ಕನ್ನಡ ವಾರ್ತೆಗಳು

ದ.ಕ.ಜಿಲ್ಲೆಯಲ್ಲಿ ತಾರಕಕ್ಕೇರಿದ ನೀರಿನ ಸಮಸೈ : ಮನೆಗೆ ಮರಳುತ್ತಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳು

Pinterest LinkedIn Tumblr

Netravati_No_water_2

ಮಂಗಳೂರು: ಕಡಲ ತಡಿಯ ನಗರವೆಂದೇ ಕರೆಯಲಾಗುವ ಮಂಗಳೂರಿನಲ್ಲಿ ನೀರಿನ ಸಮಸ್ಯೆ ತಾರಕಕ್ಕೇರುತ್ತಿದ್ದು, ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ನೀರಿನ ಮಟ್ಟ 5.9 ಅಡಿಗೆ ಇಳಿದಿದ್ದು, ನೀರಿನ ಹಾಹಾಕಾರ ಎದ್ದಿದೆ. ನಗರದ ಪ್ರಮುಖ ವಿದ್ಯಾ ಸಂಸ್ಥೆಗಳಿಂದ ನಡೆಸಲ್ಪಡುವ ಹಾಸ್ಟೆಲ್‌ಗಳಿಂದ ವಿದ್ಯಾರ್ಥಿಗಳಿಗೆ ರಜೆ ನೀಡಿ ಅವರ ಮನೆಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಂಬೆ ಅಣೆಕಟ್ಟಿನಲ್ಲಿ 5.8 ಅಡಿಗಳಷ್ಟು ಮಾತ್ರವೇ ನೀರಿದೆ. ಸುಮಾರು 3.5 ಅಡಿಗಳವರೆಗೆ ಮಾತ್ರವೇ ನೀರನ್ನು ಎತ್ತಬಹುದಾಗಿದೆ. ಪ್ರಸ್ತುತ ಇರುವ ನೀರು ನಗರಕ್ಕೆ ಸುಮಾರು ನಾಲ್ಕೈದು ದಿನಗಳಿಗೆ ಮಾತ್ರ ಸರಬರಾಜು ಮಾಡಬಹುದು.

ನಗರದ ಬಹುತೇಕ ಕಾಲೇಜು ಹಾಸ್ಟೆಲ್‌ಗಳು ತುಂಬೆ ಅಣೆಕಟ್ಟಿನಿಂದ ಸರಬರಾಜಾಗುವ ನೀರನ್ನೇ ಅವಲಂಬಿಸಿವೆ. ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸುಮಾರು ಎರಡು ವಾರಗಳಿಂದ ಎರಡು ದಿನಗಳಿಗೊಮ್ಮೆ ಕೆಲ ಗಂಟೆಗಳ ಕಾಲ ಮಾತ್ರವೇ ನೀರು ಸರಬರಾಜಾಗುತ್ತಿದೆ. ಬಳಿಕ ಕಳೆದ ಒಂದು ವಾರದಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು.

Netravati_No_water_1

ಏಕಕಾಲದಲ್ಲಿ ಎಲ್ಲಾ ಕಡೆಗಳಿಗೂ ನೀರು ಪೂರೈಕೆಯಾಗುವುದರಿಂದ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಯುವುದರಿಂದ ಬೃಹತ್ ನೀರಿನ ಟ್ಯಾಂಕ್‌ಗಳು, ಸಂಪುಗಳು ತುಂಬಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಂಬಂಧಪಟ್ಟ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ರಜೆ ನೀಡಿ ಮನೆಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸ್ಟೆಲ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು ದುಸ್ಥರ ಮಾತ್ರವಲ್ಲ, ಅದರಿಂದ ಅಲರ್ಜಿಯಾಗುವ ಸಾಧ್ಯತೆಗಳೂ ಇರುವುದರಿಂದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಸಂಬಂಧಪಟ್ಟ ಸಂಸ್ಥೆಗಳು ನಿರ್ಧರಿಸಿವೆ

ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡಿ ತವರಿಗೆ ಹೊರಟಿದ್ದಾರೆ. ನಗರದ ಪ್ರಮುಖ ಮೆಡಿಕಲ್ ಕಾಲೇಜುಗಳಾದ ಕೆಎಂಸಿ, ಫಾದರ್ ಮುಲ್ಲರ್ಸ್ ಆಸ್ಪತ್ರೆಗಳಿಗೆ ಸೇರಿದ ಹಾಸ್ಟೆಲ್‌‌ಗಳಲ್ಲಿನ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಕೆಎಂಸಿಗೆ ಸೇರಿದ 7 ಹಾಸ್ಟೆಲ್‌ಗಳಲ್ಲಿ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಷ್ಟಸಾಧ್ಯವಾಗಿರುವುದರಿಂದ ತಾತ್ಕಾಲಿಕವಾಗಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಕೆಎಂಸಿ ಕಾಲೇಜಿನ ಎಂಬಿಬಿಎಸ್ ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ 400 ಮಂದಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಂದ ಮೇ 15ರವರೆಗೆ ರಜೆ ನೀಡಿ ಕಳುಹಿಸಲಾಗಿದೆ.

