(ಚಿತ್ರ,ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೇಸಿಗೆ ರಜಾ ಸಮಯವಾದ ಕಾರಣ ಮನೆ ಸಮೀಪದ ತೋಟದಲ್ಲಿರುವ ಕೆರೆ ಹತ್ತಿರ ಆಟವಾಡುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಕೆರೆಗೆ ಬಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲು ಹೋದ ತಂದೆಯ ಸಮೇತ ಸಹೋದರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಉಳ್ಳೂರು-74 ಗ್ರಾಮದ ಐರಬೈಲು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಐರಬೈಲು ನಿವಾಸಿ ರಾಘವೇಂದ್ರ ಕಿಣಿ (35) ಹಾಗೂ ಇವರ ಪುತ್ರರಾದ ಪ್ರಕಾಶ್ (13) ಹಾಗೂ ಯೋಗೀಶ್ (12) ಮೃತ ದುರ್ದೈವಿಗಳು.

ಘಟನೆ ವಿವರ: ಉಳ್ಳೂರು-74 ಗ್ರಾಮದ ಐರಬೈಲು ನಿವಾಸಿಗಳಾದ ರಾಘವೇಂದ್ರ ಕಿಣಿ ತನ್ನ ಪತ್ನಿ, ಅಜ್ಜ, ಸೋದರಮಾವ ಹಾಗೂ ಕುಟುಂಬದ ಜೊತೆ ವಾಸವಿದ್ದು ಕೃಷಿಕಾರ್ಯದ ಜೊತೆಗೆ ಅಡುಗೆ ವ್ರತ್ತಿಯನ್ನು ಮಾಡಿಕೊಂಡಿದ್ದರು. ರಾಘವೇಂದ್ರ ಕಿಣಿ ದಂಪತಿಗಳಿಗೆ ಪ್ರಕಾಶ್ ಹಾಗೂ ಯೋಗೀಶ್ ಎನ್ನುವ ಪುತ್ರರಿದ್ದು ಇಬ್ಬರು ಉಳ್ಳೂರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಬೇಸಿಗೆ ರಜೆಯ ಕಾರಣ ಪ್ರಕಾಶ್ ಹಾಗೂ ಯೋಗೀಶ್ ಇಬ್ಬರು ಇನ್ನಿತರ ಸ್ನೇಹಿತರೊಡನೆ ಆಟವಾಡುತ್ತಾ ಕೆರೆ ಸಮೀಪ ಬಂದಿದ್ದಾರೆ. ಅಲ್ಲಿಯೇ ಹತ್ತಿರದಲ್ಲಿದ್ದ ದಪ್ಪನೆಯ ಮರದ ತುಂಡೊಂದರ ಮೇಲೆ ನಡೆಯುವಾಗ ಆಯತಪ್ಪಿ ಪ್ರಕಾಶ ನೀರಿನಲ್ಲಿ ಮುಳುಗುತ್ತಾನೆ. ಪ್ರಕಾಶನನ್ನು ಕಾಪಾಡಲು ಯೋಗೀಶ್ ಕೂಡ ನೀರಿಗಿಳಿಯುತ್ತಾನೆ. ಆದರೇ ಇಬ್ಬರು ನೀರಿನಲ್ಲಿ ಮುಳುಗುವುದನ್ನು ಕಂಡು ಇನ್ನೋರ್ವ ಬಾಲಕ ಚೀರಾಡುತ್ತಾನೆ. ಮಕ್ಕಳ ಚೀರಾಟ ಕೇಳಿದ ಕೆರೆಯ ಅನತಿ ದೂರದ ಮನೆಯಲ್ಲಿದ್ದ ರಾಘವೇಂದ್ರ ಕಿಣಿ ಕೆರೆಯತ್ತ ದೌಡಾಯಿಸಿ ಕೆರೆಗೆ ಹಾರಿ ಮಕ್ಕಳ ರಕ್ಷಣೆಗೆ ಮುಂದಾಗುತ್ತಾರೆ. ಆದರೇ ನೀರಿನ ಆಳ ಜಾಸ್ಥಿಯಿದ್ದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ.
ಕೆಸರು ತುಂಬಿತ್ತು:
ಅಡಿಕೆ ತೋಟದಲ್ಲಿದ್ದ ಈ ಕೆರೆ ತೆರೆದ ರೀತಿಯಲ್ಲಿದ್ದು ಯಾವುದೇ ಆವರಣವಾಗಲೀ ಸುರಕ್ಷಾ ಬೇಲಿಯಾಗಲೀ ಇರಲಿಲ್ಲ. ಅಲ್ಲದೇ ಕೆರೆಯ ಕೆಸರು ತುಂಬಿದ್ದಲ್ಲದೇ ಆಳ ನೀರಿನಿಂದ ಕೂಡಿತ್ತು ಎಂದು ಸ್ಥಳೀಯರು ವಿವರಿಸಿದ್ದಾರೆ. ಕೆರೆಯಲ್ಲಿದ್ದ ನೀರು ಹಾಗೂ ಕೆಸರು ಜಾಸ್ಥಿಯಿದ್ದ ಪರಿಣಾಮ ಈ ದುರ್ಘಟನೆ ಕಾರಣವಾಗಿದೆ ಎನ್ನಲಾಗಿದೆ.
ಇನ್ನು ಮೃತ ರಾಘವೇಂದ್ರ ಕಿಣಿ ಈ ಪರಿಸರದಲ್ಲಿ ಸಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಕೃಷಿ ಕಾರ್ಯ ಮಾಡುತ್ತಿದ್ದರು ಅಲ್ಲದೇ ಅಡುವೆ ವ್ರತ್ತಿಯಲ್ಲಿ ಮನೆಮಾತಾಗಿದ್ದರು. ಪ್ರಕಾಶ್ 7 ನೇ ತರಗತಿ ಹಾಗೂ ಯೋಗೀಶ್ 6 ನೇ ತರಗತಿಯಲ್ಲಿ ಓದುತ್ತಿದ್ದು ಕಲಿಯುವಿಕೆಯಲ್ಲಿ ಹಾಗೂ ಕ್ರೀಡಾ ಚಟುವಟಿಕೆಯಲ್ಲಿಯೂ ಮುಂದಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ ಪಿ.ಎಂ., ಶಂಕರನಾರಾಯಣ ಠಾಣೆ ಎಸ್‌ಐ ಸುನೀಲ್ ಕುಮಾರ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಜಿ.ಪಂ. ಸದಸ್ಯ ತಾರಾನಾಥ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.
ಸದ್ಯ ಮ್ರತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.