ಕನ್ನಡ ವಾರ್ತೆಗಳು

ಎತ್ತಿನಹೊಳೆ ವಿರುದ್ಧ ನಡೆಯಲಿರುವ ದ.ಕ. ಜಿಲ್ಲಾ ಬಂದ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ಬೆಂಬಲ

Pinterest LinkedIn Tumblr

nalin_kumar_kateel_1

ಪುತ್ತೂರು, ಮೇ 1: ಕರಾವಳಿಯ ಜನತೆಗೆ ಮಾರಾಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ಮೇ 16 ರಂದು ನಡೆಯುವ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಮೇ 19 ರಂದು ನಡೆಯುವ ಸ್ವಯಂ ಘೋಷಿತ ದ.ಕ. ಜಿಲ್ಲಾ ಬಂದ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಯಾವುದೇ ಹಾನಿಯಿಲ್ಲ ಎಂದು ವಾದಿಸುವವರು ಎತ್ತಿನಹೊಳೆ ಯೋಜನೆಯು ದ.ಕ. ಜಿಲ್ಲೆಯ ಜಲಸಂಪತ್ತಿಗೆ ಹಾನಿ ಮಾಡಲಿದೆ ಎಂಬ ಸತ್ಯವನ್ನು ಅರಿತುಕೊಂಡು ಆತ್ಮಸಾಕ್ಷಿಗೆ ಸರಿಯಾಗಿ ವರ್ತಿಸಬೇಕು. ಜಿಲ್ಲೆಯಲ್ಲಿ ತಲೆದೋರಿರುವ ನೀರಿನ ಬರ ಪರಿಸ್ಥಿತಿಗೂ, ಎತ್ತಿನಹೊಳೆ ಯೋಜನೆಗೂ ಸಂಬಂಧವಿಲ್ಲ ಎಂದು ವಾದಿಸುವ ಜನಪ್ರತಿನಿಧಿಗಳು ಅಂಕಿ ಅಂಶ ಸಹಿತ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಲಿ. ಪತ್ರಿಕಾ ಹೇಳಿಕೆ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳುವ ಹೇಡಿತನವನ್ನು ಪ್ರದರ್ಶಿಸುವುದು ಬೇಡ ಎಂದು ಟೀಕಿಸಿದರು.

ಸುಳ್ಯದಿಂದ ಮಂಗಳೂರುತನಕ ನೀರಿನ ಕುರಿತಂತೆ ನೇತ್ರಾವತಿ ನದಿಯ ನೇರ ಸಂಬಂಧವಿದೆ. ರೈತರಿಗೆ, ಹೈನುಗಾರರಿಗೆ ಮತ್ತು ಜಿಲ್ಲೆಯ ಜನರಿಗೆ ನೇತ್ರಾವತಿ ಜೀವನದಿಯಾಗಿದೆ. ನೇತ್ರಾವತಿ ಬರಿದಾದರೆ ಜಿಲ್ಲೆಯ ಜನ ಗುಳೆ ಹೋಗುವ ಪರಿಸ್ಥಿತಿ ಬರಬಹುದು. ಜಿಲ್ಲೆಗೆ ಉಂಟಾಗುವ ಹಾನಿಯ ಕುರಿತು ಪಾರದರ್ಶಕ ಚರ್ಚೆ ನಡೆಸಲು ರಾಜ್ಯ ಸರಕಾರವಾಗಲೀ ಮುಖ್ಯಮಂತ್ರಿಗಳಾಗಲೀ ಸಿದ್ಧರಿಲ್ಲ. ತೋರಿಕೆಗೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸಂಸದರ ಜೊತೆ ಬಿಜೆಪಿಯ ಪ್ರಮುಖರಾದ ಸಂಜೀವ ಮಠಂದೂರು, ರಾಧಾಕೃಷ್ಣ ಆಳ್ವ, ಡಿ.ಶಂಭು ಭಟ್, ಗೋಪಾಲಕೃಷ್ಣ ಹೇರಳೆ ಮತ್ತಿತ್ತರರು ಜತೆಗಿದ್ದರು.

Write A Comment