ಕನ್ನಡ ವಾರ್ತೆಗಳು

ಕ್ವಾರೀ ನೀರಿದ್ದರೂ ಬಳಸಿಕೊಳ್ಳಲು ಆಗ್ತಿಲ್ಲ, ಸಂಬಂದಪಟ್ಟವರು ಸ್ಪಂಧಿಸುತ್ತಿಲ್ಲ, ಹಕ್ಲಾಡಿ ಜನರ ಬವಣೆಗೆ ಕೊನೆಯಿಲ್ಲ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಎಲ್ಲವೂ ಇದ್ದರೂ ಏನೂ ಇಲ್ಲ ಎಂಬ ಪರಿಸ್ಥಿತಿ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಜನರದ್ದು. ಬೇಸಿಗೆ ಬಂತೆಂದರೇ ಇಲ್ಲಿ ಕುಡಿಯುವ ನೀರಿಗೆ ಇಲ್ಲಿ ಹಾಹಾಕಾರ. ಹಕ್ಲಾಡಿ ಭಾಗದಲ್ಲಿ ಮೂರು ಕಲ್ಲುಕ್ವಾರಿಗಳಲ್ಲಿ ಯಥೇಚ್ಚ ನೀರಿದ್ದರೂ ಅದನ್ನು ಸದ್ಬಳಕೆ ಮಾಡುವಲ್ಲಿ ಗ್ರಾಮಪಂಚಾಯತ್ ನಿರ್ಲ್ಯಕ್ಷ ಧೋರಣೆ ಅನುಸರಿಸಿದ ಪರಿಣಾಮವೇ ಜನರ ಸಮಸ್ಯೆಗೆ ಕಾರಣವಾಗಿದೆ.

ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಜನರ ನೀರಿನ ಸಮಸ್ಯೆಗೆ ಇಲ್ಲಿನ ಪಂಚಾಯತ್ ಸಹಿತ ಸಂಬಂದಪಟ್ಟ ಎಲ್ಲಾ ಇಲಾಖೆಯ ನಿರ್ಲಕ್ಷ್ಯತನ ಕಾರಣ ಎಂದರೂ ತಪ್ಪಾಗಲಾರದು. ಇವರೆಲ್ಲರೂ ನಿಜವಾಗ್ಲೂ ಜನರ ಸಮಸ್ಯೆ ಬಗ್ಗೆ ಕಿಂಚಿತ್ ಯೋಚನೆ ಮಾಡಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡುವುದೇ ಆದರೇ ಹಕ್ಲಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮೂಲಗಳು ಹಲವಷ್ಟಿದೆ. ಆದರೇ ನಮ್ಮನ್ನಾಳುವ ರಾಜಕಾರಣಿಗಳ ಸಮೇತ ಸರಕಾರದ ಸಂಬಳ ಪಡೆಯುವ ಯಾರಿಗೂ ಇಲ್ಲಿನ ಜನರ ಬವಣೆ ಕಾಣುತ್ತಿಲ್ಲ.

Kndpr_Hakladi_Water Problem (7) Kndpr_Hakladi_Water Problem (11) Kndpr_Hakladi_Water Problem (5) Kndpr_Hakladi_Water Problem (3) Kndpr_Hakladi_Water Problem (2) Kndpr_Hakladi_Water Problem (8) Kndpr_Hakladi_Water Problem (6) Kndpr_Hakladi_Water Problem (4) Kndpr_Hakladi_Water Problem (9) Kndpr_Hakladi_Water Problem (10)

ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಳೂರು ಎಂಬಲ್ಲಿ ಒಂದು ಹಾಗೂ ಬಗ್ವಾಡಿ ಗ್ರಾಮದಲ್ಲಿ ಎರಡು ಶಿಲೆಗಲ್ಲು ಕ್ವಾರಿಗಳಲ್ಲಿ ಯಥೇಚ್ಚ ನೀರಿದ್ದರೂ ಅದರ ಬಳಕೆ ಆಗುತ್ತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಅನುಭವಿಸುವ ಸ್ಥಿತಿ ದೇವರಿಗೆ ತ್ರೀತಿ. ಕಳೆದ ಒಂದೆರಡು ವರ್ಷಗಳಿಂದ ಬಗ್ವಾಡಿ ಸಮೀಪದ ಕ್ವಾರೀ ನೀರನ್ನು ಬಟ್ಟೆಕುದ್ರು, ಯಳೂರು, ತೊಪ್ಲು ಪ್ರದೇಶಕ್ಕೆ ನೀಡಿದ್ರು. ಈ ಭಾಗದ ಎಲ್ಲಾ ಜನರು ಕೂಡ ಈ ನೀರನ್ನು ಕುಡಿಯುವುದಕ್ಕೆ ಬಳಸಿದರು. ಆದರೇ ಕೊನೆ ಕ್ಷಣದಲ್ಲಿ ನೀರು ಬಳಸಬಾರದೆಂದು ಜಿಲ್ಲಾಪಂಚಾಯತ್ ಅಂದಿನ ಇಂಜಿಯರ್ ತಾಕೀತು ಮಾಡಿದ ಕಾರಣ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಆದರೇ ಇದೇ ನೀರನ್ನು ಮೆಚ್ಚಿದ ಜನರು ಬೇರೆಡೆಯಿಂದ ಟ್ಯಾಂಕರ್ ಮೂಲಕ ಪೂರೈಸಿದ ನೀರನ್ನು ಮೆಚ್ಚದೇ ಇದೇ ಕ್ವಾರಿಯ ನೀರನ್ನು ಪಡೆಯಲು ಹಾತೊರೆದಿದ್ದರು.

ಬಗ್ವಾಡಿ ಹಾಗೂ ಕೊಳೂರು ವ್ಯಾಪ್ತಿಯಲ್ಲಿ ಹತ್ತಾರು ಎಕ್ರೆಗೂ ಅಧಿಕ ಕಲ್ಲುಕ್ವಾರೀ ಪ್ರದೇಶದಲ್ಲಿ ಊಹಿಸಲು ಆಗದಷ್ಟು ನೀರಿದೆ. ಅಲ್ಲದೇ ಕಲ್ಲಿನ ಬದುಗಳಲ್ಲಿ ಚಿಮ್ಮುವ ನೀರು ಇಲ್ಲಿರುವ ನೀರಿನ ಒರತೆಯನ್ನು ತೋರಿಸುತ್ತದೆ. ಆದರೇ ಯಾರೂ ಕೂಡ ಕುಡಿಯಲು ನೀರು ಉಪಯೋಗಿಸದೇ ಇರುವ ಕಾರಣ ಸದ್ಯ ಬಟ್ಟೆ ಶುಚಿಗೊಳಿಸಲು, ಪ್ರಾಣಿ ಹಾಗೂ ವಾಹನಗಳನ್ನು ತೊಳೆಯಲು ನೀರು ಬಳಕೆ ಮಾಡಲಾಗುತ್ತಿದೆ.

Kndpr_Hakladi_Water Problem (12) Kndpr_Hakladi_Water Problem (1) Kndpr_Hakladi_Water Problem (13)

