ಕನ್ನಡ ವಾರ್ತೆಗಳು

ಹಲ್ಲೆಗೊಳಗಾದ ಯುವಕ ಸಾವು :ಉಳ್ಳಾಲ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು – ಹೆದ್ದಾರಿಗಳಲ್ಲಿ ವಾಹನ ತಪಾಸಣೆ

Pinterest LinkedIn Tumblr

Ullala_police_cheq

ಮಂಗಳೂರು / ಉಳ್ಳಾಲ, ಎಪ್ರಿಲ್.30 :ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಕಳೆದ ಎಪ್ರಿಲ್ 26ರ ಮುಂಜಾನೆ ವೇಳೆ ದುಷ್ಮರ್ಮಿಗಳ ತಂಡವೊಂದರಿಂದ ತಲವಾರಿನಿಂದ ಬರ್ಬರ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಫ್ವನ್ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯಾಹ್ನ ಮೃತ ಪಟ್ಟ ಹಿನ್ನೆಲೆಯಲ್ಲಿ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಉಳ್ಳಾಲದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತು ಕೈಗೊಳ್ಳಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು, ಚೆಂಬುಗುಡ್ಡೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಮಂಗಳೂರು – ಕೇರಳ ರಾಷ್ಟ್ರೀಯ ಹೆದ್ದಾರಿ, ಉಳ್ಳಾಲ, ತೊಕ್ಕೊಟ್ಟು, ಚೆಂಬುಗುಡ್ಡೆ, ದೇರಳಕಟ್ಟೆ, ತಲಪಾಡಿ, ಸೋಮೇಶ್ವರ, ಕೊಣಾಜೆ ಪರಿಸರಗಳಲ್ಲಿ ಸಾಗುವ ಎಲ್ಲಾ ವಾಹನಗಳ ತಪಾಸಣೆಯಲ್ಲಿ ಪೊಲೀಸರು ತೊಡಗಿದ್ದಾರೆ. ಯಾವೂದೇ ವ್ಯಕ್ತಿಯು ಸಂಶಯಾತ್ಮಕವಾಗಿ ಕಂಡು ಬಂದರೆ ಅವರನ್ನು ಪೊಲೀಸ್ ವಿಚಾರಣೆಗೊಳಪಡಿಸಲಾಗುವುದು. ಈಗಾಗಲೇ ಉಳ್ಳಾಲ ಪರಿಸರ ಹಾಗೂ ಮಂಗಳೂರಿನ ಕೆಲವೆಡೆ ಸೆಕ್ಷನ್ 144ರನ್ವಯ ನಿಶೇಧಾಜ್ಜೆ ಇರುವುದರಿಂದ ಅಂಗಡಿ -ಮುಂಗಟ್ಟುಗಳನ್ನು ಬೇಗ ಬಂದ್ ಮಾಡುವಂತೆ ಹಾಗೂ ಸಾರ್ವಜನಿಕರು ರಾತ್ರಿ ಹೊತ್ತು ಹೆಚ್ಚು ಓಡಾಡದಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

Ullala_attack_paswan

ತೊಕ್ಕೊಟ್ಟು ಪಿಲಾರ್ ನಿವಾಸಿ ಸಫ್ವನ್(20)ಮೃತ ಯುವಕ.ಸೋಮವಾರ ತಡರಾತ್ರಿ 12.55ರ ಸುಮಾರಿಗೆ ಚೆಂಬುಗುಡ್ಡೆ ಮತ್ತು ಪಿಲಾರು ನಿವಾಸಿಗಳಾದ ಸಫ್ವನ್ ನಿಝಾಮ್(21),ಮಹಮ್ಮದ್ ಸಲೀಂ(25)ಎಂಬ ಮೂವರು ಯುವಕರು ರಾಣಿಪುರ ಮದಕದಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸ ಮುಗಿಸಿ ತೊಕ್ಕೊಟ್ಟಿನ ಚರ್ಚ್‌ರೋಡಿನಲ್ಲಿರುವ ಕ್ಯಾಟರಿಂಗ್ ಕಛೇರಿಗೆ ಸಾಮಾಗ್ರಿಗಳನ್ನು ಇಟ್ಟು ಮನೆ ಕಡೆ ಹಿಂದಿರುಗುವಾಗ ತೊಕ್ಕೊಟ್ಟು ಓವರ್ ಬ್ರಿಡ್ಜ್ ರಕ್ಷಾ ಕ್ಲಿನಿಕ್ ಬಳಿ ಹೊಂಚು ಹಾಕಿ ಕುಳಿತಿದ್ದ ಐವರು ದುಷ್ಕರ್ಮಿಗಳು ಮೂವರ ಮೇಲೆ ಎರಗಿದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಬೈಕನ್ನು ಕೆಳಗೆ ಹಾಕಿ ಪ್ರಾಣ ರಕ್ಷಿಸಲು ಓಟಕ್ಕಿತ್ತಿದ್ದಾನೆ.

ಇತ್ತ ಕೆಳಗೆ ಬಿದ್ದ ಸಲೀಂನ ಮೊನಕಾಲಿಗೆ ಗಾಯವಾದರೂ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರೆ,ಸಫ್ವನ್ ಅವರನ್ನು ದುಷ್ಕರ್ಮಿಗಳು ತಲವಾರಿನಿಂದ ಕಡಿದಿದ್ದು,ಸಫ್ವನ್ ಅವರ ಬಲ ಪಕ್ಕೆಲುಬು,ಸೊಂಟಕ್ಕೆ ಬಲವಾದ ಗಾಯಗಳಾಗಿದ್ದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು.ಸುಮಾರು ನಾಲ್ಕೈದು ದಿವಸಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಸಫ್ವನ್ ಶನಿವಾರ ಮಧ್ಯಾಹ್ನದ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತನಾಗಿದ್ದಾನೆ.

ಸಫ್ವನ್ ಪಿಲಾರು ಮದರಸದ ಬಳಿ ವಾಸವಾಗಿರುವ ಸಲಾಂ ಮತ್ತು ಶಾಹಿದಾ ದಂಪತಿಗಳ ಮೂರನೇ ಮಗನಾಗಿದ್ದು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು,ಬಿಡುವಿದ್ದ ವೇಳೆ ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತಿದ್ದನೆನ್ನಲಾಗಿದೆ.ಸಫ್ವನ್ ತಂದೆ ಸಲಾಂ ಅವರು ಗುಜರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು ತಾಯಿ ಬೀಡಿ ಕಟ್ಟುವ ಕಾಯಕ ನಡೆಸುತ್ತಿದ್ದಾರೆ. ಬಡ ಕುಟುಂಬವೊಂದು ಬೆಳೆದು ನಿಂತು ದುಡಿದು ಮನೆವಾರ್ತೆ ನೋಡುತ್ತಿದ್ದ ಮಗನನ್ನು ಕಳಕೊಂಡು ದು:ಖತಪ್ತವಾಗಿದೆ.ಮೃತ ಸಫ್ವನ್‌ಗೆ ಮೂವರು ಸಹೋದರರು,ಮೂವರು ಚಿಕ್ಕ ಸಹೋದರಿಯರು ಇದ್ದಾರೆ.

Write A Comment