ಕುಂದಾಪುರ: ಟ್ಯಾಂಕರ್ ಚಾಲಕನ ಅತೀ ವೇಗ ಹಾಗೂ ಅಜಾಗರುಕತೆಯ ಚಾಲನೆಯಿಂದಾಗಿ ಬೈಕ್ ಹಿಂಬದಿ ಸವಾರರಾಗಿದ್ದ ತಾಯಿ ಮಗಳು ಸಾವನ್ನಪ್ಪಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರದ ತ್ರಾಸಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬೈಂದೂರು ಸಮೀಪದ ಮಯ್ಯಾಡಿ ಸಂಪಿಗೆಕೊಡ್ಲು ಎಂಬಲ್ಲಿನ ನಿವಾಸಿ ಸರೋಜಾ ಗಾಣಿಗ(31) ಹಾಗೂ ಆಕೆ ಮಗಳು ನಿಶ್ಮೀತಾ(9) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಬೈಕ್ ಸವಾರ ಸರೋಜಾ ಅವರ ದೊಡ್ಡಪ್ಪನ ಮಗ(ಸಹೋದರ) ವಿಶ್ವನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ: ಸರೋಜಾ ಅವರ ಪುತ್ರಿ ನಿಶ್ಮಿತಾಳಿಗೆ ಅಸೌಕ್ಯವಿದ್ದ ಕಾರಣ ವೈದ್ಯರ ಬಳಿಗೆ ತೆರಳು ಬೈಂದೂರು ಸಮೀಪ ಬಸ್ಸಿಗಾಗಿ ಕಾಯುತ್ತಿದ್ದರು. ಇದೇ ಸಮಯ ಆ ಮಾರ್ಗದಲ್ಲಿ ಬೈಕಿನಲ್ಲಿ ಬಂದ ಆಕೆ ಸಹೋದರ ವಿಶ್ವನಾಥ ಬೈಕಿನಲ್ಲಿ ಕರೆದೊಯ್ಯುವುದಾಗಿ ತಿಳಿಸಿದ್ದು ಇಬ್ಬರು ಬೈಕನ್ನೇರುತ್ತಾರೆ. ತ್ರಾಸಿ ಸಮೀಪ ಬರುತ್ತಿರುವಾಗ ರಸ್ತೆ ಮೇಲೆ ನಿಂತಿದ್ದ ಬಸ್ಸಿನ ಬಲಭಾಗಕ್ಕೆ ಬೈಕ್ ಡಿಕ್ಕಿಯಾಗಿದ್ದು ಸರೋಜಾ ಹಾಗೂ ನಿಸ್ಮಿತಾ ರಸ್ತೆಗೆ ಉರುಳಿದ್ದಾರೆ. ಕುಂದಾಪುರದಿಂದ ಬೈಂದೂರಿನ ಕಡೆಗೆ ವೇಗವಾಗಿ ಸಾಗುತ್ತಿದ್ದ ಟ್ಯಾಂಕರ್ ಇಬ್ಬರ ಮೇಲೆ ಹರಿದುಹೋಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿಶ್ವಾನಾಥ್ ಅವರಿಗೂ ಗಾಯಗಳಾಗಿದೆ.
ಸರೋಜಾ ಅವರು ನಾಗೇಶ್ ಎನ್ನುವವರ ಪತ್ನಿಯಾಗಿದ್ದಾರೆ. ಇಬ್ಬರ ಸವಿನಿಂದಾಗಿ ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು.
ಘಟನಾ ಸ್ಥಳಕ್ಕೆ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್, ಗಂಗೊಳ್ಳಿ ಎಸ್.ಐ. ಸುಬ್ಬಣ್ಣ ಮೊದಲಾದವರು ಭೇಟಿ ನೀಡಿದ್ದಾರೆ.