ಬಗ್ವಾಡಿ ಭಾಗದ ಕಲ್ಲು ಕ್ವಾರಿ ನೀರನ್ನು ಕೆಲವು ಕಾರಣವನ್ನಿಟ್ಟು ಅದನ್ನು ಬಳಕೆ ಮಾಡಬಾರದೆಂದು ಹೇಳಿದ ಬಳಿಕ ಅಂದಿನ ಹಕ್ಲಾಡಿ ಪಂಚಾಯತ್ ಸಂಬಂದಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಿ 25 ಲಕ್ಷಗಳ ಕ್ರಿಯಾಯೋಜನೆ ಸಿದ್ದಪಡಿಸಿ ಮೈಸೂರಿಗೆ ಕಳುಹಿಸಿದ್ದರು. ನೀರಿನ ಫ್ಲಾಂಟೇಶನ್, ಶುದ್ದೀಕರಣ ಯಂತ್ರ, ಟ್ಯಾಂಕ್ ಮತ್ತು ಅದಕ್ಕೆ ನೀರನ್ನು ಸರಬರಾಜು ಮಾಡಲು ಪೈಪ್ ಲೈನ್ ವ್ಯವಸ್ಥೆಗಾಗಿ ಕ್ರಿಯಾಯೋಜನೆ ಕಳುಹಿಸಿದ್ದರೂ ಈವರೆಗೂ ಯಾವುದೇ ಉತ್ತರವೂ ಸಿಕ್ಕಿಲ್ಲ. ಇದಲ್ಲದೇ ಕಳೆದ ವರ್ಷ ನೀರಲ್ಲಿ ಬ್ಯಾಕ್ಟೀರಿಯಾ ಇರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಉತ್ತರ ಮೈಸೂರು ಲ್ಯಾಬಿನಿಂದ ಬಂದಿತ್ತು, ಆದರೇ ಕುಡಿಯಲು ಯೋಗ್ಯ ಎನ್ನುವ ಪ್ರಮಾಣೀಕರಣ ಮಣಿಪಾಲದ ಲ್ಯಾಬಿನಲ್ಲಿ ಬಂದಿತ್ತು. ಇವೆಲ್ಲಾ ಅಸ್ಪಷ್ಟ ಉತ್ತರಗಳ ಪರಿಣಾಮ ಈ ಕ್ವಾರೀ ನೀರನ್ನು ಈ ಬಾರಿ ಕುಡಿಯಲು ಉಪಯೋಗಿಸುತ್ತಿಲ್ಲ. ಕೇವಲ ಬಟ್ಟೆ ತೊಳೆಯಲು ಪ್ರಾಣಿಗಳನ್ನು ಶುಚಿಗೊಳಿಸಲು ಮಾತ್ರ ಈ ನೀರು ಬಳಕೆಯಾಗುತ್ತಿದೆ.

ಮೀನುಗಳಿರುವ ಈ ಕ್ವಾರಿಗಳ ನೀರು ನೋಡಲು ಶುದ್ಧವಿರುವಂತೆ ಕಾಣುತ್ತಿದ್ದು ನೀರನ್ನು ಸುವ್ಯವಸ್ಥಿತವಾಗಿ ಇನ್ನಷ್ಟು ಶುದ್ಧೀಕರಿಸಿ ಅದನ್ನು ಕುಡಿಯಲು ಯೋಗ್ಯವನ್ನಾಗಿಸುವ ಮೂಲಕ ಬ್ರಹತ್ ಟ್ಯಾಂಕಿಗೆ ಹಾಯಿಸಿದಲ್ಲಿ ಸಂಪೂರ್ಣ ಹಕ್ಲಾಡಿ ಗ್ರಾಮದ ಜನರ ನೀರಿನ ಬವಣೆಗೆ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಈ ಭಾಗದ ಪಂಚಾಯತ್ ಸದಸ್ಯರು ಹೇಳುವ ಮಾತುಗಳು.

ಆದರೇ ನಮ್ಮನ್ನಾಳುವ ಮಂದಿ ಇಚ್ಚಾಶಕ್ತಿ ವಹಿಸಿ ಕೆಲಸ ಮಾಡಿದ್ರೇ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಇಲ್ಲದಿದ್ರೇ ನೀರಿದ್ರೂ ಕೂಡ ಕುಡಿಯಲಾಗದೇ ಎಲ್ಲಿಂದಲೋ ತರಲಾಗುವ ಟ್ಯಾಂಕರ್ ನೀರೇ ಗತಿ.

Write A Comment