ಕೆಎಂಸಿ ಇಂತಹದ್ದೊಂದು ನಿರ್ಧಾರ ಕೈಗೊಂಡ ಬಳಿಕ ಫಾದರ್ ಮುಲ್ಲರ್ಸ್ ಕೂಡಾ ನೀರಿನ ಅಭಾವವನ್ನು ಸರಿದೂಗಿಸಲು ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ರಜೆ ನೀಡಿದೆ. ಫಾದರ್ ಮುಲ್ಲರ್ ಮೆಡಿಕೆಲ್ ಕಾಲೇಜು ಹಾಸ್ಟೆಲ್‌ಗಳಲ್ಲಿರುವ ಸುಮಾರು ಶೇ. 75ರಷ್ಟು ವಿದ್ಯಾರ್ಥಿಗಳು ಈಗಾಗಲೇ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ 8 ಹಾಸ್ಟೆಲ್‌ಗಳಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ವಿಭಾಗದ ಸುಮಾರು 2500ರಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಶೇ. 75ರಷ್ಟು ವಿದ್ಯಾರ್ಥಿಗಳನ್ನು ಈಗಾಗಲೇ ಮನೆಗೆ ಕಳುಹಿಸಲಾಗಿದೆ.

ತುಂಬೆ ಅಣೆಕಟ್ಟಿನಲ್ಲಿ ನೀರು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ಕಡಬ ಹೋಬಳಿಯ ಕೋಲಿಯಾಡ ಕಟ್ಟ ಎಂಬಲ್ಲಿನ ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ನೀರು ಹರಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ. ಅದರ ಪ್ರಕಾರ ಸೋಮವಾರ ಸಂಜೆಯಿಂದಲೇ ಪಾಲಿಕೆಯ ಸುಮಾರು 40ರಷ್ಟು ಸಿಬ್ಬಂದಿಗಳು ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿನುದ್ದಕ್ಕೂ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಇದೇ ವೇಳೆ, ಎಂಆರ್‌ಪಿಎಲ್ ಅಣೆಕಟ್ಟಿನಿಂದ ನೀರು ಬಿಡಲಾಗಿದ್ದು, ಸ್ವಲ್ಪ ಪ್ರಮಾಣದ ನೀರು ಇದೀಗ ಎಎಂಆರ್ ಡ್ಯಾಂನಲ್ಲಿ ಸಂಗ್ರಹವಾಗಿದೆ. ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ಬಿಡಲಾಗುವ ನೀರು ಕುಮಾರಧಾನ ನದಿ ಮೂಲಕ ಉಪ್ಪಿನಂಗಡಿ ನೀರು ಸರಬರಾಜು ಅಣೆಕಟ್ಟು ಅಲ್ಲಿಂದ ಎಆರ್‌ಪಿಎಲ್ ಅಣೆಕಟ್ಟು ದಾಟಿ ಎಎಂಆರ್ ಅಣೆಕಟ್ಟಿಗೆ ತಲುಪಿ ಬಳಿಕ ತುಂಬೆ ಡ್ಯಾಂಗೆ ಹರಿಯಬೇಕಿದೆ.

ಸುಮಾರು 72 ಕಿ.ಮೀ.ನಷ್ಟು ದೂರದಿಂದ ನೀರು ತಲುಪಲು ಕನಿಷ್ಠ ಎರಡು ಮೂರು ದಿನಗಳಾದರೂ ಬೇಕು. ಅದೂ ನೀರಿನ ಹರಿವು ಕ್ಷಿಣವಾಗಿದ್ದಲ್ಲಿ ಅಷ್ಟು ದೂರದಿಂದ ತುಂಬೆ ಅಣೆಕಟ್ಟಿನವರೆಗೆ ತಲುಪಬಹುದೇ ಎಂಬ ಅನುಮಾನವೂ ಇದೆ. ಒಟ್ಟಿನಲ್ಲಿ ನೀರಿಗಾಗಿ ಕೊನೆಯ ಕ್ಷಣದಲ್ಲಿ ಎಚ್ಚೆತ್ತ ಅಧಿಕಾರಿಗಳ ನಿರ್ಧಾರದಿಂದ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆಯೇ ಎಂಬುದು ಈಗಿರುವ ಪ್ರಶ್ನೆ.

ಈ ನಡುವೆ ಮಳೆಯೊಂದೇ ನೀರಿನ ಸಮಸ್ಯೆಗೆ ಪರಿಹಾರವಾಗಿದ್ದು, ಸರ್ವ ಧರ್ಮದವರು ಮಳೆಗಾಗಿ ದೇವರಿಗೆ ಮೊರೆ ಇಡುವ ಕಾರ್ಯ ಎಲ್ಲೆಡೆಯಲ್ಲೂ ಆರಂಭಗೊಂಡಿದೆ.

Write A Comment