ಕನ್ನಡ ವಾರ್ತೆಗಳು

ಚೆನ್ನೈ: ಸಮುದ್ರದ ನೀರನ್ನು ದಿನಬಳಕೆ ನೀರನ್ನಾಗಿ ಪರಿವರ್ತಿಸುವ ತಂತ್ರಾಂಶ

Pinterest LinkedIn Tumblr

see_water_drink

ಚನ್ನೈ, ಮೇ.06: ಇಡೀ ಭಾರತದ ಮೇಲೆ ಬರದ ಕಾರ್ಮೋಡ ಕವಿದಿದ್ದು, ನೀರಿಗೆ ಹಾಹಾಕಾರ ಉಂಟಾಗಿರುವ ಸಂದರ್ಭದಲ್ಲೇ ವಿಜ್ಞಾನಿಗಳು ಸಮುದ್ರದ ನೀರನ್ನು ದಿನಬಳಕೆ ನೀರನ್ನಾಗಿ ಪರಿವರ್ತಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ತಾವು ನೂತನ ನೀರು ಸಂಸ್ಕರಣಾ ಮಾದರಿಯೊಂದನ್ನು ತಯಾರಿಸಿದ್ದು, ಈ ಮಾದರಿಯಲ್ಲಿ ಪ್ರತಿನಿತ್ಯ 6.3 ಮಿಲಿಯನ್ ಲೀಟರ್ ಸಮುದ್ರದ ನೀರನ್ನು ದಿನಬಳಕೆ ನೀರನ್ನಾಗಿ ಪರಿವರ್ತಿಸುತ್ತೇವೆ ಎಂದು ತಮಿಳುನಾಡಿನ ಕಲ್ಪಕಂನಲ್ಲಿರುವ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ನ ವಿಜ್ಞಾನಿಗಳು ಸಾರಿದ್ದಾರೆ.

ಇದೇ ಮಾದರಿಯನ್ನು ಬಳಕೆ ಮಾಡಿ ಅಂತರ್ಜಲದಲ್ಲಿ ಮಿಶ್ರಣಗೊಂಡಿರುವ ಆರ್ಸಾನಿಕ್ ಮತ್ತು ಯುರೇನಿಯಂನ್ನು ಬೇರ್ಪಡಿಸಿ ಆ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಲು ಸಾಧ್ಯ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ರಿಸರ್ಚ್ ಸೆಂಟರ್ನಲ್ಲಿರುವ ನ್ಯೂಕ್ಲಿಯರ್ ರಿಯಾಕ್ಟರ್ ಮೂಲಕ ಸಮುದ್ರದ ನೀರನ್ನು ಶುದ್ಧೀಕರಿಸಬಹುದಾಗಿದ್ದು, ಪ್ರತಿನಿತ್ಯ 6.3 ಮಿಲಿಯನ್ ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ನಮ್ಮ ಕೇಂದ್ರ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಸಮುದ್ರದಿಂದ ಶುದ್ಧೀಕರಿಸಿದ ನೀರನ್ನು ವ್ಯಕ್ತಿಯೊಬ್ಬರು ಕುಡಿದಿದ್ದು, ಆ ನೀರು ಸ್ವಾಭಾವಿಕ ಕುಡಿಯುವ ನೀರಿನಂತಿದೆ ಎಂದು ತಿಳಿಸಿದ್ದಾರೆ. ಈ ರೀತಿ ಸಮುದ್ರದ ನೀರನ್ನು ದಿನಬಳಕೆ ನೀರನ್ನಾಗಿ ಪರಿವರ್ತಿಸುವ ಘಟಕಗಳನ್ನು ಈಗಾಗಲೇ ಪಂಜಾಬ್, ಪಶ್ಚಿಮಬಂಗಾಳ, ರಾಜಸ್ತಾನ್ಗಳಲ್ಲಿ ಅಳವಡಿಸಲಾಗಿದೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಎನ್.ವ್ಯಾಸ್ ಹೇಳಿದ್ದಾರೆ. ಅದೇ ರೀತಿ ನಮ್ಮ ವಿಜ್ಞಾನಿಗಳು ಕಡಿಮೆ ಬಂಡವಾಳ ಬಳಕೆ ಮಾಡಿ ಅಂತರ್ಜಲದಲ್ಲಿ ಮಿಶ್ರಣವಾಗಿರುವ ರಾಸಾನಿಕ ವಸ್ತುಗಳನ್ನು ಬೇರ್ಪಡಿಸುವ ತಂತ್ರಾಂಶವನ್ನು ಕಂಡುಹಿಡಿದಿದ್ದು, ಇದು ನಮ್ಮ ದೇಶದ ಜನತೆಗೆ ವರವಾಗಿ ಪರಿಣಮಿಸಲಿದೆ ಎಂದು ಅವರು ವಿವರಿಸಿದ್ದಾರೆ.

Write A Comment