ಮಂಗಳೂರು, ಮೇ 1: ಕರಾವಳಿ ಪ್ರದೇಶದಲ್ಲಿ ನೀರು ದಾರಾಳವಾಗಿ ಸಿಗುವುದರಿಂದ ಹೆಚ್ಚಿನವರಿಗೆ ನೀರಿನ ಮಹತ್ವದ ಬಗ್ಗೆ ತಿಳಿದಿರುವುದಿಲ್ಲ “ಸಮುದ್ರದಲ್ಲಿ ಅಂಗಸ್ನಾನ (ವುಝೂ) ಮಾಡುವಾಗಲೂ ನೀರನ್ನು ವ್ಯರ್ಥ ಮಾಡಬಾರದು” ಎಂಬ ಪ್ರವಾದಿ ನುಡಿಯಿದೆ. ಆದ್ದರಿಂದ ನೀರಿನ ಮಹತ್ವವನ್ನು ಅರಿತು ಅದರ ವ್ಯರ್ಥ ಬಳಕೆ ಮಾಡದಂತೆ ನಂದಾವರ ಸಲಫಿ ಮಸೀದಿಯ ಖತೀಮ್ ಅಹ್ಮದ್ ಅಲಿ ಖಾಸಿಮಿ ಅವರು ಮನವಿ ಮಾಡಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಮಳೆ ಬಾರದೇ ಕುಡಿಯುವ ನೀರಿಗೂ ತತ್ತರ ಉಂಟಾಗಿದೆ. ಬಾವಿಗಳೆಲ್ಲಾ ಬತ್ತಿ ಹೋಗುತ್ತಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ನಲ್ಲೂ ನೀರು ಬತ್ತಿಹೋಗಿದ್ದು, ಇನ್ನೂ ಎರಡು ಮೂರು ದಿನಗಳಲ್ಲಿ ಮಳೆ ಬಾರದೇ ಹೋದರೆ ಇಡೀ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣಗೊಂಡು ನಾಗರೀಕರು ಪರಿತಪಿಸುವಂತಾಗಿದೆ.
ಮೊದಲೇ ಸುಡು ಬಿಸಿಲಿನ ತಾಪಕ್ಕೆ ಬೆಂದು ಹೋಗುತ್ತಿರುವ ಜನರು ಇದೀಗ ಮಳೆಯಿಲ್ಲದೇ ಒಂದು ಹನಿ ನೀರಿಗೂ ಸಂಕಷ್ಟ ಪಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಎಲ್ಲಾ ಸಮಸೈಗೆ ಮಳೆಯೊಂದೇ ಪರಿಹಾರವಾಗಿದ್ದು, ಜಿಲ್ಲೆಯ ಜೀವನದಿಗಳು ಮತ್ತೊಮ್ಮೆ ಮೈದುಂಬಿ ಜನರು ನೀರಿನ ಸಮಸೈಯಿಂದ ಮುಕ್ತಿ ಪಡೆಯಲು ಮಳೆ ಅಗತ್ಯವಾಗಿ ಬರಬೇಕಾಗಿರುವ ಹಿನ್ನೆಲೆಯಲ್ಲಿ…..
ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ (ಎಸ್ ಕೆ ಎಸ್ ಎಂ) ಕೇಂದ್ರೀಯ ಸಮಿತಿ ಅಹ್ಮದ್ ಅಲಿ ಖಾಸಿಮಿಯವರ ನೇತೃತ್ವದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಳೆಗಾಗಿ ವಿಶೇಷ ನಮಾಝ್ ಮತ್ತು ಪ್ರಾರ್ಥನೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಜನರು ನೀರಿನ ಮಹತ್ವವನ್ನು ಅರಿತುಕೊಂಡು ನೀರನ್ನು ಪೋಲು ಮಾಡದೇ ಸಂರಕ್ಷಿಸಬೇಕು. ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಅಹ್ಮದ್ ಅಲಿ ಖಾಸಿಮಿ ಕರೆ ಕೊಟ್ಟರು.
ಎಸ್ ಕೆ ಎಸ್ ಎಂ ನ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್, ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಹಾಗೂ ಎಸ್ ಕೆ ಎಸ್ ಎಂ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಪುರುಷರ ಸಹಿತ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ನಮಾಝ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಂ.ಜಿ. ಮುಹಮ್ಮದ್, ಅಬ್ಬಾಸ್ ಅಹ್ಮದ್ , ಮುಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.