲಿರುವ ಸ್ವಯಂ ಪ್ರೇರಿತ ಏಕದಿನ ಬಂದ್‌ಗೆ ಸಾರ್ವಜನಿಕರು ಸಹಕಾರ ಉತ್ತಮ ರೀತಿಯಲ್ಲಿ ನೀಡುವುದರ ಜೊತೆಗೆ ಬಂದ್‌ ಯಶಸ್ವಿಗೊಳಿಸಬೇಕು. ಜೊತೆಗೆ ಈ ಸಂದರ್ಭದಲ್ಲಿ ಯಾವೂದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡ ಬಾರದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ, ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೇತ್ರಾವತಿ ನದಿ ನೀರಿನ ಸಂರಕ್ಷಣೆಗಾಗಿ ಹೋರಾಡುತ್ತಿರುವ ವಿವಿಧ ಸಂಘಟನೆಗಳು ಮೇ 19ರ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ ಕೆಲವು ಪ್ರತಿಷ್ಠಿತ ಕಂಪನಿಗಳು , ಶಿಕ್ಷಣ ಸಂಸ್ಥೆಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘಟ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಹಾಲು ಹಾಗೂ ಅಂಬ್ಯುಲೆನ್ಸ್ ವಾಹನಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ ಎಂದರು.

Ettinhole_prss_meet_2

ಮೇ 16ರಂದು ನಗರದಲ್ಲಿ ನಡೆದ ಜಾಥಕ್ಕೆ ಹೆಚ್ಚಿನ ಜನರು ಜಾತ್ಯತೀತವಾಗಿ ಸಹಕಾರ ನೀಡಿದ್ದಾರೆ. ಪ್ರತಿಭಟನೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಪ್ರತಿಭಟನೆಯಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಯೋಜನೆಯನ್ನು ವಿರೋಧಿಸಿದ್ದಾರೆ, ಆದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟಗಾರರ ಜೊತೆ ಮಾತುಕತೆ ನಡೆಸುವ ಆಸಕ್ತಿ ತೋರಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಮೇ 19ರಂದು ನಡೆಯುವ ಜಿಲ್ಲಾ ಬಂದ್‌ನಿಂದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವಾಗಬೇಕು ಎಂದು ವಿಜಯ್ ಕುಮಾರ್ ಶೆಟ್ಟಿ ಹೇಳಿದರು.

Ettinhole_prss_meet_3

ಸಚಿವ ರೈ ಧ್ವಂಧ್ವ ಹೇಳಿಕೆ : ಆರೋಪ

ಈಗಾಗಲೇ ನಮ್ಮ ಸಂಸದರು ಹಾಗೂ ಶಾಸಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು, ಈ ಹಿಂದೆ ಈ ಯೋಜನೆಯನ್ನು ವಿರೋಧಿಸಿದ್ದರು, ಆದರೆ ಇದೀಗ ಯೋಜನೆಗೆ ಬೆಂಬಲ ವ್ಯಕ್ತಪಡಿಸುವಂತಹ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರದ ಆಸೆಗಾಗಿ ಇಂತಹ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಈ ರೀತಿ ಹೇಳಿಕೆ ನೀಡುವ ಬದಲು ಅವರು ಯೋಜನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಪ್ರಯತ್ನ ಮಾಡ ಬಹುದಿತ್ತು ಎಂದು ವಿಜಯ್ ಕುಮಾರ್ ಶೆಟ್ಟಿ ಆರೋಪಿಸಿದರು.

ಐಐಟಿಯ ನಿವೃತ್ತ ಪ್ರೊಫೆಸರ್ ರಾಮಚಂದ್ರನ್ ಈ ಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಇದೊಂದು ಫಲಪ್ರದ ಯೋಜನೆಯಲ್ಲ ಎಂದಿದ್ದಾರೆ.ಎನಐಟಿಕೆಯ ನಿವೃತ್ತ ಪ್ರೊಫೆಸರ್ ಎಸ್.ಜಿ.ಮಯ್ಯ ಈ ಯೋಜನೆಯಿಂದ ನೇತ್ರಾವತಿ ನದಿ ಪಾತ್ರದ ಜನರ ಮೇಲಾಗುವ ಸಮಸ್ಯೆಯ ಬಗ್ಗೆ ತಿಳಿಸಿ ಯೋಜನೆಯನ್ನು ವಿರೋಧಿಸಿದ್ದರೂ ಸರಕಾರ ಈ ಅಭಿಪ್ರಾಯಗಳನ್ನು ಸ್ವೀಕರಿಸದೆ ಯೋಜನೆಯನ್ನು ಮುಂದುವರಿಸಲು ಹೊರಟಿರುವುದು ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾದ ಯೋಜನೆಯಾಗಿದೆ ಎಂದು ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.

Ettinhole_prss_meet_4

ಪತ್ರಿಕಾಗೋಷ್ಠಿಯ ಸಮಿತಿಯ ಪದಾಧಿಕಾರಿಗಳಾದ ಸತ್ಯಜಿತ್ ಸುರತ್ಕಲ್, ಎಂ.ಜಿ.ಹೆಗಡೆ, ಶಶಿರಾಜ್ ಶೆಟ್ಟಿ ಕೊಳಂಬೆ, ಅನಂದ್ ಶೆಟ್ಟಿ ಅಡ್ಯಾರ್, ಯೋಗೀಶ್ ಶೆಟ್ಟಿ ಜೆಪ್ಪು, ಜಿತೆಂದ್ರ ಕೊಟ್ಟಾರಿ, ರಘುವೀರ ಸೂಟರ್ ಪೇಟೆ, ದಿನಕರ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಖಾದರ್ ಮತ್ತಿತರು ಉಪಸ್ಥಿತರಿದ್ದರು.

Write A Comment